ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ: ಹುಲಿ, ಚಿರತೆ, ಕಾಡಾನೆ ದಾಳಿಗೆ ಬಲಿಯಾದವರೆಷ್ಟು?

By ಲವ ಕುಮಾರ್‌
|
Google Oneindia Kannada News

ಮೈಸೂರು, ಡಿಸೆಂಬರ್‌ 19: ಮೈಸೂರು ಜಿಲ್ಲೆಯಲ್ಲಿ ಮನುಷ್ಯ ಮತ್ತು ವನ್ಯಜೀವಿಗಳ ಸಂಘರ್ಷ ಮುಂದುವರೆದಿದ್ದು, ಕಾಡಾನೆ, ಚಿರತೆ, ಹುಲಿಗಳು ಕಾಡಿನಿಂದ ನೇರವಾಗಿ ನಾಡಿಗೆ ಬಂದು ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಮಾಮೂಲಿಯಾಗಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿರುವ ಜನರು ಪ್ರತಿನಿತ್ಯ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ಆಹಾರ ಸಮಸ್ಯೆಯನ್ನು ನೀಗಿಸಿಕೊಳ್ಳಲು ವನ್ಯ ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿದ್ದು, ಪರಿಣಾಮ ರೈತರ ಬದುಕು ಅಯೋಮಯವಾಗಿದೆ. ಕೃಷಿ ಮಾಡಿದರೆ ಫಸಲು ಬರುವ ವೇಳೆಗೆ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳು ಜಮೀನಿಗೆ ನುಗ್ಗಿ ತಿಂದು ತುಳಿದು ನಾಶ ಮಾಡಿದರೆ, ಹಸು, ಕುರಿ, ಮೇಕೆಗಳ ಮೇಲೆ ಹುಲಿ, ಚಿರತೆಗಳು ದಾಳಿ ಮಾಡುತ್ತಿವೆ. ಇದೆಲ್ಲವನ್ನು ಮೀರಿ ಚಿರತೆ ಮತ್ತು ಹುಲಿಗಳು ಜನರ ಮೇಲೆಯೇ ದಾಳಿ ಮಾಡಿ ಬಲಿತೆಗೆದುಕೊಳ್ಳುತ್ತಿವೆ.

ದಸರಾ ಆನೆ ಬಲರಾಮನಿಗೆ ಗುಂಡೇಟು: ಜಮೀನು ಮಾಲೀಕನ ಬಂಧನದಸರಾ ಆನೆ ಬಲರಾಮನಿಗೆ ಗುಂಡೇಟು: ಜಮೀನು ಮಾಲೀಕನ ಬಂಧನ

ಈಗಾಗಲೇ ಚಿರತೆಗಳು ಜಾನುವಾರು ಮಾತ್ರವಲ್ಲದೆ ಜನರ ಮೇಲೆ ದಾಳಿ ಮಾಡುತ್ತಿದ್ದು, ತಿ.ನರಸೀಪುರ ತಾಲೂಕಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇತ್ತೀಚಿಗೆ ನಂಜನಗೂಡು ತಾಲೂಕಿನಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾನೆ. ಚಿರತೆಗಳು ಮೈಸೂರು ನಗರ ಪ್ರದೇಶದಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಇನ್ನು ಸುಮಾರು 12 ವರ್ಷಗಳ ಹಿಂದೆ ಕಾಡಾನೆ ನಗರದೊಳಗೆ ನುಗ್ಗಿ ದಾಂಧಲೆ ನಡೆಸಿ ಹಸು ಹಾಗೂ ವ್ಯಕ್ತಿಯೊಬ್ಬನ ಬಲಿ ಪಡೆದಿದೆ. ಕಳೆದ ವರ್ಷ ನಗರದ ಹೊರವಲಯದಲ್ಲಿ ವಿಷ ಪ್ರಾಷನ ಮಾಡಿ ಮೂರು ಚಿರತೆಮರಿಗಳನ್ನು ಕೊ‍ಲ್ಲಲಾಗಿತ್ತು.

ಅರಣ್ಯ ಇಲಾಖೆ ಸೆರೆ ಹಿಡಿದ ಚಿರತೆಗಳ ಸಂಖ್ಯೆ ಎಷ್ಟು..?

ಅರಣ್ಯ ಇಲಾಖೆ ಸೆರೆ ಹಿಡಿದ ಚಿರತೆಗಳ ಸಂಖ್ಯೆ ಎಷ್ಟು..?

ಇತ್ತೀಚೆಗಿನ ವರ್ಷಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕಾಡಿನಿಂದ ನೇರವಾಗಿ ನಾಡಿಗೆ ಬಂದು ಉಪಟಳ ನೀಡುತ್ತಿದ್ದು ಸುಮಾರು ಮೂವತ್ತಮೂರಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ನಾಡಿಗೆ ಬಂದ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕೆಲಸಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಹುಣಸೂರು, ಹೆಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ನಡೆಯುತ್ತಿವೆ. ಕಾಡಿಗಿಂತಲೂ ನಾಡಿನಲ್ಲಿ ಆಹಾರ ಬಲು ಸುಲಭವಾಗಿ ಸಿಗುತ್ತಿರುವುದೇ ಚಿರತೆಗಳು ನಾಡಿಗೆ ಬರಲು ಕಾರಣವಾಗಿದೆ. ಗ್ರಾಮದೊಳಗೆ ಅಥವಾ ಹೊಲಗದ್ದೆಗಳಲ್ಲಿ ಹಸು, ಕರು, ಮೇಕೆ, ನಾಯಿಗಳು ಸುಲಭವಾಗಿ ಸಿಗುತ್ತಿದ್ದು, ಅವುಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಹೀಗಾಗಿ ಕುರುಚಲು ಕಾಡುಗಳಲ್ಲಿ, ಹೊಲಗದ್ದೆ, ಅದರಲ್ಲೂ ಕಬ್ಬಿನ ಗದ್ದೆಯಲ್ಲಿ ವಾಸ್ತವ್ಯ ಹೂಡಿ ಜನರಲ್ಲಿ ಭಯ ಹುಟ್ಟಿಸುತ್ತಿವೆ.

ಮೈಸೂರಿನಲ್ಲಿ ಹೊಸ ವರ್ಷ‌ ಆಚರಣೆ ಮಾಡಲು ಈ ಪ್ರವಾಸಿ ತಾಣಗಳೇ ಸೂಕ್ತಮೈಸೂರಿನಲ್ಲಿ ಹೊಸ ವರ್ಷ‌ ಆಚರಣೆ ಮಾಡಲು ಈ ಪ್ರವಾಸಿ ತಾಣಗಳೇ ಸೂಕ್ತ

ವ್ಯಾಪಕವಾಗಿ ಹೆಚ್ಚಿದ ಚಿರತೆಗಳ ಸಂಖ್ಯೆ

ವ್ಯಾಪಕವಾಗಿ ಹೆಚ್ಚಿದ ಚಿರತೆಗಳ ಸಂಖ್ಯೆ

ದಟ್ಟಕಾಡಿನಿಂದ ಹೊರ ಬಂದಿರುವ ಬಹುತೇಕ ಚಿರತೆಗಳು ಬೆಟ್ಟಗುಡ್ಡ, ಹಳ್ಳಕೊಳ್ಳ ಸಣ್ಣಪುಟ್ಟ ಕುರುಚಲು ಕಾಡುಗಳಲ್ಲಿ ಜನವಸತಿ ಪ್ರದೇಶಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಆಗಾಗ್ಗೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಆಹಾರದ ಕೊರತೆ ನೀಗಿರುವ ಕಾರಣದಿಂದ ಸಂತಾನೋತ್ಪತ್ತಿ ಉತ್ತಮವಾಗಿ ಚಿರತೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬುದು ವನ್ಯ ಜೀವಿ ತಜ್ಞರ ಅಭಿಪ್ರಾಯವಾಗಿದೆ. ಕಾಡಿದ್ದರೂ ಅಲ್ಲಿ ಲಂಟಾನ ಬೆಳೆದು ಸಣ್ಣಪುಟ್ಟ ಪ್ರಾಣಿಗಳಿಂದ ಆರಂಭವಾಗಿ ಆನೆಗಳ ತನಕ ಸಸ್ಯಹಾರಿ ಪ್ರಾಣಿಗಳಿಗೆ ಆಹಾರದ ಸಮಸ್ಯೆಯಾಗುತ್ತಿದೆ. ಹೀಗಾಗಿ ಕಾಡಾನೆಗಳಂತು ನೇರವಾಗಿ ನಾಡಿಗೆ ಬಂದು ಹೊಲಗದ್ದೆಗಳಿಗೆ ನುಗ್ಗುತ್ತಿವೆ. ಇದನ್ನು ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ಆನೆಗಳು ನಾಡಿಗೆ ಬರದಂತೆ ಆನೆಕಂದಕ, ಸೋಲಾರ್ ಬೇಲಿ, ರೈಲ್ವೆ ಕಂಬಿ ಬಳಸಿ ಬೇಲಿ ನಿರ್ಮಾಣದಂತಹ ಕಾರ್ಯಗಳು ನಡೆಯುತ್ತಿವೆ. ಆದರೆ ಹುಲಿ, ಚಿರತೆಗಳು ನಾಡಿಗೆ ಬರುವುದನ್ನು ತಡೆಯುವುದು ಸುಲಭವಾಗಿ ಉಳಿದಿಲ್ಲ.

ಹುಲಿ ದಾಳಿಗೆ ಇಬ್ಬರು ಬಲಿ

ಹುಲಿ ದಾಳಿಗೆ ಇಬ್ಬರು ಬಲಿ

ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಡಾನೆ, ಹುಲಿ ಹಾಗೂ ಚಿರತೆ ದಾಳಿಗೆ ಒಂದು ವರ್ಷದಲ್ಲಿ ಆರು ಜನ ಸಾವನ್ನಪ್ಪಿರುವುದನ್ನು ನಾವು ಕಾಣಬಹುದಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಂಚಿನ ನಂಜನಗೂಡು ತಾಲೂಕು ವ್ಯಾಪ್ತಿಯ ಹಾದನೂರು, ಒಡೆಯನಪುರ, ಬಂಕಳ್ಳಿ ಹಾಗೂ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿ ದಾಳಿ ನಡೆಸಿರುವ ನಾಲ್ಕು ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿದ್ದಾರೆ. ತಿ.ನರಸೀಪುರ ತಾಲೂಕಿನ ಬನ್ನೂರು ಬಳಿ ಚಿರತೆ ದಾಳಿಗೆ ಇತ್ತೀಚೆಗೆ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬಲಿಯಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆಯಾದರೂ ಚಿರತೆ ಪತ್ತೆಯಾಗಿಲ್ಲ. ಎಚ್.ಡಿ.ಕೋಟೆ ತಾಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಕಾಡಾನೆ ದಾಳಿಯಿಂದ ಕೇರಳ ಮೂಲದ ರೈತ ಮೃತಪಟ್ಟಿದ್ದರೆ, ಹುಣಸೂರು ತಾಲೂಕು ಕೊಳವಿಗೆ ಹಾಡಿ ಬಳಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದನು. ವರ್ಷದಿಂದ ವರ್ಷಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಇಲಾಖೆಯಿಂದ ವಿಶೇಷ ಪಡೆ ರಚನೆ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಆಹಾರ ಅರಸಿ ನಾಡಿನತ್ತ ಮುಖ ಮಾಡಿದ ಪ್ರಾಣಿಗಳು

ಆಹಾರ ಅರಸಿ ನಾಡಿನತ್ತ ಮುಖ ಮಾಡಿದ ಪ್ರಾಣಿಗಳು

ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಅವರ ಪ್ರಕಾರ "ಕಾಡಿನಲ್ಲಿ ಲಂಟಾನ ವ್ಯಾಪಕವಾಗಿರುವುದರಿಂದ ಕಾಡಾನೆಗಳು ಆಹಾರ ಅರಸಿ ನಾಡಿನತ್ತ ಮುಖಮಾಡುತ್ತಿವೆ. ಅದರಲ್ಲೂ ದುರ್ಬಲ ಹುಲಿಗಳು ಸರಹದ್ದು ಸಿಗದೆ ಕಾಡಂಚಿಗೆ ಬಂದು ನೆಲೆ ಕಂಡುಕೊಂಡು ಸುಲಭವಾಗಿ ಸಿಗುವ ಜಾನುವಾರು, ಮೇಕೆ, ಕುರಿಗಳ ಮೇಲೆ ದಾಳಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ" ಎಂದಿದ್ದಾರೆ. ಒಟ್ಟಾರೆ ದಿನ ಕಳೆದಂತೆಲ್ಲ ವನ್ಯಪ್ರಾಣಿ ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚುತ್ತಲೇ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯುವ ಕೆಲಸ ಶೀಘ್ರವಾಗಿ ಆಗಬೇಕಿದೆ.

English summary
Wild Elephant, Tiger, Cheetah attack Problems increasing in Mysuru district. More than five people died in wild animal attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X