ಬ್ರೈನ್‌ ಟ್ಯೂಮರ್‌ ಶಂಕೆಯಲ್ಲಿ ಶಸ್ತ್ರ ಚಿಕಿತ್ಸೆ: ಮೆದುಳಿನಲ್ಲಿ ಇದ್ದದ್ದು ಜೀವಂತ ಹಂದಿ ಹುಳ

ತಲೆನೋವಿನಂತಹ ಸಮಸ್ಯೆಗಳನ್ನು ಜನರು ಸಾಮಾನ್ಯವೆಂದು ಹೇಳಿ ನಿರ್ಲಕ್ಷಿಸುವುದೇ ಹೆಚ್ಚು. ಆದರೆ, ಈ ಲಕ್ಷಣಗಳು ಕೆಲವೊಮ್ಮೆ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಸ್ಪೇನ್‌ನ ಒಂದು ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ವ್ಯಕ್ತಿಯೊಬ್ಬರು ಬಹಳ ಸಮಯದಿಂದ ತಲೆನೋವು, ದೃಷ್ಟಿ ಮಂಜಾಗುವುದು ಸೇರಿದಂತೆ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ವೈದ್ಯರನ್ನು ಸಂಪರ್ಕಿಸಿದಾಗ ಮೊದಲಿಗೆ ಬ್ರೈನ್‌ ಟ್ಯೂಮರ್‌ ಇರಬಹುದು ಎನ್ನುವ ಸಂದೇಹವನ್ನು ವ್ಯಕ್ತಪಡಿಸಲಾಗಿತ್ತು. ಹಾಗಾಗಿ ಅವರನ್ನು ಅನೇಕ ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು.

ವಾಸ್ತವವಾಗಿ, ರೋಗಿಯ ಮೆದುಳಿನಲ್ಲಿ ಯಾವುದೇ ಗೆಡ್ಡೆ ಇರಲಿಲ್ಲ. ಬದಲಿಗೆ ಹಂದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ಯಾರಸೈಟ್‌ ಎಂದರೆ ಪರಾವಲಂಬಿ ಜೀವಿಯ ಸೋಂಕು ಅವರಿಗೆ ತಗುಲಿತ್ತು. ಇದೊಂದು ಅಪರೂಪದ ಪ್ರಕರಣವಾಗಿದ್ದರಿಂದ ಇದು ವೈದ್ಯಕೀಯ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿದೆ.

Brain Tumor Scare

ಮೆದುಳಿನ ಕ್ಯಾನ್ಸರ್ ಎನ್ನುವ ಶಂಕೆ:

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, 60 ವರ್ಷದ ಸ್ಪ್ಯಾನಿಷ್ ವ್ಯಕ್ತಿಯೊಬ್ಬರು ಹಲವಾರು ದಿನಗಳಿಂದ ನಿರಂತರ ತಲೆನೋವಿನಿಂದ ಬಳಲುತ್ತಿದ್ದರು. ಅವರ ದೃಷ್ಟಿ ಕ್ರಮೇಣ ಮಸುಕಾಗಲು ಪ್ರಾರಂಭಿಸಿತು. ಅವರು ಆಸ್ಪತ್ರೆಗೆ ಬಂದಾಗ, ವೈದ್ಯರು ಮೆದುಳಿನ ಸ್ಕ್ಯಾನ್ ಮಾಡಿದರು. ಸ್ಕ್ಯಾನ್‌ನಲ್ಲಿ ಮೆದುಳಿನ ಗೆಡ್ಡೆಗಳು ಅಥವಾ ಕ್ಯಾನ್ಸರ್‌ನ ವಿಶಿಷ್ಟವಾದ ಕಲೆಗಳು ಕಂಡುಬಂದವು. ಆರಂಭಿಕ ಪರೀಕ್ಷೆಯ ಆಧಾರದ ಮೇಲೆ, ಕ್ಯಾನ್ಸರ್ ಮೆದುಳಿನ ಇತರ ಭಾಗಗಳಿಗೆ ಹರಡಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಈ ಸುದ್ದಿ ರೋಗಿಗೆ ಮತ್ತು ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟುಮಾಡಿತು.

ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಯಶಸ್ಸು: ಮೃತ ದಾನಿಯ ಅಂಗಾಂಗದಿಂದ ರೋಗಿಗಳಿಗೆ ಹೊಸ ಬದುಕು!
ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಯಶಸ್ಸು: ಮೃತ ದಾನಿಯ ಅಂಗಾಂಗದಿಂದ ರೋಗಿಗಳಿಗೆ ಹೊಸ ಬದುಕು!

ಇಡೀ ಕಥೆಯನ್ನೇ ಬದಲಾಯಿಸಿದ ಹೈ ರೆಸಲ್ಯೂಶನ್ MRI:

ವೈದ್ಯರು ರೋಗದ ಪೂರ್ಣ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ಮುಂದಾದರು. ಆದ್ದರಿಂದ ಅವರು ರೋಗಿಯ ಮೇಲೆ ಹೈ ರೆಸಲ್ಯೂಶನ್ MRI ಪರೀಕ್ಷೆಗೆ ನಿರ್ಧರಿಸಿದರು. ಇಲ್ಲಿಯೇ ಪ್ರಕರಣವು ಹೊಸ ತಿರುವು ಪಡೆದುಕೊಂಡದ್ದು. ಮೆದುಳಿನಲ್ಲಿ ಗಡ್ಡೆ ಬೆಳೆದಿದೆ ಎನ್ನುವ ವೈದ್ಯರ ಸಂದೇಹ ಸುಳ್ಳಾಯಿತು. ಮೆದುಳಿನಲ್ಲಿರುವುದು ಗೆಡ್ಡೆಯಲ್ಲ ಎನ್ನುವುದನ್ನು MRI ವರದಿ ಬಹಿರಂಗಪಡಿಸಿತು. ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಟೇನಿಯಾ ಸೋಲಿಯಮ್ (Taenia solium) ಎಂಬ ಟೇಪ್ ವರ್ಮ್‌ನ ಲಾರ್ವಾಗಳು ಮೆದುಳಿನಲ್ಲಿತ್ತು. ನಂತರ ವೈದ್ಯರು ರೋಗಿಯ ಮೇಲೆ ವಿಶೇಷ ರಕ್ತ ಪರೀಕ್ಷೆಯನ್ನು ನಡೆಸಿದರು. ಆಗ ವ್ಯಕ್ತಿ ನ್ಯೂರೋಸಿಸ್ಟಿಸರ್ಕೋಸಿಸ್ ಎಂಬ ಪರಾವಲಂಬಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.

ಅಷ್ಟಕ್ಕೂ, ಈ ಹುಳು ಮೆದುಳನ್ನು ತಲುಪಿದ್ದು ಹೇಗೆ ?:

ವೈದ್ಯರ ಪ್ರಕಾರ, ಈ ರೋಗವು ಸರಿಯಾಗಿ ಬೇಯಿಸದ ಹಂದಿಮಾಂಸವನ್ನು ತಿನ್ನುವುದರಿಂದ ಮಾತ್ರ ಉಂಟಾಗುತ್ತದೆ ಎನ್ನುವುದು ಹಲವರ ಅನಿಸಿಕೆ. ಆದರೆ ಪ್ರತೀ ಕೇಸ್‌ನಲ್ಲಿ ಹೀಗೆಯೇ ಆಗಬೇಕೆಂದಿಲ್ಲ. ಅಸಲಿಗೆ ಸಣ್ಣ ಟೇಪ್ ವರ್ಮ್ ಮೊಟ್ಟೆಗಳು ಆಹಾರ ಅಥವಾ ಕೊಳಕು ಕೈಗಳ ಮೂಲಕ ಮಾನವ ದೇಹವನ್ನು ಪ್ರವೇಶಿಸಿದರೆ, ಕರುಳಿನಲ್ಲಿ ಲಾರ್ವಾಗಳಾಗಿ ಹೊರಬರುತ್ತವೆ. ಈ ಲಾರ್ವಾಗಳು ರಕ್ತಪ್ರವಾಹದ ಮೂಲಕ ನಂತರ ದೇಹದ ವಿವಿಧ ಭಾಗಗಳಿಗೆ ತಲುಪಬಹುದು. ಹೀಗೆ ಅದು ಮೆದುಳನ್ನು ತಲುಪಿದರೆ, ಅಲ್ಲಿ ಸಣ್ಣ ಚೀಲಗಳನ್ನು ರೂಪಿಸುತ್ತವೆ. ಕಾಲಾನಂತರದಲ್ಲಿ, ಈ ಚೀಲಗಳು ಗಟ್ಟಿಯಾಗಿ ಮೆದುಳಿನ ಮೇಲೆ ಒತ್ತಡವನ್ನು ಬೀರುತ್ತವೆ. ಈ ಸ್ಥಿತಿಯನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯಲಾಗುತ್ತದೆ.

ನೀರಿನಲ್ಲಿ ಮಿದುಳು ತಿನ್ನುವ ಅಮೀಬಾ: ಆರೋಗ್ಯ ಇಲಾಖೆಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ
ನೀರಿನಲ್ಲಿ ಮಿದುಳು ತಿನ್ನುವ ಅಮೀಬಾ: ಆರೋಗ್ಯ ಇಲಾಖೆಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ

ಈ ಲಕ್ಷಣಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ:

ಈ ರೋಗದ ಆರಂಭಿಕ ಲಕ್ಷಣಗಳು ಇತರ ಕಾಯಿಲೆಗಳನ್ನು ಹೋಲುತ್ತವೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಸರಿಯಾದ ಸಮಯದಲ್ಲಿ ರೋಗವನ್ನು ಪತ್ತೆ ಹಚ್ಚುವುದು ಬಹಳ ಮುಖ್ಯ. ಈ ಸೋಂಕಿನ ರೋಗಿಗಳು ನಿರಂತರ ತಲೆನೋವು, ಸೆಳೆತ, ತಲೆತಿರುಗುವಿಕೆ, ತೋಳುಗಳು ಮತ್ತು ಕಾಲುಗಳಲ್ಲಿ ದೌರ್ಬಲ್ಯ, ಸ್ಮರಣಶಕ್ತಿ ನಷ್ಟ, ಮಾತನಾಡುವಾಗ ಸಮಸ್ಯೆ ಮತ್ತು ದೃಷ್ಟಿ ಮಂದವಾಗುವಂಥಹ ಸಮಸ್ಯೆಗಳನ್ನು ಅನುಭವಿಸಬಹುದು. ತಕ್ಷಣ ಚಿಕಿತ್ಸೆ ನೀಡದಿದ್ದರೆ, ಮೆದುಳಿನ ಊತವು ಉಲ್ಬಣಗೊಂಡು ಗಂಭೀರ ಸ್ಥಿತಿಗೆ ಕಾರಣವಾಗಬಹುದು.

ಈ ಕಾಯಿಲೆಗೆ ಚಿಕಿತ್ಸೆ ಸಾಧ್ಯ:

ವೈದ್ಯರು ರೋಗಿಗೆ ಪರಾವಲಂಬಿ ವಿರೋಧಿ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ದೇಹದಲ್ಲಿನ ಪರಾವಲಂಬಿಗಳನ್ನು ಕೊಲ್ಲಲು ಸಹಾಯ ಮಾಡುವ ಔಷಧಿಯನ್ನು ಅವರಿಗೆ ನೀಡಲಾಯಿತು. ಮೆದುಳಿನ ಊತವನ್ನು ಕಡಿಮೆ ಮಾಡಲು ಮತ್ತು ತಲೆನೋವು ಮತ್ತು ಇತರ ರೋಗಲಕ್ಷಣಗಳನ್ನು ನಿಯಂತ್ರಿಸಲು ಅವರಿಗೆ ಇತರ ಔಷಧಿಗಳನ್ನು ಸಹ ನೀಡಲಾಯಿತು. ರೋಗವನ್ನು ಮೊದಲೇ ಪತ್ತೆ ಮಾಡಿದರೆ, ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ಪ್ರತಿಯೊಂದು ಗಂಭೀರ ಕಾಯಿಲೆಯೂ ಕ್ಯಾನ್ಸರ್ ಅಲ್ಲ:

ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ ತೀರ್ಮಾನಗಳಿಗೆ ಬರುವುದು ಸರಿಯಲ್ಲ ಎನ್ನುವುದನ್ನು ಈ ಪ್ರಕರಣವು ಮತ್ತೊಮ್ಮೆ ಸಾಬೀತುಪಡಿಸಿದೆ. ಮೆದುಳಿನ ಕ್ಯಾನ್ಸರ್ ಮತ್ತು ಪರಾವಲಂಬಿ ಸೋಂಕುಗಳಿದ್ದಾಗ ಸ್ಕ್ಯಾನ್‌ಗಳು ಸಾಮಾನ್ಯವಾಗಿ ಒಂದೇ ರೀತಿ ಕಾಣಿಸಬಹುದು. ಆದ್ದರಿಂದ, ವೈದ್ಯರು ಹೆಚ್ಚಾಗಿ ಸ್ಪಷ್ಟ ನಿಲುವಿಗೆ ಬರಲು ಹೈ ರೆಸಲ್ಯೂಶನ್ MRI, ರಕ್ತ ಪರೀಕ್ಷೆಗಳು ಮತ್ತು ಇತರ ಪರೀಕ್ಷೆಗಳನ್ನು ಮಾಡಿಸುತ್ತಾರೆ.

ಪ್ರಪಂಚದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರು ಎದುರಿಸುವ ಸಮಸ್ಯೆ:

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ, ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನರು ಈ ಪರಾವಲಂಬಿ ಸೋಂಕಿನಿಂದ ಬಳಲುತ್ತಿದ್ದಾರೆ. ಏಷ್ಯಾ, ದಕ್ಷಿಣ ಅಮೆರಿಕಾ ಮತ್ತು ಪೂರ್ವ ಯುರೋಪಿನ ಕೆಲವು ಭಾಗಗಳಲ್ಲಿ ಪ್ರಕರಣಗಳು ವಿಶೇಷವಾಗಿ ಪ್ರಚಲಿತವಾಗಿವೆ. ಆದರೆ, ಈ ರೋಗವು ಯುರೋಪಿನಲ್ಲಿ ತುಲನಾತ್ಮಕವಾಗಿ ವಿರಳವಾಗಿದ್ದು, ಅಲ್ಲಿ ಅಂತಹ ಪ್ರಕರಣಗಳನ್ನು ಪತ್ತೆಹಚ್ಚುವುದು ವೈದ್ಯರಿಗೆ ಸವಾಲಿನ ಸಂಗತಿಯಾಗಿದೆ.

ಈ ಹಿಂದೆಯೂ ಬೆಳಕಿಗೆ ಬಂದಿವೆ ಇಂಥಹ ಪ್ರಕರಣ:

ಕಳೆದ ವರ್ಷ, ವೈದ್ಯರು ರೋಗಿಯ ಎಕ್ಸ್-ರೇಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಇದೇ ರೀತಿಯ ಪ್ರಕರಣ ಗಮನ ಸೆಳೆಯಿತು. ಎಕ್ಸ್-ರೇಗಳಲ್ಲಿ ದೇಹದ ವಿವಿಧ ಭಾಗಗಳಲ್ಲಿ ಟೇಪ್ ವರ್ಮ್ ಲಾರ್ವಾಗಳಿರುವುದು ಪತ್ತೆಯಾಗಿತ್ತು. ಆ ಸಮಯದಲ್ಲಿ, ಸೋಂಕು ಕಲುಷಿತ ಆಹಾರ ಅಥವಾ ಸೋಂಕಿತ ಹಂದಿಮಾಂಸದಿಂದ ಉಂಟಾಗಿದೆ ಎಂದೇ ಹೇಳಲಾಗಿತ್ತು.

ಎಚ್ಚರಿಕೆಯೇ ಅತ್ಯುತ್ತಮ ರಕ್ಷಣೆ :

ಅಂತಹ ಸೋಂಕುಗಳನ್ನು ತಪ್ಪಿಸಲು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಯಾವಾಗಲೂ ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸಬೇಕು. ಕೈ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಲುಷಿತ ನೀರು ಅಥವಾ ಅನಾರೋಗ್ಯಕರ ಆಹಾರವನ್ನು ಸೇವಿಸಬಾರದು. ಸ್ಪೇನ್‌ನಲ್ಲಿನ ಈ ಪ್ರಕರಣವು ಪ್ರತಿಯೊಂದು ಗಂಭೀರ ಲಕ್ಷಣವೂ ಕ್ಯಾನ್ಸರೇ ಆಗಿರಬೇಕಿಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ. ಕೆಲವೊಮ್ಮೆ ಸಮಸ್ಯೆಯ ಮೂಲ ಕಾರಣ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಸೂಕ್ತ ಕಾಲದಲ್ಲಿ ನಡೆಸುವ ಪರೀಕ್ಷೆಯು ರೋಗಿಯ ಜೀವವನ್ನು ಉಳಿಸಬಹುದು. ಆದ್ದರಿಂದ, ನಿರಂತರ ತಲೆನೋವು, ಆಗಾಗ ತಲೆತಿರುಗುವುದು ಅಥವಾ ದೃಷ್ಟಿ ಮಂಜಾಗುವ ಲಕ್ಷಣಗಳನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+