ಕೇರಳದಲ್ಲಿ ಸ್ಫೋಟಕ ಪತ್ತೆ ಕೇಸ್‌ಗೆ ಕರ್ನಾಟಕದ ಲಿಂಕ್: ತಾಳಿಕೋಟೆ ಕಂಪನಿ ವಿರುದ್ಧ NIA ಗಂಭೀರ ಆರೋಪ
ಕೇರಳದಲ್ಲಿ ನಡೆದಿದ್ದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕರ್ನಾಟಕದ ಕನೆಕ್ಷನ್ ಮುನ್ನೆಲೆಗೆ ಬಂದಿದೆ. ಈ ಕೃತ್ಯದ ಹಿಂದೆ ಕರ್ನಾಟಕದ ತಾಳಿಕೋಟೆ ಮೂಲದ ಕಂಪನಿಯೊಂದರ ದೊಡ್ಡ ಕ್ರಿಮಿನಲ್ ಪಿತೂರಿ ಇರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶಂಕೆ ವ್ಯಕ್ತಪಡಿಸಿದೆ. ಈ ಕುರಿತು ಎನ್‌ಐಎ ಅಧಿಕಾರಿಗಳು ಕೇರಳದ ವಿಶೇಷ ನ್ಯಾಯಾಲಯಕ್ಕೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಸುಮಾರು 89,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದ ಈ ಗಂಭೀರ ಪ್ರಕರಣ ದೇಶಾದ್ಯಂತ ತಲ್ಲಣ ಮೂಡಿಸಿತ್ತು.
89 ಸಾವಿರ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಪ್ರಕರಣ
ಕಳೆದ ಫೆಬ್ರವರಿ 7ರಂದು ಕೇರಳದ ಮಲ್ಲಪ್ಪುರಂ ಜಿಲ್ಲೆಯ ತಿರುರಂಗಡಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬರೋಬ್ಬರಿ 89,000 ಜಿಲೆಟಿನ್ ಕಡ್ಡಿಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್‌ಐಎ, ಇದರ ಬೇರುಗಳನ್ನು ಹುಡುಕುತ್ತಾ ಹೊರಟಾಗ ಕರ್ನಾಟಕದ ಲಿಂಕ್ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದ ಕಂಪನಿಯೊಂದು ಈ ಇಡೀ ಕ್ರಿಮಿನಲ್ ಷಡ್ಯಂತ್ರದಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ ಎಂದು ಎನ್‌ಐಎ ಕೋರ್ಟ್‌ಗೆ ತಿಳಿಸಿದೆ.

ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
ಪ್ರಕರಣದಲ್ಲಿ ಎನ್‌ಐಎ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಬಂಧನದ ಭೀತಿಯಲ್ಲಿದ್ದ ಕರ್ನಾಟಕ ಮೂಲದ ಇಬ್ಬರು ಪ್ರಮುಖರು ಮುಂಗಡ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಜಯಪುರದ ಮಹಾಂತಗೌಡ ಬಿರಾದಾರ್ (35 ವರ್ಷ) ಹಾಗೂ ತಾಳಿಕೋಟೆಯ ಬಾಪೂಗೌಡ ಭೀಮರಾಯ ಚೌಧರಿ (47 ವರ್ಷ) ಎಂಬುವವರು ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದ ಗಾಂಭೀರ್ಯತೆ ಮತ್ತು ಎನ್‌ಐಎ ಮಂಡಿಸಿದ ಬಲವಾದ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯವು ಇಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಈ ಸ್ಫೋಟಕ ಜಾಲದ ಹಿಂದೆ ಬೇರೆ ಯಾರಿದ್ದಾರೆ? ಇಷ್ಟೊಂದು ದೊಡ್ಡ ಪ್ರಮಾಣದ ಜಿಲೆಟಿನ್ ಕಡ್ಡಿಗಳನ್ನು ತಾಳಿಕೋಟೆಯ ಕಂಪನಿಯಿಂದ ಕೇರಳಕ್ಕೆ ಸಾಗಿಸಿದ್ದರ ಅಸಲಿ ಉದ್ದೇಶವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಈರುಳ್ಳಿ ಚೀಲದಡಿ ಅಡಗಿಸಿಟ್ಟಿದ್ದ ಕರಾಳ ದಂಧೆ
ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ತಿರುರಂಗಡಿ ಸ್ಥಳೀಯ ಪೊಲೀಸರು ಕೈಗೆತ್ತಿಕೊಂಡಿದ್ದರು. ನಂತರ ಎನ್‌ಐಎ ಈ ಕೇಸ್ ಅನ್ನು ತನ್ನ ಸುಪರ್ದಿಗೆ ಪಡೆಯಿತು. ತನಿಖೆಯ ವೇಳೆ ಬಯಲಾದ ಸತ್ಯಗಳು ಬೆಚ್ಚಿಬೀಳಿಸುವಂತಿದ್ದವು. ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಈ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಈರುಳ್ಳಿ ಚೀಲಗಳ ಅಡಿಯಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳಾದ ಮಹಾಂತಗೌಡ ಮತ್ತು ಬಾಪೂಗೌಡ, "ನಮ್ಮ ಕಂಪನಿಯಾದ ಚೇತನ್ ಎಂಟರ್‌ಪ್ರೈಸಸ್‌ಗೆ ಸ್ಫೋಟಕಗಳನ್ನು ಸಂಗ್ರಹಿಸಿಡಲು ಸರ್ಕಾರದ ಕಡೆಯಿಂದ ಕಾನೂನುಬದ್ಧ ಲೈಸೆನ್ಸ್ ಇದೆ ಮತ್ತು ಎಲ್ಲ ಸರಿಯಾದ ದಾಖಲೆಗಳೂ ಇವೆ. ಎನ್‌ಐಎ ನಮ್ಮ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದಾಗ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ" ಎಂದು ಜಾಮೀನು ಕೋರಿದ್ದರು.
ಆರೋಪಿಗಳ ವಾದವನ್ನು ಸಂಪೂರ್ಣವಾಗಿ ಹರಿದುಹಾಕಿದ ಎನ್‌ಐಎ ಪರ ವಕೀಲರು, ಕೋರ್ಟ್ ಮುಂದೆ ಸಾಕ್ಷ್ಯಗಳ ಸುರಿಮಳೆಯನ್ನೇ ಸುರಿಸಿದರು. ತಾಳಿಕೋಟೆಯ ಈ ಉದ್ಯಮಿಗಳು ಸ್ಫೋಟಕಗಳು ತಮ್ಮ ಕೈಸೇರಿದ ತಕ್ಷಣ, ಆ ಪ್ಯಾಕೇಜ್‌ಗಳ ಮೇಲಿದ್ದ ಅಧಿಕೃತ ಬಾರ್‌ಕೋಡ್ ಲೇಬಲ್‌ಗಳನ್ನು ಉದ್ದೇಶಪೂರ್ವಕವಾಗಿ ಕಿತ್ತುಹಾಕಿ, ನಾಶಪಡಿಸಿದ್ದರು. ಸ್ಫೋಟಕಗಳು ಎಲ್ಲಿಂದ ಬಂದವು, ಅದರ ಮಾಲೀಕರು ಯಾರು ಮತ್ತು ಅದರ ಚಲನವಲನವನ್ನು ಮರೆಮಾಚುವ ಏಕೈಕ ಉದ್ದೇಶದಿಂದ ಈ ತಂತ್ರ ಹೂಡಲಾಗಿತ್ತು. ಈ ಸ್ಫೋಟಕಗಳನ್ನು ನಿಯಮಾವಳಿಗಳ ಪ್ರಕಾರ ಯಾವುದೇ ಲೇಬಲ್ ಇಲ್ಲದೆ, ಈ ಪ್ರಕರಣದ ಮೊದಲ ಆರೋಪಿಯಾದ ಮುಹಮ್ಮದ್ ಸಲೀಂ ಮತ್ತು ಇತರ ಕಾನೂನುಬಾಹಿರ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿತ್ತು.
ಇಷ್ಟೊಂದು ಬೃಹತ್ ಪ್ರಮಾಣದ ಸ್ಫೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಸಾಗಾಟ ಮಾಡಿರುವುದು ದೇಶದ ಕಾನೂನು ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ನೇರ ಕುತ್ತು ತಂದಿದೆ ಎಂದು ಎನ್‌ಐಎ ವಾದಿಸಿತು. ಆರೋಪಿಗಳು ಜಿಎಸ್‌ಟಿ ಇ-ವೇ ಬಿಲ್ ಅನ್ನು ಹಾಜರುಪಡಿಸಲು ವಿಫಲರಾಗಿರುವುದು, ಅವರು ಈ ಅಪಾಯಕಾರಿ ಸ್ಫೋಟಕಗಳನ್ನು ಯಾವುದೇ ಬಿಲ್ ಇಲ್ಲದೆ ಅನಧಿಕೃತ ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಿಯಮಗಳಿಗೆ ವಿರುದ್ಧವಾಗಿ, ಯಾವುದೇ ಲೇಬಲ್ ಇಲ್ಲದೆ ಈರುಳ್ಳಿ ಚೀಲಗಳ ಅಡಿಯಲ್ಲಿ ಇವುಗಳನ್ನು ಅಡಗಿಸಿಟ್ಟಿರುವುದನ್ನು ನೋಡಿದರೆ ಇವರು ಕಾನೂನುಬಾಹಿರ ದಂಧೆ ನಡೆಸಿರುವುದು ಮೇಲ್ನೋಟಕ್ಕೇ ದೃಢಪಡುತ್ತದೆ ಎಂದು ಹೇಳಿದ ನ್ಯಾಯಾಲಯವು ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.













Click it and Unblock the Notifications