'ಪಿಕೆ' ವಿರುದ್ಧ ಕಥೆ ಕದ್ದ ಆರೋಪ, ಕೋರ್ಟಿನಿಂದ ನೋಟಿಸ್
ನವದೆಹಲಿ, ಜ.20: ಅಮೀರ್ ಖಾನ್ ಅಭಿನಯದ ರಾಜಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರಕ್ಕೆ ಮತ್ತೆ ವಿವಾದದಲ್ಲಿ ಸಿಲುಕಿದೆ. ಪಿಕೆ ಚಿತ್ರದ ವಿರುದ್ಧದ ದೂರನ್ನು ಹೈಕೋರ್ಟ್ ಇತ್ತೀಚೆಗೆ ತಳ್ಳಿಹಾಕಿತ್ತು. ಆದರೆ, ಕಪಿಲ್ ಹೆಸರಿನ ಕಾದಂಬರಿಕಾರರೊಬ್ಬರು ಪಿಕೆ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ ಹೊರೆಸಿದ್ದಾರೆ. ಅದರೆ, ಬುಧವಾರ ವಿಚಾರಣೆ ನಡೆಸಿದ ಹೈಕೋಟ್ ಚಿತ್ರದ ನಿರ್ಮಾಪಕ ವಿಧು ವಿನೋದ್ ಚೋಪ್ರಾಗೆ ನೋಟಿಸ್ ಜಾರಿ ಮಾಡಿದೆ.
2013ರಲ್ಲಿ ಪ್ರಕಟಗೊಂಡಿರುವ ಫರೀಶ್ತಾ ಹೆಸರಿನ ಕಾದಂಬರಿಯ ಕೆಲ ಭಾಗಗಳನ್ನು ರಾಜಕುಮಾರ್ ಹಿರಾನಿ ಅವರು ಎತ್ತಿದ್ದಾರೆ. ಚಿತ್ರದಲ್ಲಿ ಅದನ್ನು ಕೆಲ ಬದಲಾವಣೆಯೊಂದಿಗೆ ಅಳವಡಿಸಿಕೊಂಡಿದ್ದಾರೆ ಎಂದು ಕಪಿಲ್ ಇಸಾಪುರಿ ಎಂಬ ಲೇಖಕ ಆರೋಪಿಸಿದ್ದಾರೆ. ಇದಕ್ಕೆ ಪರಿಹಾರ ರೂಪವಾಗಿ 1 ಕೋಟಿ ರು ನೀಡುವಂತೆ ಆಗ್ರಹಿಸಿದ್ದಾರೆ. [ಹಿಂದೂಗಳ ಬಗ್ಗೆ ಅವಹೇಳನ, ಪಿಕೆ ನಿಷೇಧಕ್ಕೆ ಆಗ್ರಹ]

ನನ್ನ ಕಾದಂಬರಿಯಲ್ಲಿನ ಪಾತ್ರ, ಸನ್ನಿವೇಶ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಎಲ್ಲವನ್ನು ಕದ್ದಿದ್ದಾರೆ ಎಂದು ನಿರ್ಮಾಪಕ ವಿಧು ವಿನೋದ್ ಛೋಪ್ರಾ, ನಿರ್ದೇಶಕ ರಾಜಕುಮಾರ್ ಹಿರಾನಿ, ಚಿತ್ರಕಥೆಗಾರ ಅಭಿಜಿತ್ ಜೋಶಿ ಹಾಗೂ ಚಿತ್ರ ನಿರ್ಮಾಣ ಸಂಸ್ಥೆ ಮೇಲೆ ಕೃತಿಚೌರ್ಯದ ಆರೋಪ ಹೊರೆಸಲಾಗಿದೆ. [ವಿಮರ್ಶಕ ಕೆಂಗಣ್ಣು ಕೂಡಾ ತಂಪಾಗಿಸಿದ 'ಪಿಕೆ' ಅಮೀರ]
ಫರೀಶ್ತಾ ಕಾದಂಬರಿಯಲ್ಲೂ ಮೂಢನಂಬಿಕೆ, ದೇವರ ಬಗ್ಗೆ ಅಂಧಶ್ರದ್ಧೆ ಉಳ್ಳವರ ಬಣ್ಣ ಬಯಲು ಮಾಡಲಾಗಿದೆ. ಧಾರ್ಮಿಕ ಕೇಂದ್ರಗಳು ವೃತ್ತಿಪರ ಹಣ ವಸೂಲಿ ಅಡ್ಡಾಗಳಾಗಿವೆ. ಇವೆಲ್ಲವೂ ಮಾನವ ನಿರ್ಮಿತ ತೊಡಕುಗಳು, ನಿಮ್ಮ ಜಾತಿ, ಧರ್ಮ ಎಲ್ಲವೂ ನಿಮ್ಮ ಸ್ವಂತದ್ದು, ಸಮೂಹ ಎಂದ ಮೇಲೆ ಎಲ್ಲರೂ ಒಂದೆ ಎಂಬರ್ಥದ ಸನ್ನಿವೇಶಗಳಿವೆ. [ಪಿಕೆ ಚಿತ್ರ ನೋಡುವಾಗ ನಡೆದ ಘಟನೆ!]
ಡಿ.19ರಂದು ತೆರೆ ಕಂಡ ಚಿತ್ರವನ್ನು ಜ.1ರಂದು ನೋಡಿದೆ. ಚಿತ್ರದ ಹಲವು ದೃಶ್ಯಗಳು ನನ್ನ ಫರೀಶ್ತಾ ಕಾದಂಬರಿಯಲ್ಲಿನ ದೃಶ್ಯಗಳನ್ನು ಹೋಲುತ್ತಿತ್ತು. ನನಗೆ ಆಘಾತವಾಯಿತು ನಂತರ ಕಾನೂನು ಮೂಲಕ ಈ ಬಗ್ಗೆ ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಲೇಖಕ ಇಸಾಪುರಿ ಹೇಳಿದ್ದಾರೆ. (ಪಿಟಿಐ)












Click it and Unblock the Notifications