ಜೆಡಿಎಸ್ ನ ಸೋಲಿಸಬೇಕು ಅಂತ ನಾನು ಹೇಳೋದ್ರಲ್ಲಿ ಏನು ತಪ್ಪು?: ಸಿದ್ದು
Recommended Video

ಮೈಸೂರು, ಮಾರ್ಚ್ 22 : "ನಾನು ಕಾಂಗ್ರೆಸ್ ಮುಖ್ಯಮಂತ್ರಿ ಆಗಿ ಜೆಡಿಎಸ್ ಸೋಲಿಸಬೇಕು ಅಂತ ಹೇಳಿದ್ದೀನಿ. ಬಹಿರಂಗವಾಗಿಯೇ ಮಂಜೇಗೌಡ ಜತೆ ಮಾತನಾಡಿದ್ದೀನಿ. ನನ್ನ ಫೋನ್ ಟ್ಯಾಪ್ ಆಗಿಲ್ಲ. ಯಾವುದನ್ನೂ ನಾನು ಕದ್ದು ಮುಚ್ಚಿ ಮಾಡಿಲ್ಲ, ಮಾಡುವುದೂ ಇಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಂಜೇಗೌಡ ಜತೆಗೆ ಸಿದ್ದರಾಮಯ್ಯ ನಡೆಸಿದ ಸಂಭಾಷಣೆ ಬಹಿರಂಗವಾಗಿತ್ತು. ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅದು ಫೋನ್ ಟ್ಯಾಪ್ ಅಲ್ಲ. ನಾವು ತೆರೆದ ಪುಸ್ತಕ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ. ಫೋನ್ ಟ್ಯಾಪ್ ಅಲ್ಲದಿದ್ದರೆ ಏನಾದರೂ ಮಾಡಿಕೊಳ್ಳಲಿ ಎಂದರು.
ನನ್ನ ಕಾರಿನ ಬಳಿ ಹೊರಗೆ ನಿಂತು ನೂರಾರು ಮಂದಿ ಸಮ್ಮುಖದಲ್ಲಿ ಮಾತನಾಡಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ನಕುಮಾರಸ್ವಾಮಿ ಮೈಸೂರಿಗೆ ಬಂದು ನನ್ನನ್ನು ಸೋಲಿಸುವಂತೆ ಕರೆ ಕೊಟ್ಟಿದ್ದಾರೆ. ಹಾಗಿದ್ದ ಮೇಲೆ ಈ ಸಂಭಾಷಣೆಯ ಸಂದರ್ಭವನ್ನು ನೀವು ಹೇಗೆ ಅರ್ಥೈಸುವಿರಿ ಎಂದು ಪ್ರಶ್ನಿಸಿದರು.

ಚಾಮುಂಡಿ ದರ್ಶನ ಪಡೆಯಲಿರುವ ರಾಹುಲ್ ಗಾಂಧಿ
ಇನ್ನು ಉಡುಪಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡದ ವಿಚಾರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅವರು ಉಡುಪಿಗೆ ಹೋಗಿಯೇ ಇಲ್ಲ. ಇನ್ನು ದೇವಸ್ಥಾನಕ್ಕೆ ಭೇಟಿ ನೀಡುವುದು ಹೇಗೆ ಸಾಧ್ಯ ಎಂದರು. ಮೈಸೂರಿಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ನಾಡದೇವತೆ ಚಾಮುಂಡಿ ದರ್ಶನ ಪಡೆಯಲಿದ್ದಾರೆ. ಸುತ್ತೂರು ಮಠಕ್ಕೆ ತೆರಳುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ನಂಜನಗೂಡಿನ ಉಪ ಚುನಾವಣೆ ಫಲಿತಾಂಶ ಏನಾಯಿತು?
ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ, ಯಾರೇ ಬರಲಿ- ಹೋಗಲಿ ರಾಜ್ಯದ ಜನ ನಮ್ಮ ಜೊತೆ ಇದ್ದಾರೆ. ಯಡಿಯೂರಪ್ಪ ನಂಜನಗೂಡಲ್ಲಿ ಗೆದ್ದೇ ಗೆಲ್ತೀನಿ ಅಂತಿದ್ದರು. ಜನ ಯಾರ ಕೈ ಹಿಡಿದರು ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು ಸಿದ್ದರಾಮಯ್ಯ.

ಚುನಾವಣೆ ಅಕ್ರಮ ನಡೆದಿದ್ದರೆ ಆಗಲೇ ಕೋರ್ಟ್ ಗೆ ಹೋಗಬಹುದಿತ್ತು
ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ಪುಸ್ತಕದಲ್ಲಿ ನಂಜನಗೂಡು ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ ಖಾರವಾಗಿ ಉತ್ತರಿಸಿದ ಸಿದ್ದರಾಮಯ್ಯ, ಚುನಾವಣೆ ಅಕ್ರಮವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಈಗ ಪುಸ್ತಕ ಬರೆಯುವುದರಿಂದ ಏನೂ ಪ್ರಯೋಜನವಿಲ್ಲ. ಸುಳ್ಳು ಸುಳ್ಳು ಪುಸ್ತಕ ಬರೆಯುವುದರಿಂದ ಏನು ಲಾಭ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ: ಕಲಂ 2ಡಿ ಅಡಿ ಸರಕಾರಕ್ಕೆ ಅಧಿಕಾರ
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸರಕಾರ ಮೂಗು ತೂರಿಸಬಾರದಿತ್ತು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ, ಕಲಂ 2ಡಿ ಅಡಿಯಲ್ಲಿ ಸರಕಾರಕ್ಕೆ ಅಧಿಕಾರವಿದೆ. ಅಷ್ಟಕ್ಕೂ ನಾವು ಜಸ್ಟೀಸ್ ನಾಗಮೋಹನ್ ದಾಸ್ ವರದಿ ಆಧರಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ರಾಜ್ಯ ಸರಕಾರದ ತೀರ್ಮಾನವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.











Click it and Unblock the Notifications