ಮೈಸೂರು ಅರಮನೆ ಆವರಣದಲ್ಲಿ ಟೆಂಟ್ ಶಾಲೆ: ಏನಿದರ ಉದ್ದೇಶ?
ಮೈಸೂರು, ಸೆಪ್ಟೆಂಬರ್ 09: ದಸರಾ ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಾಡಿಗಳ ಕುಟುಂಬದ ಮಕ್ಕಳಿಗೆ ಅರಮನೆ ಆವರಣದಲ್ಲಿ ಟೆಂಟ್‌ಶಾಲೆಯನ್ನು ಆರಂಭಿಸಲಾಗಿದ್ದು, ಹಾಡಿಯಿಂದ ಪೋಷಕರೊಂದಿಗೆ ಬಂದಿರುವ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಸುಮಾರು ಹದಿನೇಳು ವರ್ಷಗಳಿಂದ ಟೆಂಟ್ ಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮೈಸೂರು ದಸರಾವೇ ಹಾಗೆ ನಮಗೆ ಮೇಲ್ನೋಟಕ್ಕೆ ಜಂಬೂಸವಾರಿ ಕಾಣಬಹುದು ಆದರೆ ಅದರ ಹಿಂದಿರುವ ಶ್ರಮಗಳು ಕಾಣಿಸುವುದಿಲ್ಲ. ಸುಮಾರು ಒಂದೂವರೆ ತಿಂಗಳ ಮೊದಲೇ ಗಜಪಡೆಯನ್ನು ಆನೆಶಿಬಿರಗಳಿಂದ ಕರೆತಂದು ಅವುಗಳಿಗೆ ತಾಲೀಮು ನಡೆಸಿ ಜಂಬೂಸವಾರಿಗೆ ಸಜ್ಜುಗೊಳಿಸಬೇಕಾಗುತ್ತದೆ. ಈ ಕಾರ್ಯದಲ್ಲಿ ಮಾವುತರು ಮತ್ತು ಕಾವಾಡಿಗಳ ಪಾತ್ರ ಬಹಳಷ್ಟಿದೆ.

ಇನ್ನು ದಸರಾ ಜಂಬೂಸವಾರಿಗೆ ಆಯ್ಕೆಯಾದ ಆನೆಗಳೊಂದಿಗೆ ಅವುಗಳನ್ನು ನೋಡಿಕೊಳ್ಳುವ ಮಾವುತ ಮತ್ತು ಕಾವಾಡಿಗರನ್ನು ಕರೆತರಬೇಕು. ಅವರನ್ನಷ್ಟೆ ಅಲ್ಲದೆ ಅವರ ಕುಟುಂಬವನ್ನು ಕರೆತರಬೇಕಾಗುತ್ತದೆ. ಅಪ್ಪ ಅಮ್ಮ ಬಂದ ಬಳಿಕ ಅವರ ಜತೆಗೆ ಮಕ್ಕಳೂ ಬರುತ್ತಾರೆ. ಹೀಗೆ ಬರುವ ಮಕ್ಕಳು ಸ್ಥಳೀಯ ಶಾಲೆಗಳಲ್ಲಿ ಓದುತ್ತಿರುತ್ತಾರೆ. ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
ಕಾವಾಡಿ, ಮಾವುತರ ಮಕ್ಕಳಿಗೆ ಟೆಂಟ್ ಶಾಲೆ
ಹಿಂದೆ ದಸರಾ ಕಳೆಯುವ ಹೊತ್ತಿಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಡಕಾಗುತ್ತಿತ್ತು. ಇದನ್ನರಿತು ದಸರಾ ಸಂದರ್ಭ ಕಾವಾಡಿ ಮತ್ತು ಮಾವುತರ ಮಕ್ಕಳಿಗೆ ಟೆಂಟ್ ಶಾಲೆಯನ್ನು ನಡೆಸುತ್ತಾ ಬರಲಾಗುತ್ತಿದೆ. ವಿವಿಧ ಆನೆಶಿಬಿರಗಳಲ್ಲಿ ಆನೆಗಳ ಲಾಲನೆ ಪೋಷಣೆ ಮಾಡುತ್ತಾ ನೆಲೆಸಿರುವ ಮಾವುತ ಮತ್ತು ಕಾವಡಿಗಳ ಮಕ್ಕಳು ಸ್ಥಳೀಯ ಶಾಲೆಗಳಲ್ಲಿ ಓದುತ್ತಿದ್ದಾರೆ. ದಸರಾ ಸಂದರ್ಭ ಆನೆಗಳೊಂದಿಗೆ ತಮ್ಮ ಪೋಷಕರು ಮೈಸೂರಿಗೆ ಆಗಮಿಸುವಾಗ ಮಕ್ಕಳು ಬರುವುದು ಅನಿವಾರ್ಯವಾಗುತ್ತದೆ.

ಪೋಷಕರೊಂದಿಗೆ ಬರುವ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕಾಗಿ ಟೆಂಟ್ ಶಾಲೆಯನ್ನು ಆರಂಭಿಸಿ ನುರಿತ ಶಿಕ್ಷಕರಿಂದ ಪಾಠ ಹೇಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಸಾಕಾನೆಯೊಂದಿಗೆ ಮಾವುತ ಮತ್ತು ಕಾವಾಡಿಗಳ ಕುಟುಂಬಗಳಿಗೆ ಆನೆಗಳ ಲಾಲನೆ ಪಾಲನೆಯಲ್ಲಿಯೇ ಹೆಚ್ಚಿನ ಸಮಯ ಕಳೆದು ಹೋಗುತ್ತದೆ. ಹೀಗಿರುವಾಗ ಮಕ್ಕಳತ್ತ ಗಮನಹರಿಸುವುದು ಪೋಷಕರಿಗೆ ಕಷ್ಟವಾಗುತ್ತದೆ.
ಕಲಿಕೆಯ ಆಸಕ್ತಿ ಮೂಡಿಸುವ ಟೆಂಟ್ ಶಾಲೆ
ಈ ನಡುವೆ ಈ ಮಕ್ಕಳ ಹೆತ್ತವರು ಆನೆಗಳ ಆರೈಕೆಯಲ್ಲಿ ತೊಡಗಿಸಿಕೊಂಡರೆ, ಮಕ್ಕಳು ಆಟಪಾಠದೊಂದಿಗೆ ಖುಷಿಯಾಗಿ ಕಾಲಕಳೆಯುವ ಉದ್ದೇಶದಿಂದ ಟೆಂಟ್ ಶಾಲೆಯನ್ನು ಶುರು ಮಾಡಲಾಗಿದೆ. ಮೊದಲೆಲ್ಲ ಮಾವುತರು ಮತ್ತು ಕಾವಾಡಿಗಳು ತಮ್ಮ ಕುಟುಂಬ ಸಹಿತ ಆನೆಗಳೊಂದಿಗೆ ಬಂದು ಅರಮನೆ ಆವರಣದಲ್ಲಿ ಬೀಡು ಬಿಡುತ್ತಿದ್ದಾಗ ಅವರೊಂದಿಗೆ ಬರುತ್ತಿದ್ದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಿಡುತ್ತಿದ್ದರು.
ಸುಮಾರು ನಲುವತೈದು ದಿನಗಳಿಗೂ ಹೆಚ್ಚು ಸಮಯ ಕುಟುಂಬದೊಂದಿಗೆ ಇರುತ್ತಿದ್ದ ಮಕ್ಕಳು ಶಾಲೆಯನ್ನೇ ಮರೆತು ಬಿಡುತ್ತಿದ್ದರು ಇದನ್ನು ಮನಗಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಕಾರಣದಿಂದ ಟೆಂಟ್‌ಶಾಲೆಯನ್ನು ಸುಮಾರು ಒಂದೂವರೆ ದಶಕಗಳ ಹಿಂದೆ ಆರಂಭಿಸಲಾಗಿದೆ. ಈ ತಾತ್ಕಾಲಿಕ ಟೆಂಟ್‌ಶಾಲೆ ದಸರಾ ಕಳೆಯುವ ತನಕ ನಡೆಯಲಿದೆ. ಈ ಟೆಂಟ್ ಶಾಲೆ ಬರೀ ಶಾಲೆಯಂತೆ ಇರದೆ ಮಕ್ಕಳಿಗೆ ಕಲಿಕೆಯತ್ತ ಆಸಕ್ತಿ ಮೂಡಿಸಲಿದೆ.
ನಲಿ-ಕಲಿ ವಿಧಾನದಲ್ಲಿ ಪಾಠ ಪ್ರವಚನ
ಇಲ್ಲಿ ಶಿಕ್ಷಕರು ನಲಿ-ಕಲಿ ವಿಧಾನದಲ್ಲಿ ಪಾಠ ಮಾಡಲಿದ್ದು, ಮಕ್ಕಳಿಗೆ ಕಥೆ ಹೇಳುವುದು, ಪುಸ್ತಕಗಳ ಪರಿಚಯ, ಚಿತ್ರಪುಸ್ತಕಗಳು, ದಿನಪತ್ರಿಕೆಗಳನ್ನು ಓದುವುದು, ಪುಸ್ತಕ ಓದುವ ಕೌಶಲ್ಯ, ಕವಿತೆ ಓದುವುದು, ನಾಟಕಗಳ ಪರಿಚಯ, ಪ್ರಸಿದ್ಧ ಜನರ ಪರಿಚಯ, ವನ್ಯಜೀವ ಕುರಿತ ಪುಸ್ತಕಗಳ ಅರಿವು, ಪ್ರಬಂಧ ವಿಜ್ಞಾನಿ, ಪ್ರಾಥಮಿಕ ಗಣಿತ ಮೊದಲಾದ ವಿಷಯಗಳ ಬಗ್ಗೆ ಹೇಳಿಕೊಡುವ ಮೂಲಕ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವಂತೆ ಮಾಡಲಾಗುತ್ತಿದೆ.
ಮೊದಲು ಟೆಂಟ್ ಹಾಕಿ ಶಾಲೆಯನ್ನು ನಿರ್ಮಿಸಲಾಗುತ್ತಿತ್ತಾದರೂ ಕಳೆದ ಎರಡು ವರ್ಷಗಳಿಂದ ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕವಿರುವ ಕಟ್ಟಡದಲ್ಲಿ ತಾತ್ಕಾಲಿಕ ಶಾಲೆ ಕಾರ್ಯಾರಂಭ ಮಾಡಿದೆ. ಸದ್ಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದರೂ ಜನ ಟೆಂಟ್ ಶಾಲೆ ಎಂದೇ ಕರೆಯುತ್ತಾರೆ. ಅದರಂತೆ ಶಾಲೆಯ ಬಿಆರ್‌ಸಿಯಾಗಿ ಎಂ.ಡಿ.ಶ್ರೀಕಂಠಸ್ವಾಮಿ, ನೋಡಲ್ ಅಧಿಕಾರಿಯಾಗಿ ಎಸ್.ಕೆ.ಮಂಜುಳಾ ಕಾರ್ಯನಿರ್ವಹಿಸಲಿದ್ದಾರೆ. 1ರಿಂದ 10ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಾದ ನೂರ್‌ಫಾತಿಮಾ, ಮೌಸೀನ್ ತಾಜ್ ಹಾಗೂ ದಿವ್ಯಾ ಪ್ರಿಯದರ್ಶಿನಿ ಅವರನ್ನು ನಿಯೋಜಿಸಲಾಗಿದೆ.
ಹೇಗಿರಲಿದೆ ಗೊತ್ತಾ ಪಾಠ ಪ್ರವಚನ?
ಶಿಕ್ಷಕಿ ನೂರ್‌ಫಾತಿಮಾ ಅವರು ಮಾವುತರು, ಕಾವಾಡಿಗಳ ಮಕ್ಕಳಿಗೆ ಬಹಳ ವರ್ಷಗಳಿಂದ ಪಾಠ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ, ಇವರೊಂದಿಗೆ ಈ ಮಕ್ಕಳು ಉತ್ತಮ ಒಡನಾಟ ಹೊಂದಿದ್ದಾರೆ. ಈ ಬಾರಿ ತಾತ್ಕಾಲಿಕ ಶಾಲೆಯಲ್ಲಿ 30 ರಿಂದ 40 ಮಕ್ಕಳು ಪಾಲ್ಗೊಳ್ಳುವ ಸಾಧ್ಯತೆಯಿದೆ. ಟೆಂಟ್ ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 9.45 ರಿಂದ ಮಧ್ಯಾಹ್ನ 3.30ರವರೆಗೆ ತರಗತಿಗಳು ನಡೆಯಲಿದೆ. ದಾಖಲಾಗುವ ಮಕ್ಕಳನ್ನು ತರಗತಿವಾರು ವಿಂಗಡಣೆ ಮಾಡಿ, ಮುಖ್ಯ ವಿಷಯಗಳನ್ನು ಬೋಧಿಸಲಾಗುತ್ತದೆ.
ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮಕ್ಕಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಈ ಮಕ್ಕಳಿಗೆ ಇಸ್ಕಾನ್‌ನಿಂದ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ. ಒಟ್ಟಾರೆ ದಸರಾ ಆನೆಗಳ ಲಾಲನೆ ಪಾಲನೆ ಮಾಡುವ ಮಾವುತ ಮತ್ತು ಕಾವಾಡಿಗಳು ತಮ್ಮ ಪತ್ನಿ ಮಕ್ಕಳೊಂದಿಗೆ ಬಂದು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿ ಆನೆಗಳನ್ನು ದಸರಾ ಜಂಬೂಸವಾರಿಗೆ ತಯಾರಿ ಮಾಡುವ ಕಾರ್ಯದಲ್ಲಿದ್ದರೆ, ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದೆ, ಟೆಂಟ್ ಶಾಲೆಯಲ್ಲಿ ಕುಳಿತು ಪಾಠ ಕಲಿಯುತ್ತಿದ್ದಾರೆ. ಇದೆಲ್ಲವೂ ಮೈಸೂರು ದಸರಾದ ವಿಶೇಷ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications