ದೆಹಲಿಯ ತಿಹಾರ್ ಜೈಲಿನಲ್ಲೇ ನೇಣು ಬಿಗಿದುಕೊಂಡ ಕೈದಿ
ನವದೆಹಲಿ, ಫೆಬ್ರವರಿ.07: ರಾಷ್ಟ್ರ ರಾಜಧಾನಿಯ ಕೇಂದ್ರ ಕಾರಾಗೃಹದಲ್ಲೇ ವಿಚಾರಣಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ದೆಹಲಿಯ ತಿಹಾರ್ ಜೈಲಿನಲ್ಲಿ ಇಂಥದೊಂದು ಘಟನೆ ನಡೆದಿದೆ.
ಕಳ್ಳತನ ಆರೋಪದ ಅಡಿ ಗಗನ್ ಎಂಬ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟ್ ಸೂಚನೆಯಂತೆ ವಿಚಾರಣಾಧೀನ ಕೈದಿ ಗಗನ್ ನನ್ನು ದೆಹಲಿಯ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 3ರಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿತ್ತು.
ಶುಕ್ರವಾರ ಬೆಳಗ್ಗೆ ಜೈಲಿನ ಶೌಚಾಲಯಕ್ಕೆ ತೆರಳಿದ್ದ ವಿಚಾರಣಾಧೀನ ಕೈದಿ ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಕೈದಿಯನ್ನು ಕಾರಾಗೃಹದ ಆಸ್ಪತ್ರೆಗೆ ರವಾನಿಸಿದರು. ಆದರೆ, ಅಷ್ಟೊತ್ತಿಗಾಗಲೇ ಕೈದಿ ಪ್ರಾಣ ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ.

ಕುಟುಂಬಕ್ಕೆ ಮೃತದೇಹ ಹಸ್ತಾಂತರ:
ದೆಹಲಿಯ ತಿಹಾರ್ ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ವಿಚಾರಣಾಧೀನ ಕೈದಿಯ ಮೃತದೇಹವನ್ನು ಮೊದಲು ಶವಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಆತನ ಮೃತದೇಹವನ್ನು ಸಂಬಂಧಿಕರಿಗೆ ಪೊಲೀಸರೇ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications