ದೆಹಲಿ: 2 ವರ್ಷದ ಬಾಲಕಿ ಅತ್ಯಾಚಾರಿ ಅಪ್ರಾಪ್ತರ ಬಂಧನ
ನವದೆಹಲಿ, ಅ.18: ಎರಡು ವರ್ಷದ ಹಸುಳೆ ಮೇಲೆ ಅತ್ಯಾಚಾರ ಮಾಡಿದವರು ಯಾರು ಎಂಬ ಸುಳಿವು ಸಿಕ್ಕ ಕೆಲ ಗಂಟೆಗಳಲ್ಲೇ ಅತ್ಯಾಚಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದವ ಆರೋಪಿಗಳಿಬ್ಬರು ಅಪ್ರಾಪ್ತ ವಯಸ್ಕರು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 17ರಂದು ನಡೆದಿದ್ದ ಈ ಅತ್ಯಾಚಾರ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಸಿಸಿಟಿವಿ ಕ್ಲಿಪ್ಪಿಂಗ್ ಮೂಲಕ ಸುಳಿವು ಪಡೆದ ಪೊಲೀಸರು ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ವಿಡಿಯೋ ಮೂಲಕ ಆರೋಪಿಗಳು ತೆರಳಿದ ಮೋಟರ್ ಬೈಕ್ ನಂಬರ್ ಸ್ಪಷ್ಟವಾಗಿ ಕಾಣಿಸಿದೆ. ಬೈಕಿನಲ್ಲಿ ಬಾಲಕಿಯನ್ನು ಕೂಡಿಸಿಕೊಂಡು ಕಿಡ್ನಾಪ್ ಮಾಡಿದ ದೃಶ್ಯ ಲಭ್ಯವಾಗಿದೆ.

ಶಾಲೆ ಆಯೋಜಿಸಿದ ರಾಮ್ ಲೀಲಾ ಕಾರ್ಯಕ್ರಮಕ್ಕೆ ತನ್ನ ಅಜ್ಜಿಯೊಂದಿಗೆ ತೆರಳಿದ್ದ ಬಾಲಕಿಯನ್ನು ಹುಡುಗರಿಬ್ಬರು ಬೈಕಿನಲ್ಲಿ ಕೂರಿಸಿಕೊಂಡು ಕಿಡ್ನಾಪ್ ಮಾಡಿದ್ದಾರೆ. ನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ದೆಹಲಿಯ ಅನಿಯಮಿತ ಪವರ್ ಕಟ್ ಬಗ್ಗೆ ಅರಿವಿದ್ದ ಆರೋಪಿಗಳು, ಕರೆಂಟ್ ಹೋದ 15 ನಿಮಿಷದಲ್ಲಿ ಈ ಕೆಲಸ ಮಾಡಿದ್ದಾರೆ.
ಬಾಲಕಿ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ಬಂದ ಮೇಲೆ ಹುಡುಕಿದಾಗ ಬಾಲಕಿ ಪಾರ್ಕ್ ವೊಂದರಲ್ಲಿ ಸಿಕ್ಕಿದ್ದಾಳೆ. ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಗೆ ಕೂಡಲೇ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಂತರ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications