ರಾಜ್ಯದಲ್ಲಿ ಆರಂಭಕ್ಕೂ ಮುನ್ನವೇ ಅಂತ್ಯವಾಗಲಿದೆಯೇ ಮಹತ್ವಾಕಾಂಕ್ಷೆಯ 'ಇಂದಿರಾ ಕಿಟ್' ಯೋಜನೆ?
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹಾಗೂ ಬಡವರ ಪಾಲಿನ ಆಶಾಕಿರಣ ಎಂದು ಹೇಳುವ 'ಇಂದಿರಾ ಕಿಟ್ ಯೋಜನೆ' ಆರಂಭಕ್ಕೂ ಮುನ್ನವೇ ಹಳ್ಳ ಹಿಡಿಯುವ ಲಕ್ಷಣಗಳು ಹೆಚ್ಚಿವೆ. ರಾಜ್ಯದ ಲಕ್ಷಾಂತರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಅಕ್ಕಿಯ ಬದಲಾಗಿ ದಿನಬಳಕೆಯ ಅಗತ್ಯ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ವಿತರಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿತ್ತು.
ಆದರೆ, ಈಗ ಎದುರಾಗಿರುವ ಸಾಲು ಸಾಲು ಸವಾಲುಗಳು ಹಾಗೂ ಆಡಳಿತಾತ್ಮಕ ತೊಡಕುಗಳಿಂದಾಗಿ ಈ ಯೋಜನೆಯನ್ನು ಕೈಬಿಡುವ ಆಲೋಚನೆಗೆ ಸರ್ಕಾರ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಏನಿದು ಈ ಇಂದಿರಾ ಕಿಟ್ ಪ್ಲ್ಯಾನ್?
ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡುವ ಬದಲು, ಕುಟುಂಬದ ಆರೋಗ್ಯ ಮತ್ತು ಪೋಷಣೆಯನ್ನು ಗಮನದಲ್ಲಿಟ್ಟುಕೊಂಡು 'ಇಂದಿರಾ ಕಿಟ್' ನೀಡಲು ತೀರ್ಮಾನಿಸಲಾಗಿತ್ತು. ಈ ಕಿಟ್‌ನಲ್ಲಿ ಉತ್ತಮ ಗುಣಮಟ್ಟದ ತೊಗರಿಬೇಳೆ, ಅಡುಗೆ ಎಣ್ಣೆ, ಅಯೋಡಿನ್ ಯುಕ್ತ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿದ್ಧತೆ ನಡೆಸಿತ್ತು.
ಇಡೀ ರಾಜ್ಯದ 31 ಜಿಲ್ಲೆಗಳನ್ನು ಐದು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ, ಸುಗಮ ವಿತರಣೆಗೆ ನೀಲಿನಕ್ಷೆ ಸಿದ್ಧಪಡಿಸಲಾಗಿತ್ತು. ಆರಂಭಿಕ ಹಂತದಲ್ಲಿ ಎಲ್ಲವೂ ಅಂದುಕೊಂಡಂತೆಯೇ ಸಾಗಿದ್ದರೂ, ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಯೋಜನೆಯ ದಿಕ್ಕು ತಪ್ಪಲಾರಂಭಿಸಿತು.
ಆಹಾರ ಪದಾರ್ಥಗಳ ಪೂರೈಕೆಗಾಗಿ ನಿಗಮವು ಕರೆದಿದ್ದ ಬೃಹತ್ ಟೆಂಡರ್‌ನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿ ಬಿಡ್ ಮಾಡಿದ್ದವು. ಆದರೆ, ಇಲ್ಲಿಂದಲೇ ಅಸಲಿ ಆಟ ಶುರುವಾಯಿತು ನೋಡಿ. ತಮಗೆ ಬೇಕಾದ ಹಾಗೂ ಆಪ್ತ ಕಂಪನಿಗಳಿಗೆ ಟೆಂಡರ್ ಒಲಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಭಾರೀ ಲಾಬಿ ನಡೆಯಿತು ಎಂಬ ಆರೋಪಗಳು ಕೇಳಿಬಂದವು. ನಿಯಮಗಳನ್ನು ಗಾಳಿಗೆ ತೂರಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಬೇಸರಗೊಂಡ ಕೆಲವು ಬಿಡ್‌ದಾರರು ನ್ಯಾಯಾಲಯದ ಕದ ತಟ್ಟಲು ಮುಂದಾದರು.
ಇದರಿಂದಾಗಿ ಇಡೀ ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಕಳೆದ ಎಳೆಂಟು ತಿಂಗಳುಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಷರತ್ತುಗಳನ್ನು ಸಡಿಲಗೊಳಿಸಿ ಮರು ಟೆಂಡರ್ ಕರೆಯುವುದಾಗಿ ಅಧಿಕಾರಿಗಳು ಹೇಳುತ್ತಿದ್ದರೂ, ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ಈ ಕಿಟ್ ಸಿಗುವ ಭರವಸೆ ಬಹುತೇಕ ಹುಸಿಯಾಗಿದೆ.
ಕರ್ನಾಟಕ ಸರ್ಕಾರದ ಮುಂದಿರುವ ಸವಾಲುಗಳು
ಟೆಂಡರ್ ವಿವಾದ ಮಾತ್ರವಲ್ಲದೆ, ಭೌತಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸುವುದು ಕರ್ನಾಟಕ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಿದೆ. ಪ್ರತಿ ತಿಂಗಳು ರಾಜ್ಯದ ಕುಟುಂಬಗಳಿಗೆ ಬರೋಬ್ಬರಿ 1.25 ಕೋಟಿ ಪಡಿತರ ಚೀಟಿಗಳಿಗೆ ಕಿಟ್ ತಲುಪಿಸಬೇಕು. ಇದಕ್ಕಾಗಿ ಅಂದಾಜು 57,521 ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ಶೇಖರಿಸಿ, ಗೋಡೌನ್‌ಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಾಗಿಸುವುದು ಅತಿ ದೊಡ್ಡ ಸವಾಲು. ಇದಲ್ಲದೆ, ಪ್ರತಿಯೊಬ್ಬ ಸದಸ್ಯರ ಲೆಕ್ಕದಲ್ಲಿ ಆಹಾರಧಾನ್ಯಗಳನ್ನು ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡುವುದಕ್ಕೆ ಅಪಾರ ಸಮಯ ಮತ್ತು ಬೃಹತ್ ಗಾತ್ರದ ಗೋದಾಮುಗಳ ಅಗತ್ಯವಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯ ಕಟ್ಟುನಿಟ್ಟಿನ ನಿಯಮಗಳ ಅನ್ವಯ ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ಮುಂತಾದವುಗಳನ್ನು ಪ್ರತ್ಯೇಕವಾಗಿ ಖರೀದಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಜೊತೆಗೆ, ಆಹಾರ ಪದಾರ್ಥಗಳ ದುರ್ಬಳಕೆ ತಡೆಯಲು ಮತ್ತು ಕಾಳಸಂತೆಕೋರರಿಗೆ ಕಡಿವಾಣ ಹಾಕಲು ಪ್ರತಿ ಕಿಟ್ ಮೇಲೆ ಕ್ಯೂ.ಆರ್ ಕೋಡ್ ಅಳವಡಿಸುವ ತಾಂತ್ರಿಕ ಪ್ರಕ್ರಿಯೆಯೂ ವಿಳಂಬಕ್ಕೆ ಕಾರಣವಾಗಿದೆ.
ಈ ಎಲ್ಲ ಆರ್ಥಿಕ ಹೊರೆ, ಕಾನೂನು ತೊಡಕುಗಳು ಹಾಗೂ ಪೂರೈಕೆ ಸರಣಿಯ ಸವಾಲುಗಳನ್ನು ಅರಿತಿರುವ ಆಹಾರ ಇಲಾಖೆಯು, ಸದ್ಯಕ್ಕೆ ಇಂದಿರಾ ಕಿಟ್ ವಿತರಣೆಯ ಪ್ರಸ್ತಾಪವನ್ನು ಕೈಬಿಟ್ಟು, ಎಂದಿನಂತೆ ಕೇವಲ ಅಕ್ಕಿಯನ್ನೇ ಮುಂದುವರಿಸಲು ನಿರ್ಧರಿಸಿದೆ. ಒಟ್ಟಿನಲ್ಲಿ, ಬಡವರ ಮನೆಗೆ ಬರಬೇಕಿದ್ದ ಪೋಷಕಾಂಶಗಳ ಕಿಟ್, ಆಡಳಿತಾತ್ಮಕ ಕಡತಗಳಲ್ಲೇ ಕಮರಿಹೋಗುವ ಹಂತ ತಲುಪಿದೆ.














Click it and Unblock the Notifications