ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಿ: ಮೈಸೂರು ಜಿಲ್ಲಾಧಿಕಾರಿ
ಮೈಸೂರು, ಜೂನ್ 6: ಮೈಸೂರಿನಲ್ಲಿ ಡೆಂಗ್ಯೂ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೂಡಲೇ ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ. ರಂದೀಪ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡೆಂಗ್ಯೂ ಪ್ರಕರಣ ಕುರಿತು ಸಂಪೂರ್ಣ ಅಂಕಿ ಅಂಶಗಳ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದರು. ಆರೋಗ್ಯ ಶಿಕ್ಷಣದ ಮೂಲಕ ಅರಿವು ಮೂಡಿಸುವುದಕ್ಕಾಗಿ ಮೇ. 16 ನ್ನು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ ಎಂದ ಅವರು, ಡೆಂಗ್ಯೂ, ಚಿಕೂನ್ ಗುನ್ಯಾ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.[ಡೆಂಗ್ಯೂ ಮಹಾಮಾರಿಗೆ ಮೈಸೂರಿನಲ್ಲಿ ಮತ್ತೊಂದು ಬಲಿ]

ಮಳೆಗಾಲ ಆರಂಭವಾಗಿದ್ದು, ರಸ್ತೆಯ ಅಕ್ಕಪಕ್ಕಗಳಲ್ಲಿ ಕಸ ಕಡ್ಡಿಗಳು, ನಿಂತು ನೀರು ನಿಲ್ಲದಂತೆ ಗಮನ ಹರಿಸಿ, ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳನ್ನು ತೊಡೆದು ಹಾಕಿ ಎಂದರು. ಈ ಸಂದರ್ಭ ಅಧಿಕಾರಿಗಳು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು
ಡೆಂಗ್ಯೂ ನಿಯಂತ್ರಣಕ್ಕಾಗಿ ಫಾಗ್ ಸಿಂಪಡನೆ
ಇತ್ತ ಡೆಂಗ್ಯೂ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಮುನ್ನೆಚರಿಕೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಮೈಸೂರಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಫಾಗಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರಂತೆ ಶ್ರೀರಾಂಪುರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷೆ ಚೂಡಾಮಣಿ ನೇತೃತ್ವಲ್ಲಿ ಫಾಗಿಂಗ್ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.[ಮಾರಕ ಡೆಂಗ್ಯೂ ಮಾರಿಗೆ ಮೈಸೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಸಾವು]

ಮಳೆಗಾಲ ಆರಂಭಕ್ಕೂ ಮುನ್ನ ಹಲವು ಕಡೆ ಡೆಂಗ್ಯೂ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಮಾಬಾಯಿನಗರ, ಜೆ.ಪಿ.ನಗರ, ಶ್ರೀರಾಂಪುರ, ಶ್ರೀನಗರ ಬಡಾವಣೆಗಳಲ್ಲಿ ಫಾಗಿಂಗ್ ನಡೆಸಲಾಯಿತು. ಅಶೋಕ್ ಪುರಂ 13ನೇ ಕ್ರಾಸ್ ನಲ್ಲಿನ 20ಕ್ಕೂ ಹೆಚ್ಚು ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ಎಲ್ಲೆಡೆಯೂ ಸೊಳ್ಳೆಯನ್ನು ಕೊಲ್ಲುವ ಕಾರ್ಯ ಭರದಿಂದ ನಡೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಡೆಂಗ್ಯೂ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯಾಚರಣೆ ನಡೆದಿದೆ. ಕಳೆದೊಂದು ತಿಂಗಳಿನಲ್ಲೇ ಡೆಂಗ್ಯೂ ರೋಗದಿಂದ ಮೈಸೂರಿನಲ್ಲಿ ಐದು ಜನರು ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications