ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲಸ ಕೊಡಿಸಲಿಲ್ಲ ಎಂದು ತನ್ವೀರ್ ಸೇಠ್ ಗೆ ಇರಿದನೇ ಆರೋಪಿ?

|
Google Oneindia Kannada News

ಮೈಸೂರು, ನವೆಂಬರ್ 18: ಆರತಕ್ಷತೆಗೆ ತೆರಳಿದ್ದ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಮೇಲೆ ವ್ಯಕ್ತಿಯೊಬ್ಬ ಕತ್ತಿಯಿಂದ ಕುತ್ತಿಗೆಗೆ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು, ಘಟನೆಯಲ್ಲಿ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹತ್ಯೆ ಯತ್ನಕ್ಕೆ ಕಾರಣವೇನು ಎಂಬ ಕುರಿತು ತನಿಖೆ ಮುಂದುವರೆದಿದೆ.

ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ತೀವ್ರ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಅವರ ಆರೋಗ್ಯ ಕುರಿತಂತೆ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಹೇಳಿಕೆ ನೀಡಿದ್ದು, ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ರಕ್ತನಾಳ, ನರಗಳಿಗೆ ಪೆಟ್ಟು ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ.

 ಕುತ್ತಿಗೆಯಲ್ಲಿನ ನರಕ್ಕೆ ಹಾನಿ

ಕುತ್ತಿಗೆಯಲ್ಲಿನ ನರಕ್ಕೆ ಹಾನಿ

ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದಿರುವುದರಿಂದ ಹೃದಯ ಮತ್ತು ಮೆದುಳಿಗೆ ಸಂಪರ್ಕಿಸುವ ನರಕ್ಕೆ ಹಾನಿಯಾಗಿದೆ. ಇನ್ನು 48 ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ. ಒಳಗಿನ ನರಗಳಿಗೆ ಹಾನಿಯಾಗಿದೆಯಾ ಎಂಬುದು ಮುಂದಿನ ಹಂತದ ಚಿಕಿತ್ಸೆಯಲ್ಲಿ ತಿಳಿಯಬೇಕಾಗಿದೆ. ರಾತ್ರಿಯೇ ಗಾಯಗಳಿಗೆ ರಕ್ತಸ್ರಾವವಾಗದ ರೀತಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಿಪಿ, ಶುಗರ್ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಇಷ್ಟನ್ನು ಹೊರತು ಪಡಿಸಿ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲ. ಜನರು ಪ್ರಾರ್ಥನೆ ಮಾಡಲಿ, ಆಸ್ಪತ್ರೆಗೆ ಬರುವುದು ಬೇಡ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಆಸ್ಪತ್ರೆಗೆ ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಆರೋಗ್ಯದ ಕುರಿತಂತೆ ಮಾಹಿತಿ ಪಡೆದಿದ್ದಾರೆ.

ಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿಯಿಂದ ಹಲ್ಲೆ, ತೀವ್ರ ಗಾಯಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿಯಿಂದ ಹಲ್ಲೆ, ತೀವ್ರ ಗಾಯ

 ಆರೋಪಿ ಯಾರು? ಕೊಲೆಗೆ ಯತ್ನಿಸಿದ್ದೇಕೆ?

ಆರೋಪಿ ಯಾರು? ಕೊಲೆಗೆ ಯತ್ನಿಸಿದ್ದೇಕೆ?

ಕೊಲೆಗೆ ಯತ್ನಿಸಿದವನು ಗೌಸಿಯಾ ನಗರ ನಿವಾಸಿ ಫರ್ಹಾನ್ ಪಾಷಾ (24) (ಈತ ಎಸ್‌ಡಿಪಿಐ ಕಾರ್ಯಕರ್ತ ಎನ್ನಲಾಗುತ್ತಿದ್ದು ಇದು ನಿಜವೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ) ತಾನೇ ಹಲ್ಲೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದು, ಅವರು ರಾಜಕೀಯವಾಗಿ ಏನೂ ಮಾಡಿಲ್ಲ. ಯಾರಿಗೂ ಅವರಿಂದ ಸಹಾಯವಾಗಿಲ್ಲ. ಇದರಿಂದ ನೊಂದು ಅವರ ಮೇಲೆ ಹತ್ಯೆಗೆ ಯತ್ನ ನಡೆಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಜೊತೆಗೆ ಕೆಲಸ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಈತ ತನ್ವೀರ್ ಸೇಠ್ ಹತ್ಯೆ ಮಾಡಲು ಯತ್ನಿಸಿರುವುದಾಗಿ ಮೂಲಗಳು ತಿಳಿಸಿವೆ.

ಎನ್.ಆರ್.ಮೊಹಲ್ಲಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇಲ್ಲಿ ಈ ಹಿಂದಿನಿಂದಲೂ ತನ್ವೀರ್ ಸೇಠ್ ಪ್ರಭಾವಿ ನಾಯಕರಾಗಿದ್ದಾರೆ. ಆದರೆ ಫರ್ಹಾನ್ ಪಾಷಾ ಇದೀಗ ತನ್ವೀರ್ ಸೇಠ್ ಮೇಲೆ ಹತ್ಯಾ ಯತ್ನ ನಡೆಸಲು ಕಾರಣ ಕ್ಷೇತ್ರಕ್ಕೆ ಅವರಿಂದ ಯಾವುದೇ ಉಪಯೋಗವಾಗಿಲ್ಲ ಎಂಬ ಅಸಮಾಧಾನ ಎಂದು ಹೇಳಲಾಗುತ್ತಿದೆಯಾದರೂ ಅದೊಂದೇ ವಿಚಾರ ಆತನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿತ್ತಾ? ಅಥವಾ ಇನ್ನು ಬೇರೆ ಏನಾದರೂ ಕಾರಣ ಇದೆಯಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.

 ಎಲ್ಲರ ಸಮ್ಮುಖದಲ್ಲೇ ಮಚ್ಚು ಬೀಸಿದ್ದ ಆರೋಪಿ

ಎಲ್ಲರ ಸಮ್ಮುಖದಲ್ಲೇ ಮಚ್ಚು ಬೀಸಿದ್ದ ಆರೋಪಿ

ಮೈಸೂರು ನಗರದ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನದಲ್ಲಿ ನ.17ರ ಭಾನುವಾರ ರಾತ್ರಿ ವಿವಾಹದ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಈ ಶುಭಕಾರ್ಯದಲ್ಲಿ ಭಾಗವಹಿಸುವ ಸಲುವಾಗಿ ಕುಟುಂಬ ಸಮೇತ ತನ್ವೀರ್ ಸೇಠ್ ತೆರಳಿದ್ದರು. ಇವರ ಜತೆ ಗನ್ ಮ್ಯಾನ್ ಸೇರಿದಂತೆ ಹಲವು ಕಾರ್ಯಕರ್ತರು, ಆಪ್ತರು ಇದ್ದರು. ತನ್ವೀರ್ ಸೇಠ್ ಆರತಕ್ಷತೆಗೆ ಬರುವ ವಿಚಾರ ತಿಳಿದಿದ್ದ ಆರೋಪಿ ಮಚ್ಚಿನೊಂದಿಗೆ ಬಂದು ಅವಕಾಶಕ್ಕಾಗಿ ಹೊಂಚು ಹಾಕಿ ಕೂತಿದ್ದನು. ಕೆಲವರು ಹೇಳುವ ಪ್ರಕಾರ, ಆತನೊಂದಿಗೆ ಇನ್ನೊಂದಷ್ಟು ಮಂದಿ ಕಾರಿನಲ್ಲಿ ಬಂದಿದ್ದರು. ಘಟನೆ ನಡೆಯುತ್ತಿದ್ದಂತೆಯೇ ಅವರು ಪರಾರಿಯಾಗಿದ್ದಾರೆ. ಆರತಕ್ಷತೆಗೆ ಆಗಮಿಸಿದ ತನ್ವೀರ್ ಸೇಠ್ ವೇದಿಕೆಗೆ ತೆರಳಿ ವರನನ್ನು ಮಾತನಾಡಿಸಿಕೊಂಡು ವೇದಿಕೆ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು.

ಮಾತನಾಡಿಸುವನಂತೆ ಬಂದವನು ಮಚ್ಚು ಬೀಸಿದ

ಮಾತನಾಡಿಸುವನಂತೆ ಬಂದವನು ಮಚ್ಚು ಬೀಸಿದ

ಸಾಮಾನ್ಯವಾಗಿ ಶಾಸಕರು ಬಂದಾಗ ಕಾರ್ಯಕರ್ತರು ಹತ್ತಿರಕ್ಕೆ ಬಂದು ಮಾತನಾಡಿಸುವುದು ಮಾಮೂಲಿಯಾದ್ದರಿಂದ ಎಲ್ಲರೂ ತಮ್ಮ ಪಾಡಿಗೆ ಇದ್ದರು. ಇದ್ದಕ್ಕಿದ್ದಂತೆಯೇ ಕ್ಷಣ ಮಾತ್ರದಲ್ಲಿ ಮಚ್ಚನ್ನು ತೆಗೆದ ಆತ ಶಾಸಕರ ಕತ್ತಿನ ಎಡಭಾಗಕ್ಕೆ ಬಲವಾಗಿ ಬೀಸಿದ್ದಾನೆ. ಹತ್ತಿರದಲ್ಲಿದ್ದವರಿಗೆ ಏನಾಗುತ್ತಿದೆ ಎಂಬುದು ತಿಳಿಯುವ ವೇಳೆಗೆ ಆತ ಮಚ್ಚು ಬೀಸಿ ಓಡುವ ಪ್ರಯತ್ನ ಮಾಡಿದ್ದನು. ಆದರೆ ಇದನ್ನು ಗಮನಿಸಿದ ನಗರ ಪಾಲಿಕೆ ಮಾಜಿ ಸದಸ್ಯ ಸುಹೇಲ್ ಎಂಬುವರು ಕೂಗಿ ಕೊಂಡಿದ್ದಾರೆ. ಅಲ್ಲಿದ್ದವರು ಫರಾನ್ ಹಿಡಿಯಲು ಅಟ್ಟಿಸಿಕೊಂಡು ಹೋಗಿದ್ದಾರೆ. ಆಗ ಆತ ಮೊಬೈಲ್, ಮಚ್ಚು ಎಸೆದು ಓಡಲು ಮುಂದಾದನಾದರೂ ಅವನನ್ನು ಹಿಡಿದು ಚೆನ್ನಾಗಿ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಕ್ಷಣವೇ ಅಲ್ಲಿದ್ದವರು ತನ್ವೀರ್ ಸೇಠ್ ಅವರನ್ನು ಕರೆದುಕೊಂಡು ಬಂದು ಸಮೀಪದ ಕೊಲಂಬಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಆರಂಭಿಸಿದ್ದಾರೆ.

 ಕೊಲೆಯತ್ನದ ಹಿಂದೆ ಕಾಣದ ಕೈವಾಡವಿದೆಯಾ?

ಕೊಲೆಯತ್ನದ ಹಿಂದೆ ಕಾಣದ ಕೈವಾಡವಿದೆಯಾ?

ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್, ಎನ್ ಆರ್ ಎಸಿಪಿ ಗಜೇಂದ್ರ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು ಫರಾನ್ ಪಾಷಾ ಕೃತ್ಯ ಎಸಗಲು ಆತನ ಹಿಂದೆ ಯಾವುದಾದರು ಸಂಘಟನೆಯ ಕೈವಾಡವಿದೆಯಾ? ಆತ ನೀಡುತ್ತಿರುವ ಕಾರಣಗಳೇ ನಿಜವೇ? ಆತನನ್ನು ಮುಂದೆ ಬಿಟ್ಟು ಬೇರೆ ಯಾರಾದರೂ ಬೇಳೆ ಬೇಯಿಸಿಕೊಳ್ಳುತ್ತಿದ್ದಾರಾ? ಇಷ್ಟಕ್ಕೂ ತನ್ವೀರ್ ಸೇಠ್ ಅವರ ಹತ್ಯೆಗೆ ಎಷ್ಟು ದಿನಗಳಿಂದ ಕಾಯಲಾಗಿತ್ತು? ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

English summary
'Tanveer Sait Did Nothing to our constituency, so i attempt to murder him" said An accused who stabbed former minister Tanveer Sait in myuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X