ವಿವೇಕಾನಂದ ಸ್ಮಾರಕಕ್ಕೆ ಶಾಲೆಯ ಜಾಗ ಕೊಡೋಲ್ಲ: ಸಿದ್ದು
ಮೈಸೂರು, ಜೂನ್ 26- ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಸ್ವಾಮಿ ವಿವೇಕಾನಂದರು ಭೇಟಿ ನೀಡಿದ್ದರ ಗೌರವಾರ್ಥ ಅವರ ಸ್ಮಾರಕ ಸ್ಥಾಪನೆಗೆ ಜಾಗ ನೀಡುವಂತೆ ಸ್ಥಳೀಯ ರಾಮಕೃಷ್ಣಾಶ್ರಮ ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ.
ದೇವರಾಜ ಮೊಹಲ್ಲಾದಲ್ಲಿರುವ ಶತಮಾನದಷ್ಟು ಹಳೆಯದಾದ ಎನ್ ಟಿಎಂ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ಸ್ಥಾಪನೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಆ ಜಾಗವನ್ನು ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಹಸ್ತಾಂತರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರವು ಶಾಲಾ ಆವರಣವನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ಸಂಬಂಧ ಆದೇಶ ಹೊರಡಿಸಿತ್ತು. ಪುರಾತನ ಶಾಲೆಯನ್ನು ಸಮೀಪದಲ್ಲಿ ಬೇರೆ ಸ್ಥಳದಲ್ಲಿ ನಿರ್ಮಿಸುವ ಪ್ರಸಾವನೆಯೂ ಇದೆ. ಈ ಶಾಲೆಯನ್ನು ಸಮೀಪದ ದೇವರಾಜ ಸರಕಾರಿ ಪ್ರಾಥಮಿಕ ಶಾಲೆಯ ಜತೆ ವಿಲೀನಗೊಳಿಸುವ ಪ್ರಸ್ತಾವನೆಯೂ ಇದೆ. ನಿರಂತರ ಪ್ರವಾಸದಲ್ಲಿರುತ್ತಿದ್ದ ಸ್ವಾಮಿ ವಿವೇಕಾನಂದರು 1892ರಲ್ಲಿ ನಿರಂಜನ ಮಠದಲ್ಲಿ ವಾಸ್ತವ್ಯ ಹೂಡಿದ್ದರು.

ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಂಸಿ ನಾಣಯ್ಯ ಅವರು ಎತ್ತಿದ್ದ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಾತನ ಮಹಾರಾಣಿ ನ್ಯೂ ಟೈಪ್ ಮಾಡೆಲ್ ಪ್ರೈಮರಿ ಶಾಲೆಯು (Maharani New Type Model Primary School) ಚಾರಿತ್ರ್ಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಶಾಲೆಯನ್ನು ಸ್ಥಳಾಂತರಿಸುವುದಿಲ್ಲ ಎಂದು ಹೇಳಿದರು. ಜತೆಗೆ, ಪ್ರಕರಣವು ಹೈಕೋರ್ಟಿನಲ್ಲಿರುವುದರಿಂದ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಅಂದಹಾಗೆ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಎನ್ ಟಿಎಂ ಶಾಲೆದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ.












Click it and Unblock the Notifications