ಸಿದ್ದರಾಮಯ್ಯಗೆ ಪಿತ್ತ ನೆತ್ತಿಗೇರಿದಂತಿದೆ ಎಂದು ಗುಡುಗಿದ ವಿಶ್ವನಾಥ್
ಮೈಸೂರು, ಅಕ್ಟೋಬರ್ 5 : "ಸಿದ್ದರಾಮಯ್ಯಗೆ ಪಿತ್ತ ನೆತ್ತಿಗೇರಿದಂತಿದೆ. ವಿಶ್ವನಾಥ್‌ಗೆ ಕುರುಬರು ಮತ ಹಾಕಬೇಡಿ ಎಂದು ಹೇಳಲು ಸಿದರಾಮಯ್ಯ ಯಾರು? ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿ ಹೇಳುವುದು ಪ್ರಜಾತಂತ್ರ ವಿರೋಧಿ ಗೊತ್ತೇನ್ರಿ?" ಹೀಗೆ ತರಾಟೆಗೆ ತೆಗೆದುಕೊಂಡಿದ್ದು ಮಾಜಿ ಸಚಿವ, ಈಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಎಚ್.ವಿಶ್ವನಾಥ್.
ಮೈಸೂರಿನಲ್ಲಿ ಬುಧವಾರ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದ ವಿಶ್ವನಾಥ್, ಹುಣಸೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಶ್ವನಾಥ್ ಗೆ ಕುರುಬರು ಮತ ಹಾಕಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ರೀತಿ ಹೇಳಲು ಇವರಿಗೆ ಯಾವ ಅಧಿಕಾರವಿದೆ? ನನಗೆ ಮತ ಹಾಕಬೇಡಿ ಎಂದು ಹೇಳುವುದಕ್ಕೆ ನಿಮ್ಮ ಬಳಿ ಯಾವ ಕಾರಣ ಇದೆ ಎಂದು ಪ್ರಶ್ನಿಸಿದರು.

ನನಗೆ ಚುನಾವಣೆಗೆ ನಿಲ್ಲುವ ಅರ್ಹತೆ ಇಲ್ಲವೆ? ನೀವು ಜಾತಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದೀರಿ. ಜನತಂತ್ರದ ವ್ಯವಸ್ಥೆಯಲ್ಲಿ ಮತ ಕೇಳಬೇಕು. ಇಂಥವರಿಗೆ ಮತ ಹಾಕಬೇಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿಯಾಗಿ ನಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಅಂದುಕೊಂಡಿದ್ದಾರೆ ಸಿದ್ದರಾಮಯ್ಯ. ಆದರೆ ಅದು ಸಾಧ್ಯವಿಲ್ಲ. ಎಲ್ಲರೂ ನಿಮ್ಮ ಮಾತನ್ನು ಕೇಳುವ ಅಗತ್ಯವೂ ಇಲ್ಲ. ಮತದಾರರಿಗೆ ವಿವೇಚನೆ ಇದೆ. ನೀವು ಮತ ಹಾಕಬೇಡಿ ಎಂದು ಹೇಳಿದಾಕ್ಷಣ ನಿಮ್ಮ ಮಾತೇ ಅಂತಿಮವಲ್ಲ ಎಂದರು.
ಮುಂದಿನ ಬಾರಿಯೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಬೀಗುತ್ತಿದ್ದಾರೆ. ಅವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರೈತ, ಜನ ವಿರೋಧಿ ಪಕ್ಷಗಳು. ಎರಡೂ ಪಕ್ಷಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ನಿಂದ 'ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ' ಆರಂಭವಾಗಿದೆ. ಆದರೆ ಅದು ಕೇವಲ ಮನೆಗಳಿಗಷ್ಟೆ ಸೀಮಿತವಾಗಿಲ್ಲ. ಮನಗಳಿಗೂ ಕುಮಾರಣ್ಣ ಲಗ್ಗೆ ಇಡಲಿದ್ದಾರೆ. ಕುಮಾರಣ್ಣ ಅವರನ್ನು ಮನೆ- ಮನಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ನಾನೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲ ಕಾರ್ಯಕ್ರಮಗಳ ಮೂಲಕ ಜೆಡಿಎಸ್ ಜನರ ಬಳಿಗೆ ತೆರಳಲಿದೆ ಎಂದು ಹೇಳಿದರು.












Click it and Unblock the Notifications