Free Booster Dose : ದೆಹಲಿಯಲ್ಲಿ ಬೂಸ್ಟರ್ ಡೋಸ್ ಲಸಿಕೆ ಉಚಿತ
ನವದೆಹಲಿ, ಏಪ್ರಿಲ್ 21: ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಹೆಚ್ಚುತ್ತಿರುವುದರ ಮಧ್ಯೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಘೋಷಿಸಿದೆ.
ದೆಹಲಿ ಸರ್ಕಾರದಡಿಯ ಎಲ್ಲಾ ಆಸ್ಪತ್ರೆಗಳಲ್ಲೂ 18 ರಿಂದ 59 ವರ್ಷದೊಳಗಿನ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಲಸಿಕೆಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.
ಕಳೆದೊಂದು ವಾರದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಮಿತಮೀರಿ ಬೆಳೆಯುತ್ತಿದೆ. ವಾರದ ಹಿಂದೆಯಷ್ಟೇ 100ರ ಆಸುಪಾಸಿನಲ್ಲಿದ್ದ ಸಂಖ್ಯೆಯು ಬುಧವಾರದ ವೇಳೆ 1000ದ ಗಡಿ ದಾಟಿದೆ. ಬುಧವಾರವೊಂದೇ ದಿನ ದೆಹಲಿಯಲ್ಲಿ 1009 ಮಂದಿಗೆ ಸೋಂಕು ತಗುಲಿರುವುದು ಪಕ್ಕಾ ಆಗಿದೆ.

ನವದೆಹಲಿಯಲ್ಲಿ ಕೊರೊನಾವೈರಸ್ 9 ಪ್ರಬೇಧ ಭೀತಿ
ದೆಹಲಿಯಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುವುದಕ್ಕೆ ಓಮಿಕ್ರಾನ್ ಹಾಗೂ ಅದರ 9 ಉಪ ಪ್ರಬೇಧಗಳೇ ಮುಖ್ಯ ಕಾರಣ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಏಪ್ರಿಲ್ 21ರಂದು ನಡೆಸಿದ ಕೊರೊನಾವೈರಸ್ ಸೋಂಕಿನ ಮಾದರಿ ಪರೀಕ್ಷೆ ವೇಳೆ ಬಿಎ.2.12.1 ಪ್ರಬೇಧ ಸೇರಿದಂತೆ ಓಮಿಕ್ರಾನ್ ರೂಪಾಂತರಿಗೆ ಸಂಬಂಧಿಸಿದ ಇತರೆ ಎಂಟು ತಳಿಗಳು ಪತ್ತೆಯಾಗಿವೆ. ಮಾದರಿಯ ಜೀನೋಮ್ ಸೀಕ್ವೆನ್ಸಿಂಗ್ ಅಧ್ಯಯನದ ನಂತರ ಫಲಿತಾಂಶ ಹೊರ ಬಿದ್ದಿದೆ. ಕಳೆದ ಫೆಬ್ರವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಓಮಿಕ್ರಾನ್‌ನ BA.2 ಉಪ-ರೂಪಾಂತರವು BA.1 ತಳಿಗಿಂತಲೂ ಹೆಚ್ಚು ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿತ್ತು. ಆದಾಗ್ಯೂ, ಇದು ಮೂಲ ರೋಗಾಣುವಿಗಿಂತ ಹೆಚ್ಚಾ ಅಪಾಯಕಾರಿ ಅಲ್ಲದ ಕಾರಣಕ್ಕೆ ಯಾವುದೇ ರೀತಿ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿತ್ತು.

ಮಾಸ್ಕ್ ಧರಿಸದಿದ್ದರೆ 500 ರೂಪಾಯಿ ದಂಡ ವಿಧಿಸಲಾಗುವುದು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ನವದೆಹಲಿಯಲ್ಲಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು. ಸರ್ಕಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಯಾರು ಬೂಸ್ಟರ್ ಡೋಸ್ ಪಡೆಯಲು ಅರ್ಹರು?
ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಘೋಷಿಸಿದೆ. ಆದರೆ 18 ವರ್ಷ ಮೇಲ್ಪಟ್ಟ ನೀವು ಎರಡನೇ ಡೋಸ್ ಲಸಿಕೆಯನ್ನು ಪಡೆದು 9 ತಿಂಗಳು ಕಳೆದಿದ್ದರೆ ಮಾತ್ರ, ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತೀರಿ.

ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ಬೆಲೆ ಎಷ್ಟು?
ದೇಶದ ಖಾಸಗಿ ಕೋವಿಡ್-19 ಲಸಿಕೆ ಕೇಂದ್ರದಲ್ಲಿ ಕೋವಿಶೀಲ್ಡ್ ಬೂಸ್ಟರ್ ಲಸಿಕೆ ಒಂದು ಡೋಸ್ ದರವನ್ನು 600 ರೂಪಾಯಿ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ದರವನ್ನು 1200 ರೂಪಾಯಿಯಿಂದ 225 ರೂಪಾಯಿಗೆ ಕಡಿತಗೊಳಿಸಲಾಗಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಲ್ಲಾ ಮತ್ತು ಭಾರತ್ ಬಯೋಟೆಕ್ ಸಹ-ಸಂಸ್ಥಾಪಕಿ ಸುಚಿತ್ರಾ ಎಲಾ ಅವರು ಕೇಂದ್ರ ಸರ್ಕಾರದ ಜೊತೆ ನಡೆಸಿದ ಚರ್ಚೆಯ ನಂತರ ಟ್ವಿಟರ್‌ನಲ್ಲಿ ಬೆಲೆ ಕಡಿತದ ಬಗ್ಗೆ ಘೋಷಿಸಿದ್ದಾರೆ. ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರದಿಂದ ಬೂಸ್ಟರ್ ಡೋಸ್ ಲಸಿಕೆ ಲಭ್ಯವಾಗಲಿದೆ.












Click it and Unblock the Notifications