ಪ್ರಿಯಕರನ ಜೊತೆ ಸೇರಿ ಗಂಡನನ್ನೆ ಕೊಂದಿದ್ದ ಪತ್ನಿ ಸೇರಿ ಮೂವರ ಬಂಧನ
ಮೈಸೂರು, ಡಿಸೆಂಬರ್ 17: ಪ್ರಿಯಕರನ ಜತೆ ಸೇರಿ ತಾಳಿ ಕಟ್ಟಿದ ಗಂಡನನ್ನೆ ಕೊಲೆ ಮಾಡಿದ್ದ, ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡಿನ ಅಡ್ಡಹಳ್ಳಿಯ ಕಾರ್ಮಿಕ ಶಿವರಾಜ್ ಮತ್ತು ಸೌಮ್ಯ ದಂಪತಿ ಅನ್ಯೋನ್ಯವಾಗಿ ಬದುಕುತ್ತಿದ್ದರು. ಕೆಲ ಸಮಯದ ಹಿಂದೆ ಶುಂಠಿ ಗದ್ದೆಯ ಕೆಲಸಕ್ಕೆ ಆಟೋದಲ್ಲಿ ಹೋಗುವ ವೇಳೆ ಆಟೋ ಚಾಲಕ ಯೋಗೇಶ್ ಪರಿಚಯವಾಗಿದ್ದಾನೆ.
ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿದ್ದು, ಇದರ ಸುಳಿವು ಪತಿಗೆ ತಿಳಿಯಿತು. ಮುಂದೆ ಯಾವುದೇ ಕಾರಣಕ್ಕೂ ಶುಂಠಿ ಕೆಲಸಕ್ಕೆ ಹೋಗದಂತೆ ಶಿವರಾಜ್ ತಾಕೀತು ಮಾಡಿದ್ದಾನೆ. ಇದರಿಂದ ಪ್ರಿಯತಮೆ ಸೌಮ್ಯಳನ್ನು ಭೇಟಿ ಮಾಡಲು ಆಟೋ ಚಾಲಕ ಯೋಗೇಶ್ ಗೆ ಸಾಧ್ಯವಾಗುತ್ತಿರಲಿಲ್ಲ.

ತಮ್ಮ ಸಂಬಂಧಕ್ಕೆ ಅಡ್ಡಿಯಾದ ಪತಿ ಶಿವರಾಜ್ ನನ್ನು ಮುಗಿಸಿ ಬಿಡಲು ಸೌಮ್ಯ ಮತ್ತು ಪ್ರಿಯಕರ ಯೋಗೇಶ್ ಪ್ಲಾನ್ ಮಾಡಿದರು. ಇದಕ್ಕೆ ಯೋಗೇಶ್ ತನ್ನ ಸ್ನೇಹಿತ ಚೆಲುವರಾಜ್ ನೆರವು ಪಡೆದಿದ್ದನು.
ಪ್ರಿಯಕರ ಯೋಗೇಶ್ ನ ಆದೇಶದಂತೆ ಸೌಮ್ಯ ಪತಿಗೆ ಕಂಠಪೂರ್ತಿ ಕುಡಿಸಿದಳು. ತರುವಾಯ ಯೋಗೇಶ್ ಮತ್ತು ಚಲುವರಾಜು ಮೂವರೂ ಸೇರಿಕೊಂಡು ಕಳೆದ ಡಿಸೆಂಬರ್ 7 ರಂದು ಶಿವರಾಜ್ ಕೈ ಕಾಲು ಕಟ್ಟಿ ಕಬಿನಿ ಬಲದಂಡೆ ನಾಲೆಗೆ ಶವ ಎಸೆದಿದ್ದಾರೆ. ಪತಿ ನಾಪತ್ತೆಯಾಗಿರುವ ಬಗ್ಗೆ ಸೌಮ್ಯ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೆಂಟ್ ಕೂಡಾ ನೀಡಿರಲಿಲ್ಲ.
ಡಿಸೆಂಬರ್ 15 ರಂದು ನಾಲೆಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿದ ನಂತರ ಸಂಶಯದ ಮೇಲೆ ಸೌಮ್ಯಳನ್ನು ವಿಚಾರಣೆಗೊಳಪಡಿಸಿದಾಗ ಆಕೆ ಯೋಗೇಶ್ ಮತ್ತು ಚಲುವರಾಜ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications