ಅಣ್ಣಾ ಹಜಾರೆಗೆ ಇವರೇ ಪ್ರಧಾನಿಯಾಗಬೇಕಂತೆ!
ನವದೆಹಲಿ, ಫೆ. 19: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಮತ್ತೊಮ್ಮೆ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ 50 ದಿನಗಳನ್ನೂ ಪೂರೈಸದ ತಮ್ಮ ಅನುಯಾಯಿ ಅರವಿಂದ್ ಕೇಜ್ರಿವಾಲಾ ಬಗ್ಗೆ ಮಾತನಾಡಿರುವ ಅಣ್ಣಾ, ರಾಜಕೀಯ ದುರಾಸೆಗೆ ಕೇಜ್ರಿವಾಲಾ ಬಲಿಯಾದರು ಎಂದು ವಿಷಾದಿಸಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಣ್ಣಾ ಹಜಾರೆ ಅವರು ತಮ್ಮ ಬೆಂಬಲ ಘೋಷಿಸಿದ್ದಾರೆ. ಜತೆಗೆ, ಅವರಲ್ಲಿ ಪ್ರಧಾನಿಯನ್ನೂ ಕಂಡಿದ್ದಾರೆ. ಮಮತಾ ದೀದಿ ದೇಶದ ಮುಂದಿನ ಪ್ರಧಾನಿಯಾಗಲಿಕ್ಕೆ ಅರ್ಹರಾಗಿದ್ದಾರೆ. ಅವರನ್ನು ತಾವು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಅಣ್ಣಾ ಇಂದು ಪ್ರಕಟಿಸಿದ್ದಾರೆ.

ಮಮತಾ ದೀದಿ ಮುಂದೆ ಅಣ್ಣಾ ಹಜಾರೆ ಮುಖ್ಯವಾಗಿ ತನ್ನ 17 ವಿಷಯಗಳನ್ನು ಮಂಡಿಸಿದ್ದಾರೆ. ಮಮತಾ ಅಷ್ಟಕ್ಕೂ ಅಕ್ಕರೆಯಿಂದ ಅಸ್ತು ಅಂದಿದ್ದಾರೆ. ಹಾಗಾಗಿ ಅಣ್ಣಾ, ಮಮತಾಗೆ ಜೈ ಎಂದಿದ್ದಾರೆ.
ಈ ವೇಳೆ, ಮಮತಾರ ಸರಳತೆಗೆ ಮಾರುಹೋದ ಅಣ್ಣಾ ಅವರು 'ಮಮತಾ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಅವರು ಸರಕಾರಿ ಕಾರು, ಬಂಗಲೆಯನ್ನು ಬಳಸುತ್ತಿಲ್ಲ. ಸಂಬಳವನ್ನೂ ಪಡೆಯುತ್ತಿಲ್ಲ. ಇಂದಿನ ದಿನಗಳಲ್ಲಿ ಇದನ್ನೆಲ್ಲಾ ಯಾರು ಪಾಲಿಸುತ್ತಾರೆ?' ಎಂದು ಮಮತಾರತ್ತ ಮೆಚ್ಚುಗೆಯ ನೋಟ ಬೀರಿದ್ದಾರೆ.
ದೇಶಕ್ಕೆ ಬೇಕಾಗಿರುವುದು ಇಂತಹ ನಾಯಕತ್ವ, ಇಂತಹ ನಾಯಕರು' ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹೇಳಿದರು. ಭೂ ಸ್ವಾಧೀನ, ರೀಟೇಲ್ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಮತ್ತು ಕಪ್ಪುಹಣ ಸೇರಿದಂತೆ ದೇಶವನ್ನು ಕಾಡುತ್ತಿರುವ ಒಟ್ಟು 17 ಅಂಶಗಳ ಚಾರ್ಟರ್ ಅನ್ನು ಅಣ್ಣಾ ರಚಿಸಿದ್ದಾರೆ.












Click it and Unblock the Notifications