ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆಗೆ ಸ್ವಂತ ಮಗನೇ ಗೈರು; ಕಾರಣ ಬಿಚ್ಚಿಟ್ಟ ಅಧಿಕಾರಿಗಳು
ಇರಾನ್‌ನ ದಿವಂಗತ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇಂದಿನಿಂದ ಆರಂಭವಾಗುತ್ತಿವೆ. ಆದರೆ, ಈ ಐತಿಹಾಸಿಕ ಮತ್ತು ಬೃಹತ್ ಕಾರ್ಯಕ್ರಮದಲ್ಲಿ ಅವರ ಮಗ ಹಾಗೂ ಇರಾನ್‌ನ ಪ್ರಸ್ತುತ ಸುಪ್ರೀಂ ಲೀಡರ್ ಆಗಿರುವ ಮೊಜ್ತಬಾ ಖಮೇನಿ ಭಾಗವಹಿಸುವುದು ಅನುಮಾನ ಎನ್ನಲಾಗಿದೆ. ಇಸ್ರೇಲ್‌ನಿಂದ ಇರುವ ತೀವ್ರ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭಾರತದಲ್ಲಿರುವ ಇರಾನ್ ಸುಪ್ರೀಂ ಲೀಡರ್ ಅವರ ಅಧಿಕೃತ ಪ್ರತಿನಿಧಿ ಅಯತೊಲ್ಲಾ ಹಕೀಮ್ ಎಲಾಹಿ ಅವರು ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ತಂದೆಯ ಅಂತ್ಯಕ್ರಿಯೆಗೆ ಮಗ ಬಾರದಿರಲು ಕಾರಣವೇನು?
ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ಹಾಗೂ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಈ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇಸ್ರೇಲ್‌ನ ರಕ್ಷಣಾ ಸಚಿವರು ಇರಾನ್‌ನ ಹೊಸ ನಾಯಕ ಮೊಜ್ತಬಾ ಖಮೇನಿ ಅವರನ್ನು "ಟಾರ್ಗೆಟ್ ಲಿಸ್ಟ್"ನಲ್ಲಿ ಇಟ್ಟಿರುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇರಾನ್‌ನ ಭದ್ರತಾ ಸಂಸ್ಥೆಗಳು ಮೊಜ್ತಬಾ ಅವರ ಸಾರ್ವಜನಿಕ ಭದ್ರತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿವೆ. ತಂದೆಯ ಅಗಲಿಕೆಯಿಂದ ದುಃಖಿತರಾಗಿರುವ ಮೊಜ್ತಬಾ ಅವರು ಸಾರ್ವಜನಿಕವಾಗಿ ಬಂದು ಜನರನ್ನು ಭೇಟಿಯಾಗಲು ಬಯಸಿದ್ದರೂ, ಇಸ್ರೇಲ್‌ನ ನಿರಂತರ ನಿಗಾ ಮತ್ತು ಸಂಭವನೀಯ ದಾಳಿಯ ಮುನ್ಸೂಚನೆ ಇರುವುದರಿಂದ ಅವರು ಕಾರ್ಯಕ್ರಮದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.

5 ದಿನಗಳ ಕಾಲ ಅಂತಿಮ ನಮನ
ಇರಾನ್ ಮಾಧ್ಯಮಗಳ ಪ್ರಕಾರ, ಫೆಬ್ರವರಿಯಲ್ಲಿ ನಡೆದ ವಾಯುದಾಳಿಯಲ್ಲಿ ಮೃತಪಟ್ಟಿದ್ದ ಮಾಜಿ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಇರಾನ್ ಮತ್ತು ಇರಾಕ್‌ನ ಪ್ರಮುಖ ನಗರಗಳಲ್ಲಿ ಜುಲೈ 4ರಿಂದ ಜುಲೈ 9ರವರೆಗೆ ನಡೆಯಲಿದೆ. ಜುಲೈ 4 ಮತ್ತು 5ರಂದು ತೆಹ್ರಾನ್‌ನ ಇಮಾಮ್ ಖೊಮೇನಿ ಗ್ರಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕ ದರ್ಶನ ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 6 ಇರಾನ್ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಬೃಹತ್ ಶೋಕಯಾತ್ರೆ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಜುಲೈ 7ರಂದು ಇರಾನ್‌ನ ಪವಿತ್ರ ನಗರಿ ಕೋಮ್‌ನಲ್ಲಿ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆ ಜರುಗಲಿದೆ. ಜುಲೈ 8ರಂದು ಪಾರ್ಥಿವ ಶರೀರವನ್ನು ಇರಾಕ್‌ನ ನಜಾಫ್ ಮತ್ತು ಕರ್ಬಲಾಗೆ ಕೊಂಡೊಯ್ದು ಅಲ್ಲಿನ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಜುಲೈ 9ರಂದು ಅಂತಿಮವಾಗಿ ಮಶಾದ್ ನಗರದ ಇಮಾಮ್ ರೆಜಾ ಪವಿತ್ರ ದರ್ಗಾದಲ್ಲಿ ದಿವಂಗತ ನಾಯಕರ ಅಂತ್ಯಕ್ರಿಯೆ ಮತ್ತು ದಫನ್ ಕಾರ್ಯ ನೆರವೇರಲಿದೆ.
ಅನುಮತಿ ಕೊಟ್ಟು ಭಾರತದ ಹಡಗಿಗೆ ಇರಾನ್ ಗುಂಡೇಟು ಹೊಡೆದಿದ್ಯಾಕೆ?
ಅಮೆರಿಕಾಗೆ ಇರಾನ್ ಖಡಕ್ ವಾರ್ನಿಂಗ್
ಇತ್ತೀಚೆಗೆ ನಡೆದ ಇಸ್ಲಾಮಾಬಾದ್ ಒಪ್ಪಂದದ ನಿಯಮಗಳನ್ನು ನೆನಪಿಸಿರುವ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ, ಇಸ್ರೇಲ್‌ನ ಇಂತಹ ಬೆದರಿಕೆಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. "ಅಮೆರಿಕ ತನ್ನ ಹಿಡಿತದಲ್ಲಿರುವ ಇಸ್ರೇಲ್ ಅನ್ನು ನಿಯಂತ್ರಣದಲ್ಲಿಡಬೇಕು. ನಮ್ಮ ನಾಯಕರು ಅಥವಾ ಜನರ ಮೇಲೆ ಯಾವುದೇ ರೀತಿಯ ದಾಳಿ ಅಥವಾ ಬೆದರಿಕೆ ಬಂದರೆ ಇರಾನ್ ಅತ್ಯಂತ ಪ್ರಬಲವಾಗಿ ತಿರುಗೇಟು ನೀಡಲಿದೆ" ಎಂದು ಎಚ್ಚರಿಸಿದ್ದಾರೆ.
ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತ ಸೇರಿದಂತೆ ಚೀನಾ, ರಷ್ಯಾ, ಕತಾರ್ ಮತ್ತು ಪಾಕಿಸ್ತಾನದ ಪ್ರಮುಖ ರಾಜತಾಂತ್ರಿಕರು ಹಾಗೂ ನಾಯಕರಿಗೆ ಇರಾನ್ ಅಧಿಕೃತ ಆಹ್ವಾನ ನೀಡಿದೆ. ಭಾರತದ ಪರವಾಗಿ ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರು ತೆಹ್ರಾನ್‌ಗೆ ಪ್ರಯಾಣಿಸಲಿದ್ದಾರೆ.












Click it and Unblock the Notifications