ಬಿಜೆಪಿಗೆ ಕಂಡೀಶನ್ ಹಾಕುವ ಮಟ್ಟದಲ್ಲಿ ನಾವಿಲ್ಲ: ಎಸ್.ಟಿ.ಸೋಮಶೇಖರ್
ಮೈಸೂರು, ಡಿಸೆಂಬರ್ 10: ನಾನು ಬಿಜೆಪಿ ಸರ್ಕಾರದಲ್ಲಿ ಯಾವುದೇ ಖಾತೆಯನ್ನು ಕೇಳಿಲ್ಲ, ಆ ಪಕ್ಷದಲ್ಲಿ ಕಂಡೀಶನ್ ಹಾಕುವ ಮಟ್ಟದಲ್ಲಿ ನಾವು ಇಲ್ಲ ಎಂದು ಯಶವಂತಪುರ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಲ್ಲಿ ಇಂದು ಮಾತನಾಡಿದ ಸೋಮಶೇಖರ್ ಅವರು, ಬಿಜೆಪಿ ಪಕ್ಷಕ್ಕೆ ನಾವು ಸೇರುವಾಗ ಕೇವಲ ಅನುದಾನ ಕೇಳಿದ್ದೇವು, ಅವರು ನಮಗೆ ಟಿಕೆಟ್ ನೀಡಿ ಗೆಲ್ಲುವಂತೆ ನೋಡಿಕೊಂಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿಯವರು ನಮ್ಮನ್ನು ಗೌರವದಿಂದ ನೋಡಿಕೊಂಡಿದ್ದಾರೆ, ನಾವು ಯಾವುದೇ ಖಾತೆಗೆ ಬಿಗಿಪಟ್ಟು ಹಿಡಿದಿಲ್ಲ, ಅದರ ಬಗ್ಗೆ ಅವರೂ ಮಾತನಾಡಿಲ್ಲ ಎಂದು ಹೇಳಿದರು. ಯಾವುದೇ ಖಾತೆ ಕೊಟ್ಟರೂ ಓಕೆ, ಇಂತಹದೇ ಬೇಕೆಂದು ಕೇಳಲ್ಲ, ಆ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿಲ್ಲ ಎಂದರು.

ಅಲ್ಲದೇ ಮಂಗಳವಾರ ಸಂಜೆ ನಾವೆಲ್ಲರೂ ಸಭೆ ಸೇರಲಿದ್ದೇವೆ, ಉಪ ಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರು ಸೇರಿ ಮುಂದಿನ ತೀರ್ಮಾನದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಬಗ್ಗೆ ಮಾತನಾಡಿದ ಅವರು, ಉಪ ಚುನಾವಣೆಯ ಸೋಲಿಗೆ ಬೇಜಾರಾಗಿ ರಾಜೀನಾಮೆ ನೀಡಿರಬಹುದು, ಆದರೆ ಹೈಕಮಾಂಡ್ ಅದನ್ನು ಸ್ವೀಕರಿಸಿವುದಿಲ್ಲ ಎಂದು ಹೇಳಿದರು.
ಹಾಗೆಯೇ ಸಿದ್ದರಾಮಯ್ಯ ಈಗಲೂ ನಮ್ಮ ಆಪ್ತರು, ಇದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಪಕ್ಷ 10 ರಿಂದ 12 ಸ್ಥಾನ ಗೆಲ್ಲಬಹುದೆಂದು ತಿಳಿದುಕೊಂಡಿದ್ದರು. ಆದರೆ ಅವರ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ ಎಂದರು.
ಜೆಡಿಎಸ್ ನ ಇಂದಿನ ಪರಿಸ್ಥಿತಿಗೆ ಅವರು 14 ತಿಂಗಳು ಮಾಡಿದ ಆಡಳಿತವೇ ಕಾರಣ ಎಂದು ಆರೋಪಿಸಿದರು. ಆಡಳಿತದಲ್ಲಿ ಯಾವ ಸರ್ಕಾರ ಇರುತ್ತದೆಯೋ ಅದೇ ಪಕ್ಷ ಉಪ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಸೋಮಶೇಖರ್ ತಿಳಿಸಿದರು.











Click it and Unblock the Notifications