ಪ್ರಾಣಭಿಕ್ಷೆ ಬೇಡಲು ಸುಪ್ರೀಂಕೋರ್ಟ್ ಮೊರೆಗೆ ಮತ್ತೊಬ್ಬ ಅಪರಾಧಿ
ದೆಹಲಿ, ಜನವರಿ.09: ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಮತ್ತೊಬ್ಬ ಅಪರಾಧಿ ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. ಕೋರ್ಟ್ ವಿಧಿಸಿರುವ ಶಿಕ್ಷೆಯಿಂದ ಪ್ರಾಣಭಿಕ್ಷೆ ನೀಡುವಂತೆ ಒಂದೇ ದಿನ ಇಬ್ಬರು ಅಪರಾಧಿಗಳು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಗುರುವಾರ ಬೆಳಗ್ಗೆ ಮೊದಲಿಗೆ ಅಪರಾಧಿ ವಿನಯ್ ಕುಮಾರ್ ಶರ್ಮಾ, ತಮಗೆ ನೀಡಿರುವ ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಅದಾದ ಬಳಿಕ ಸಂಜೆ ವೇಳೆಗೆ ಮತ್ತೊಬ್ಬ ಅಪರಾಧಿ ಮುಕೇಶ್ ಇದೀಗ ಕ್ಷಮಾದಾನವನ್ನು ಕೋರಿ ಕೋರ್ಟ್ ಮೊರೆ ಹೋಗಿದ್ದಾನೆ.
ಪುನರ್ ಪರಿಶೀಲನಾ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಅಪರಾಧಿಗಳು ಸುಪ್ರೀಂಕೋರ್ಟ್ ಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ಯುರೇಟಿವ್ ಅರ್ಜಿಯು ಅಪರಾಧಿಗಳಿಗೆ ಇರುವ ಅಂತಿಮ ಆಯ್ಕೆಯಾಗಿರುತ್ತದೆ. ಒಂದು ವೇಳೆ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದರೆ ರಾಷ್ಟ್ರಪತಿಗಳ ಮುಂದೆ ಮತ್ತೊಮ್ಮೆ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಜನವರಿ.22ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು:
ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಜನವರಿ.22ರಂದು ಗಲ್ಲು ಶಿಕ್ಷೆ ವಿಧಿಸಿ ಎಂದು ದೆಹಲಿ ಪಟಿಯಾಲಾ ಹೌಸ್ ನ್ಯಾಯಾಲಯ ಈಗಾಗಲೇ ಆದೇಶ ನೀಡಿದೆ. ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31)ನ್ನು ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.












Click it and Unblock the Notifications