ಶೂನಲ್ಲಿ 2 ಕೇಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಫ್ಘನ್ ವ್ಯಕ್ತಿ ಕಸ್ಟಮ್ಸ್ ಬಲೆಗೆ
ನವದೆಹಲಿ, ಸೆಪ್ಟೆಂಬರ್ 12: 73 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಅಫ್ಘಾನಿಸ್ತಾನದ ವ್ಯಕ್ತಿಯನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತ ತನ್ನ ಶೂನಲ್ಲಿ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದ್ದ ಎಂದು ಸೀಮಾಸುಂಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಪ್ರಯಾಣಿಕ ಕಾಬೂಲ್ ನಿಂದ ಹೊರಟು ಮಂಗಳವಾರ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ಕ್ಕೆ ಬಂದಿದ್ದ. ಆತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಎರಡು ಚಿನ್ನದ ಬಾರ್ ಗಳು 2,019 ಗ್ರಾಮ್ ತೂಕ ಇದ್ದದ್ದು ಆತನ ಶೂ ಒಳಗೆ ಪತ್ತೆಯಾಗಿತ್ತು. ಅದರ ಮೌಲ್ಯ 72.90 ಲಕ್ಷ ಎಂದು ನಿರ್ಧರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಅಫ್ಘಾನಿಸ್ತಾನದ ವ್ಯಕ್ತಿಯನ್ನು ಬಂಧಿಸಿದ್ದು, ಆತನ ವಿರುದ್ಧ ಸೀಮಾ ಸುಂಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications