ನಾಗರಹೊಳೆ ಅರಣ್ಯದಲ್ಲಿ ಶುರುವಾಗಿದೆ ಕಾಳ್ಗಿಚ್ಚಿನ ಭಯ!
ಮೈಸೂರು, ಫೆಬ್ರವರಿ 5: ಬೇಸಿಗೆ ಬರುತ್ತಿದ್ದಂತೆಯೇ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗುವುದು ಮಾಮೂಲಿಯಾಗಿದೆ. ಕೆಲವು ವರ್ಷಗಳ ಹಿಂದೆ ಅರಣ್ಯದಲ್ಲಿದ್ದ ಬಿದಿರು ಮೆಳೆಗಳು ಸಾವನ್ನಪ್ಪಿದ ಕಾರಣ ಕಾಳ್ಗಿಚ್ಚಿಗೆ ಒಣಗಿದ ಮೆಳೆಗಳು ಹೊತ್ತಿ ಉರಿದಿದ್ದವಲ್ಲದೆ, ಬೆಂಕಿಯ ಕೆನ್ನಾಲಿಗೆಗೆ ಗಿಡಮರಗಳು ಆಹುತಿಯಾಗಿದ್ದವು.
ಇದರ ಪರಿಣಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕುಶಾಲನಗರ ಬಳಿಯ ಆನೆಕಾಡು ಮೀಸಲು ಅರಣ್ಯ ಇವತ್ತಿಗೂ ಬೋಳಾಗಿ ಹೋಗಿವೆ. ಗಿಡಮರಗಳು ನಾಶವಾಗಿ ಕುರುಚಲು ಗಿಡಗಳು ಮಾತ್ರ ಕಾಣಲು ಸಿಗುತ್ತಿವೆ.
ಕೆಲವು ವರ್ಷಗಳ ಹಿಂದೆ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿ ನಾಗರಹೊಳೆಯ ನೂರಾರು ಎಕರೆ ಅರಣ್ಯವನ್ನು ನಾಶ ಮಾಡಿತ್ತು. ಕಳೆದ ವರ್ಷವೂ ಆನೆಚೌಕೂರು ವ್ಯಾಪ್ತಿ ಸೇರಿದಂತೆ ನಾಗರಹೊಳೆಯ ಹಲವು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಅರಣ್ಯ ನಾಸವಾಗಿತ್ತು. ಆನೆಕಾಡು ಅರಣ್ಯವೂ ಬೆಂಕಿಗಾಹುತಿಯಾಗಿತ್ತು.

ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡ ಭಾರೀ ಪ್ರಮಾಣದ ಅಗ್ನಿಗೆ ಸಿಬ್ಬಂದಿ ಬಲಿಯಾಗಿದ್ದಲ್ಲದೆ, ಕೆಲವರು ಗಾಯಗೊಂಡಿದ್ದರು. ಪ್ರತಿವರ್ಷವೂ ಅಗ್ನಿ ಅನಾಹುತ ಸಂಭವಿಸುವುದನ್ನು ತಡೆಯಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಕೆಲವು ಕಿಡಿಗೇಡಿಗಳ ವರ್ತನೆ ಅರಣ್ಯ ಬೆಂಕಿಗಾಹುತಿಯಾಗುವಂತೆ ಮಾಡುತ್ತಿದೆ.
ಅರಣ್ಯದ ಮೂಲಕ ಸಂಚರಿಸುವ ವೇಳೆ ಕೆಲವರು ಸಿಗರೇಟನ್ನು ಸೇದಿ ಎಸೆಯುವುದರಿಂದಲೂ ಬೆಂಕಿ ಅವಘಡ ಸಂಭವಿಸಿದರೆ ಮತ್ತೆ ಕೆಲವರು ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚುವ ಕೃತ್ಯ ಎಸಗುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಬೇಸಿಗೆ ಬರುತ್ತಿದ್ದಂತೆಯೇ ಕಾಳ್ಗಿಚ್ಚು ತಡೆಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಕೂಡ ಅಲ್ಲಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ.
ಇದೀಗ ನಾಗರಹೊಳೆ ರಾಷ್ಟ್ರಿಯ ಉದ್ಯಾನವನ ವ್ಯಾಪ್ತಿಯ ಆನೆ ಚೌಕೂರು ಅರಣ್ಯ ಪ್ರದೇಶದಲ್ಲಿ ಬೆಂಕಿ ತಗುಲಿ ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಅರಣ್ಯ ನಾಶವಾಗಿದೆ.
ರಸ್ತೆ ಬದಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ತಕ್ಷಣ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಆದರೂ ಸುಮಾರು ಐವತ್ತಕ್ಕೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿದೆ. ಅರಣ್ಯದಲ್ಲಿ ಸಂಭವಿಸಿರುವ ಕಾಳ್ಗಿಚ್ಚು ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದು ಇನ್ನೂ ಬಯಲಾಗಿಲ್ಲ.
ಮುಂದಿನವು ಬೇಸಿಗೆಯ ದಿನಗಳಾಗಿರುವುದರಿಂದ ಅರಣ್ಯದಲ್ಲಿ ಕಾಳ್ಗಿಚ್ಚು ಪ್ರಕರಣಗಳು ಹೆಚ್ಚು, ಹೆಚ್ಚು ನಡೆಯುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಲರ್ಟ್ ಆಗಬೇಕಾಗಿದೆ. ಜತೆಗೆ ಬೆಂಕಿ ಹಚ್ಚುವ ದುಷ್ಕರ್ಮಿಗಳ ಬಗ್ಗೆ ನಿಗಾವಹಿಸಬೇಕಾದ ಅಗತ್ಯವೂ ಇದೆ.












Click it and Unblock the Notifications