ಇಬ್ಬರು ಬಾಯ್‌ಫ್ರೆಂಡ್‌ಗಳ ಪ್ರೀತಿಗೆ ಅಡ್ಡಿ: ಗಂಡನಿಗೆ ಅಂತ್ಯ ಕಾಣಿಸಿದ ಚಾಲಾಕಿ ಹೆಂಡತಿ
ಮೈಸೂರು, ನವೆಂಬರ್ 06: ಅಕ್ರಮ ಸಂಬಂಧ ಹಾಗೂ ಕೌಟುಂಬಿಕ ಕಲಹದಿಂದ ಕೊಲೆ, ಹಲ್ಲೆಯಂತಹ ಅಪರಾಧ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ. ಇಂತಹದ್ದೇ ಕಾರಣಕ್ಕೆ ವ್ಯಕ್ತಿಯೋರ್ವರ ಕತ್ತು ಕೊಯ್ದು, ನಿಗೂಢವಾಗಿ ಕೊಂದು ವಾಮಾಚಾರ ಕಥೆ ಹೆಣೆದು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮ ಸಂಬಂಧ ಉಳಿಸಿಕೊಳ್ಳಲು ಪತ್ನಿ, ತನ್ನ ಪ್ರೇಮಿಗಳ ಜೊತೆ ಸೇರಿ ಪತಿಯನ್ನು ಭೀಕರವಾಗಿ ಕೊಂದು, ವಾಮಾಚಾರಕ್ಕೆ ಬಲಿಯಾದಂತೆ ಬಿಂಬಿಸಿ ತನಿಖೆ ದಿಕ್ಕು ತಪ್ಪಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಉಸ್ತುವಾರಿಯಲ್ಲಿ ನಂಜನಗೂಡಿನ ಡಿವೈಎಸ್‌ಪಿ ರಘು ಹಾಗೂ ಹುಲ್ಲಹಳ್ಳಿ ಪಿಎಸ್‌ಐ ಚೇತನ್ ಕುಮಾರ್, ನೇತೃತ್ವದಲ್ಲಿ ಪ್ರಕರಣದ ಬೆನ್ನು ಹತ್ತಿದಾಗ ಕೊಲೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೊಲೆಯಾದವನ ಪತ್ನಿ ರಾಜೇಶ್ವರಿ, ಆಕೆಯ ಪ್ರೇಮಿಗಳಾದ ಶಿವಯ್ಯ ಹಾಗೂ ರಂಗಸ್ವಾಮಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಯ ರಹಸ್ಯ ಒಂದೊಂದಾಗಿಯೇ ಬಹಿರಂಗವಾಗುತ್ತಿದೆ.
ಅಷ್ಟಕ್ಕೂ ನಡೆದಿದ್ದೇನು..?
ಅಕ್ಟೋಬರ್ 18ರಂದು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಡುವಿನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಬಳಿ ಕೊಲೆ ಮಾಡಲು ಪ್ರಯತ್ನಿಸಿ ವ್ಯಕ್ತಿಯ ಕತ್ತು ಕೊಯ್ದು ಬಿಸಾಡಲಾಗಿತ್ತು. ಸಮೀಪದಲ್ಲಿ ವಾಮಾಚಾರ ನಡೆಸಿದಂತೆ ನಿಂಬೆಹಣ್ಣ, 101 ರೂಪಾಯಿ ಹಾಗೂ ಅರಿಶಿನ ಕುಂಕುಮ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಹುಣ್ಣಿಮೆಯ ದಿನ ವಾಮಾಚಾರ ನಡೆಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಬಿಂಬಿಸಲಾಗಿತ್ತು.
ಆದರೆ ಆ ವ್ಯಕ್ತಿ ಜೀವಂತವಾಗಿದ್ದ ಹಿನ್ನಲೆಯಲ್ಲಿ ಆತನ್ನು ದಾರಿ ಹೋಕರು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸದರೂ ಕೂಡ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದನು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಲ್ಲಹಳ್ಳಿ ಠಾಣೆ ಪೊಲೀಸರು, ಈ ನಿಗೂಢ ಕೊಲೆ ಪ್ರಕರಣ ಭೇದಿಸಲು ಸಿಬ್ಬಂದಿಗಳಾದ ರಸೂಲ್ ಪಾಗೇವಾಲ, ಸತೀಶ್, ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ್, ಶಿವಕುಮಾರ್, ದೊಡ್ಡಯ್ಯ, ಮಹಿಳಾ ಸಿಬ್ಬಂದಿಗಳಾದ ಆಶಾ ಹಾಗೂ ಶ್ರೀದೇವಿ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ನಿಗೂಢ ಕೊಲೆಯ ರಹಸ್ಯ ಬೆನ್ನು ಹತ್ತಿದ ಪೊಲೀಸರು ಆರೋಪಿಗಳ ಸಂಚುನ್ನು ಬಯಲು ಮಾಡಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸದಾಶಿವನನ್ನು ಪತ್ನಿ ರಾಜೇಶ್ವರಿ ತನ್ನ ಪ್ರೇಮಿಗಳ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿ, ಕೊಲೆ ಮಾಡಿ ನಂತರ ವಾಮಾಚಾರಕ್ಕೆ ಬಲಿಯಾದಂತೆ ಬಿಂಬಿಸಿದ್ದಳು ಎನ್ನಲಾಗಿದೆ.
ಆರೋಪಿ ರಾಜೇಶ್ವರಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ವಿಷಯ ಬಯಲಾಗಿದ್ದು, ಸದಾಶಿವನ ಸಂಬಂಧಿಕರೇ ಆದ ಶಿವಯ್ಯ ಮತ್ತು ರಂಗಸ್ವಾಮಿಯರೊಂದಿಗೆ ಸೇರಿ ಕೊಲೆ ಮಾಡಲು ನಿರ್ಧರಿಸಿದ್ದು, ಕೊಲೆಯ ಮೂಲವನ್ನು ದಾರಿ ತಪ್ಪಿಸಲು ವಾಮಾಚಾರದ ನಾಟಕವಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಸದ್ಯ ಪೊಲೀಸರು ರಾಜೇಶ್ವರಿ, ಶಿವಯ್ಯ ಮತ್ತು ರಂಗಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications