ಕೊರೊನಾವೈರಸ್ ಹರಡುವಿಕೆಗೆ ಕಡಿವಾಣ ಹಾಕಿದ ಕೇಜ್ರಿವಾಲ್ ಸರ್ಕಾರ
ನವದೆಹಲಿ, ಆಗಸ್ಟ್.05: ರಾಷ್ಟ್ರ ರಾಜಧಾನಿಯಲ್ಲಿ ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಒಂದು ಹಂತದಲ್ಲಿ ಯಶಸ್ವಿಯಾಗಿದೆ.
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಅಂಕಿ-ಸಂಖ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ 1076 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಮಹಾಮಾರಿಗೆ 11 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 4044ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!
ಒಂದೇ ದಿನ ನವದೆಹಲಿಯಲ್ಲಿ 890 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 126116 ಮಂದಿ ಕೊವಿಡ್ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು 140232 ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಕೇವಲ 10072 ಸಕ್ರಿಯ ಪ್ರಕರಣಗಳಿರುವುದು ವರದಿಯಾಗಿದೆ.
10.99 ಲಕ್ಷ ಜನರಿಗೆ ಕೊರೊನಾವೈರಸ್ ತಪಾಸಣೆ:
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗವನ್ನು ಹೆಚ್ಚಿಸಿರುವುದೇ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಕಾರಣವಾಯಿತು ಎನ್ನಲಾಗುತ್ತಿದೆ. ಒಂದೇ ದಿನದಲ್ಲಿ 4870 ಜನರನ್ನು ಆರ್ ಟಿಪಿಸಿಆರ್, 11915 ಜನರನ್ನು ರಾಪಿಡ್ ಆಂಟಿಜೆನ್ ತಪಾಸಣೆಗೆ ಒಳಪಡಿಸಲಾಗಿತ್ತು. ಇದುವರೆಗೂ ನವದೆಹಲಿಯಲ್ಲಿ 10,99,882 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.