Nargund Elections : ನರಗುಂದದಿಂದ ಮತ್ತೆ ಅಖಾಡಕ್ಕಿಳಿಯಲು ಸಜ್ಜಾದ್ರಾ ಸಿ.ಸಿ.ಪಾಟೀಲ್? - ಇಲ್ಲಿದೆ ಮಾಹಿತಿ
ನರಗುಂದ, ಮಾರ್ಚ್, 24: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿವಾಗುತ್ತಿದಂತೆ, ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಹಾಗೆಯೇ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದ ರಾಜಕೀಯ ಪರಿಸ್ಥಿತಿ ಹಾಗೂ ಪರಿಚಯವನ್ನು ತಿಳಿಯೋಣ ಬನ್ನಿ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ನರಗುಂದ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಯ ಸಾಧಿಸಿದ್ದರು. ಹಾಗೆಯೇ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ಗಮನಿಸಿ. 2018ರಲ್ಲಿ ಇಲ್ಲಿ ಬಿಜೆಪಿಯ ಸಿ.ಸಿ.ಪಾಟೀಲ್ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಸ್ಪರ್ಧಿಸಿದ್ದ ನ್ಯಾಷನಲ್ ಕಾಂಗ್ರೆಸ್‌ನ ಬಸವರಡ್ಡಿ ಯಾವಗಲ್ 7,979 ಮತಗಳ ಅಂತರದಿಂದ ಸೋಲನುಭವಿಸಿದ್ದರು.

ರೈತ ಚಳವಳಿಯ ಮೂಲ ನೆಲವಾದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಲಾಭಿ ಜೋರಾಗಿ ನಡೆದಿದೆ. ಬಿಜೆಪಿಯಲ್ಲಿ ಹಾಲಿ ಸಚಿವ ಸಿ.ಸಿ. ಪಾಟೀಲ್ ಮಾತ್ರ ಟಿಕೆಟ್ ಆಕಾಂಕ್ಷಿ ಆಗಿದ್ದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಸೇರಿದಂತೆ 6 ಜನ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದು ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಕಾಂಗ್ರೆಸ್ ಸೋಲಿಗೆ ಕಾರಣವೇನು?
ಮಾಜಿ ಸಚಿವ ಹಾಗೂ ಹಿರಿಯ ನಾಯಕ ಬಿ.ಆರ್.ಯಾವಗಲ್ ಜೊತೆಗೆ ಯುವ ಕಾಂಗ್ರೆಸ್ ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ್, ಡಾ.ಸಂಗಮೇಶ ಕೊಳ್ಳಿ, ಪ್ರಕಾಶ್ ಕರಿ, ದಶರಥ ಗಾಣಿಗೇರ, ವಿವೇಕ ಯಾವಗಲ್ಲ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜನಾತಾ ಪರಿವಾರದ ನೆಲವಾಗಿದ್ದ ನರಗುಂದ ಬಿಜೆಪಿ ತೆಕ್ಕೆಗೆ ಹೋದಾಗಲೇ ಹಿರಿಯ ಮುಖಂಡ ಯಾವಗಲ್ ವಿರೋಧಿ ಅಲೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುವಂತೆ ಮಾಡಿದೆ. ಇದೇ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ.

ಬಿಜೆಪಿಯಲ್ಲಿ ಬದಲಾವಣೆಯೇ ಇಲ್ಲ
ಸಚಿವ ಸಿ.ಸಿ.ಪಾಟೀಲ ಒಬ್ಬರೇ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಆಗಿದ್ದು, ಇದುವರೆಗೂ ಪಕ್ಷದಲ್ಲಿ ಬೇರೆ ಯಾರೂ ಸ್ಪರ್ಧೆಯ ಕುರಿತು ಇಂಗಿತ ವ್ಯಕ್ತಪಡಿಸುತ್ತಿಲ್ಲ. ಇದು ಈ ಕ್ಷೇತ್ರದ ವಿಶೇಷವಾಗಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ, ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಎಲ್ಲ ಹಿಂದೂ ಪರ ಸಂಘಟನೆಗಳು, ಸಚಿವರು ಪ್ರತಿನಿಧಿಸುವ ಪಂಚಮಸಾಲಿ ಸಮುದಾಯ, ಲಿಂಗಾಯತರ ಒಳ ಪಂಡಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಸಿ.ಸಿ. ಪಾಟೀಲ್ ಉತ್ತಮವಾದ ಸಂಪರ್ಕ ಹೊಂದಿದ್ದಾರೆ.
ಮತ್ತೊಮ್ಮೆ ಸ್ಪರ್ಧೆಗಿಳಿಯುವ ಯತ್ನ
ಇದನ್ನೆಲ್ಲ ಗಮನಿಸಿದರೆ ಪಾಟೀಲರು ಮತ್ತೊಮ್ಮೆ ನರಗುಂದ ಕ್ಷೇತ್ರದಿಂದ ಕಣಕ್ಕಿಳಿಲಿದ್ದಾರೆ ಎನ್ನುವುದು ಎದ್ದು ಕಾಣುತ್ತಿದೆ. ಮತ್ತೊಂದೆಡೆ ಸಚಿವರ ಪುತ್ರ ಉಮೇಶಗೌಡ ಪಾಟೀಲ್ ಕೂಡ ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಕ್ಷೇತ್ರಗಳ ಆಯ್ಕೆ ತಂದೆ-ಮಗನ ನಿರ್ಧಾರದ ಮೇಲೆ ನಿಂತಿರುತ್ತದೆ. ಉಮೇಶ್‌ಗೌಡ ಇತ್ತೀಚೆಗೆ ನರಗುಂದದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಗಮನ ಗುರುತಿಸಿಕೊಂಡಿದ್ದಾರೆ.
ಹೆಚ್ಚು ಸುದ್ದಿಯಲ್ಲಿರುವ ಉಮೇಶ್‌ಗೌಡ
ಹೀಗೆ ಕ್ಷೇತ್ರದಲ್ಲಿ ಉಮೇಶಗೌಡರು ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಈ ನಾಯಕತ್ವ ಗುಣವನ್ನು ಗಮನಿಸಿದ ಸಂಘದ ಪ್ರಮುಖ ನಾಯಕರು ಇಂತಹದೊಂದು ಪ್ರಯೋಗದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಜಾತಿ ಪ್ರಮುಖ ಪಾತ್ರವಾಗಿದೆ. ಅದರಲ್ಲಿಯೂ ಕಾಂಗ್ರೆಸ್ ಈ ಬಾರಿ ಬದಲಾವಣೆ ಬಯಸಿದ್ದು, ಡಿ.ಕೆ. ಶಿವಕುಮಾರ್ ತಮ್ಮ ಆಪ್ತರ ಮೂಲಕ ಸಮೀಕ್ಷೆ ನಡೆಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಹಾಲಿ ಸಚಿವರಿಗೆ ಪ್ರಬಲ ಪೈಪೋಟಿ ನೀಡಬೇಕಾದರೆ ಲಿಂಗಾಯತ ಪ್ರಮುಖ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ಲೆಕ್ಕಾಚಾರ ಎಲ್ಲೆಡೆ ಸದ್ದು ಮಾಡಿದೆ. ಈ ಸೂತ್ರವನ್ನು ಕಾಂಗ್ರೆಸ್ ಅನುಸರಿಸಿದಲ್ಲಿ ಮಾಜಿ ಸಚಿವರಿಗೆ ಟಿಕೆಟ್ ಕೈ ತಪ್ಪಿದರೂ ಆಶ್ಚರ್ಯ ಪಡುವಂತಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
Nargunda Karnataka Elections
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2018 | ಸಿ.ಸಿ. ಪಾಟೀಲ (ಬಿಜೆಪಿ) | 73045 | ಬಿ.ಆರ್. ಯಾವಗಲ್ (ಪಕ್ಷೇತರ) | 65066 |
| 2013 | ಬಿ.ಆರ್. ಯಾವಗಲ್ (ಕಾಂಗ್ರೆಸ್) | 59620 | ಸಿ.ಸಿ. ಪಾಟೀಲ (ಬಿಜೆಪಿ) | 51035 |
| 2008 | ಸಿ.ಸಿ. ಪಾಟೀಲ (ಬಿಜೆಪಿ) | 46824 | ಬಿ.ಆರ್. ಯಾವಗಲ್ (ಪಕ್ಷೇತರ) | 29210 |
| 2004 | ಸಿ.ಸಿ. ಪಾಟೀಲ (ಬಿಜೆಪಿ) | 43382 | ಬಿ.ಆರ್. ಯಾವಗಲ್ (ಕಾಂಗ್ರೆಸ್) | 31260 |
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ
ಇನ್ನು ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚಿನ ಪೈಪೋಟಿ ಕಂಡುಬರುತ್ತಿದೆ. ಆದರೂ ಅರ್ಜಿ ಸಲ್ಲಿಸಿದ 6 ಜನರಲ್ಲಿ 4 ಜನರದ್ದು ಒಂದೇ ತೀರ್ಮಾನವಾಗಿದೆ. ಪಕ್ಷ ಯುವಕರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೂ ನಾವು ಯಾರೂ ವಿರೋಧಿಸುವುದಿಲ್ಲ ಎನ್ನುವ ಒಮ್ಮತದ ನಿರ್ಧಾರದಲ್ಲಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗದಗ ಜಿಲ್ಲಾ ಪಂಚಾಯತ್‌ಗೆ, ಗದಗ ಎಪಿಎಂಸಿ ಇತಿಹಾಸದಲ್ಲಿಯೇ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಕೆಲಸ ಮಾಡಿರುವ ಸಿದ್ದಲಿಂಗೇಶ್ವರ ಹೆಸರು ಮುನ್ನಲೆಯಲ್ಲಿದೆ. ಜೊತೆಗೆ ಸಂಗಮೇಶ್ ಕೊಳ್ಳಿ ಹೆಸರು ಕೂಡ ಮುಂಚೂಣಿಯಲ್ಲಿದೆ.












Click it and Unblock the Notifications