ಯುಪಿ ಸಚಿವ ಸಂಪುಟ ರಚನೆಗೂ ಮುನ್ನ ಮೋದಿ-ಯೋಗಿ ಭೇಟಿ
ಲಕ್ನೋ ಮಾರ್ಚ್ 13: ಉತ್ತರ ಪ್ರದೇಶದಲ್ಲಿ ಚುನಾವಣಾ ಫಲಿತಾಂಶದ ನಂತರ ಸರ್ಕಾರ ರಚನೆಗೂ ಮುನ್ನ ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕತ್ವದೊಂದಿಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕಗಳ ಜೊತೆಗೆ ಬಿಜೆಪಿಯ ಉನ್ನತ ಅಧಿಕಾರಿಗಳೊಂದಿಗೆ ಅವರು ಹೊಸ ಸಚಿವ ಸಂಪುಟದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ದೆಹಲಿ ಪ್ರವಾಸದ ವೇಳೆ ಸಿಎಂ ಯೋಗಿ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಲಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಮುನ್ನ ಯೋಗಿ ಆದಿತ್ಯನಾಥ್ ಶುಕ್ರವಾರ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ವರದಿಗಳ ಪ್ರಕಾರ, ಹೋಳಿ ನಂತರ ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಉತ್ತರ ಪ್ರದೇಶದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಕಳೆದ 37 ವರ್ಷಗಳಲ್ಲಿ ರಾಜ್ಯದಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಿ ನಂತರ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವಿನ ನಂತರ ಆದಿತ್ಯನಾಥ್ ಶುಕ್ರವಾರ ಲಕ್ನೋದ ಪಕ್ಷದ ಕಚೇರಿಯಲ್ಲಿ ತಮ್ಮ ಸಚಿವ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದರು. ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೋರಖ್‌ಪುರ ನಗರ ಕ್ಷೇತ್ರದಿಂದ 1,03,390 ಅಂತರದಿಂದ ಗೆದ್ದಿದ್ದಾರೆ. ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಅವರು 62,109 ಮತಗಳನ್ನು ಗಳಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಭಾವತಿ ಉಪೇಂದ್ರ ದತ್ ಶುಕ್ಲಾ ಅವರನ್ನು ಸೋಲಿಸಿದರು.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಅಭ್ಯರ್ಥಿಯು ತನ್ನ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕನಿಷ್ಠ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯಲು ವಿಫಲವಾದರೆ, ಅವರ ಭದ್ರತಾ ಠೇವಣಿ ಮುಟ್ಟುಗೋಲು ಹಾಕಲಾಗುತ್ತದೆ. ಯುಪಿ ಚುನಾವಣೆಯಲ್ಲಿ ಒಟ್ಟು 4442 ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು, ಈ ಪೈಕಿ 3522 ಅಭ್ಯರ್ಥಿಗಳು ಅಂದರೆ 80 ಪ್ರತಿಶತದಷ್ಟು ಜನರು ತಮ್ಮ ಭದ್ರತಾ ಠೇವಣಿ ಉಳಿಸಲು ಸಾಧ್ಯವಾಗಲಿಲ್ಲ.
ಉತ್ತರಪ್ರದೇಶದಲ್ಲಿ ಕಳೆದ 37 ವರ್ಷಗಳಲ್ಲಿ ಯಾವುದೇ ಸರ್ಕಾರ ಸಾಧಿಸದ ಐತಿಹಾಸಿಕ ಸಾಧನೆಯನ್ನು ಈ ಬಾರಿ ಬಿಜೆಪಿ ಮಾಡಿದೆ. ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೆ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದೆ. ಬಿಜೆಪಿಯ ಈ ಗೆಲುವಿನ ಹಿಂದೆ ಕಳೆದ ಎರಡು ವರ್ಷಗಳಿಂದ ನೀಡಿದ ಉಚಿತ ಪಡಿತರ ಮತ್ತು ಹಿಂದೆ ಕ್ರೋಢೀಕರಿಸಿದ ಮಹಿಳಾ ಮತದಾರರು ಜೊತೆಗೆ ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ ಇದೆ ಎಂಬುದು ಸ್ಪಷ್ಟವಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮಹಿಳಾ ಮತದಾರರೇ ಕಾರಣ ಎನ್ನಲಾಗುತ್ತಿದೆ.
ಹೆಚ್ಚಿನ ಶೇಕಡಾವಾರು ಮಹಿಳಾ ಮತದಾರರು ಪಡಿತರವನ್ನು ಕಳುಹಿಸಿದ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಇದರ ಮುಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೀಡಿದ ಉಚಿತ ವಿದ್ಯುತ್ ಭರವಸೆ ಕೂಡ ಮಹಿಳಾ ಮತದಾರರನ್ನು ಎಸ್‌ಪಿ ಪಾಳೆಯಕ್ಕೆ ಸೆಳೆಯಲು ಸಾಧ್ಯವಾಗಲಿಲ್ಲ.
ಯುಪಿ ಚುನಾವಣೆಯಲ್ಲಿ ಎಸ್‌ಪಿ ಮೈತ್ರಿಕೂಟದ ಸೋಲಿನ ಬಗ್ಗೆ ಪರಾಮರ್ಶಿಸಬೇಕು ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಜಸ್ವಂತ್ ನಗರದ ಶಾಸಕ ಶಿವಪಾಲ್ ಸಿಂಗ್ ಯಾದವ್ ಹೇಳಿದ್ದಾರೆ. ಎಲ್ಲೋ ಒಂದು ಕಡೆ ಲೋಪಗಳಾಗಿವೆ, ಇದರಿಂದ ಎಸ್‌ಪಿ ಮೈತ್ರಿಗೆ ಗೆಲುವು ಸಿಗಲಿಲ್ಲ ಎಂದು ಶಿವಪಾಲ್ ಹೇಳಿದ್ದಾರೆ. ಲೋಪದೋಷಗಳನ್ನು ಪರಾಮರ್ಶಿಸಿ ಆಲೋಚಿಸಬೇಕು ಎಂದರು.












Click it and Unblock the Notifications