ತಲೆಮರೆಸಿಕೊಂಡಿದ್ದ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಭಾರತಕ್ಕೆ
ನವದೆಹಲಿ, ಡಿಸೆಂಬರ್ 04: ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಎನ್ನಲಾಗಿರುವ ಇಟಲಿಯ ಉದ್ಯಮಿ ಕ್ರಿಸ್ಟಿಯನ್ ಮೈಕಲ್ ನನ್ನು ಇಂದು ದುಬೈನಿಂದ ಭಾರತಕ್ಕೆ ಕರೆತರಲಾಗುತ್ತಿದೆ.
ಆಗಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಸಿಬಿಐಗೆ ಬೇಕಾಗಿದ್ದ ಕ್ರಿಸ್ಟಿಯನ್ ಮೈಕಲ್ ದುಬೈನಲ್ಲಿ ತಲೆಮರೆಸಿಕೊಂಡಿದ್ದ. ಈಗ ಆತನನ್ನು ದೆಹಲಿಗೆ ಕರೆತರಲಾಗುತ್ತಿದ್ದು, ಆಗಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ.
ಕ್ರಿಸ್ಟಿಯನ್ ಮೈಕಲ್‌ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತವು ದುಬೈ ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಇತ್ತು. ಅದರಂತೆ ಅಲ್ಲಿನ ಸರ್ಕಾರ ಸಹ ಒಪ್ಪಿಗೆ ನೀಡಿತ್ತು. ಇದನ್ನು ಪ್ರಶ್ನಿಸಿ ಮೈಕಲ್ ದುಬೈನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿ ತಿರಸ್ಕೃತಗೊಂಡಿದೆ.

ಇಂದು ರಾತ್ರಿ 10:30 ಕ್ಕೆ ಕ್ರಿಸ್ಟಿಯನ್ ಮೈಕಲ್‌ನನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಕ್ರಿಸ್ಟಿಯನ್‌ನ ಗಡಿಪಾರು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು ಎಂದೇ ಕರೆಯಲಾಗುತ್ತಿದೆ.
3500 ಕೋಟಿ ರೂಪಾಯಿಯ ದೊಡ್ಡ ಹಗರಣ ಇದು ಎನ್ನಲಾಗಿದ್ದು, 2007 ರಲ್ಲಿ ಆಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಖರೀದಿಸಿಸಲು ಅಂದಿನ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದಕ್ಕಾಗಿ ಲಂಚ ನೀಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದ ನಂತರ ಒಪ್ಪಂದ ರದ್ದು ಮಾಡಲಾಗಿತ್ತು.
ಇದೇ ಪ್ರಕರಣವಾಗಿ ವಾಯುಪಡೆ ಮುಖ್ಯಸ್ಥ ಎಸ್‌ಪಿ ತ್ಯಾಗಿ ಅವರ ಬಂದನ ಸಹ ಮಾಡಲಾಗಿತ್ತು. ಇದೇ ಹಗರಣದಲ್ಲಿ ಯುಪಿಎ ಅವಧಿಯ ದೊಡ್ಡ-ದೊಡ್ಡ ರಾಜಕಾರಣಿಗಳ ಹೆಸರುಗಳು ಸಹ ತಳುಕು ಹಾಕಿಕೊಂಡಿತ್ತು.












Click it and Unblock the Notifications