ಕೆರೆಗಳ ಅಭಿವೃದ್ಧಿಯತ್ತ ಸರ್ಕಾರದ ನಿರ್ಲಕ್ಷ್ಯ: ಮೈಸೂರಿನ ಹೊಸಕಟ್ಟೆ, ಮುಳ್ಳಕೆರೆಗಳಿಂದ ನೀರು ಪೋಲು!

ಮೈಸೂರು, ನವೆಂಬರ್‌ 18: ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಕೆರೆಕಟ್ಟೆಗಳು ತುಂಬಿ ನೀರು ಅಲೆಯಾಡುತ್ತಿದೆ. ಜೊತೆಗೆ ಎಲ್ಲೆಡೆಯೂ ಹಸಿರಿನ ವಾತಾವರಣ ನಿರ್ಮಾಣವಾಗಿದೆ. ಜಾನುವಾರುಗಳಿಗೆ ಹಸಿರು ಮೇವಿಗೂ ತೊಂದರೆಯಾದಂತೆ ಕಾಣುತ್ತಿಲ್ಲ. ಕೆರೆಕಟ್ಟೆಗಳಲ್ಲಿ ನೀರು ತುಂಬಿರುವ ಕಾರಣ ಅಂತರ್ಜಲ ಹೆಚ್ಚಳವಾಗಿದ್ದು, ಕೊಳವೆ ಬಾವಿಗಳಲ್ಲಿ ಯಥೇಚ್ಛವಾಗಿ ನೀರು ಬರುತ್ತಿದೆ.

ಇದು ಹೀಗೆಯೇ ಉಳಿದರೆ ಮುಂದಿನ ಬೇಸಿಗೆಯ ದಿನಗಳಲ್ಲಿ ರೈತರು ನೆಮ್ಮದಿಯಾಗಿ ಕೃಷಿ ಮಾಡಲು ಸಾಧ್ಯವಾಗಲಿದೆ. ಆದರೆ ಎಲ್ಲೋ ಒಂದು ಕಡೆ ಸರ್ಕಾರ ಕೆರೆಗಳತ್ತ ಹೆಚ್ಚಿನ ಆಸಕ್ತಿ ವಹಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Water Constantly Leaking In Mysore Hoskatte And Mullakere Lakes

ಮೈಸೂರು ಜಿಲ್ಲೆಯಾದ್ಯಂತ ಅಡ್ಡಾಡಿದರೆ ಹತ್ತಾರು ಕೆರೆಗಳು ಕಾಣಿಸುತ್ತಿದ್ದು ಎಲ್ಲವೂ ತುಂಬಿರುವುದು ಖುಷಿಕೊಡುತ್ತಿದೆ. ಅದೇ ರೀತಿಯಲ್ಲಿ ಕೆರೆಗಳ ನಿರ್ವಹಣೆ ಮಾಡದಿರುವುದು ನೀರು ಪೋಲಾಗಲು ಕಾರಣವಾಗಿದ್ದು, ಇದರಿಂದ ಮುಂದಿನ ಬೇಸಿಗೆಯ ತನಕ ನೀರನ್ನು ಕೆರೆಯಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗದೆ ರೈತರು ಹಿಡಿಶಾಪ ಹಾಕುವಂತಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಟ್ಟಗುಡ್ಡ, ಹೊಲಗದ್ದೆಗಳಿಂದ ಹರಿದು ಬರುವ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದೆ. ಧಾರಾಕಾರ ಮಳೆಗೆ ಕೆಲವು ಕೆರೆಗಳು ತುಂಬಿ ಹರಿದರೆ ಮತ್ತೆ ಕೆಲವು ಬೃಹತ್ ಕೆರೆಗಳು ಭರ್ತಿಯಾಗುವುದೇ ವಿಶೇಷವಾಗಿವೆ.

Water Constantly Leaking In Mysore Hoskatte And Mullakere Lakes

ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಕೆರೆಗಳಿಗೆ ನೀರೇ ಹರಿದು ಬಂದಿರಲಿಲ್ಲ. ಹೀಗಾಗಿ ಬೇಸಿಗೆ ಮುನ್ನವೇ ಕೆರೆಗಳು ಬತ್ತಿ ಹೋಗಿದ್ದವು. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಇದರ ಜೊತೆಗೆ ಅಂತರ್ಜಲದ ಸಮಸ್ಯೆಯೂ ಕಳೆದ ಬಾರಿ ಕಂಡು ಬಂದಿತ್ತು. ಕೊಳವೆ ಬಾವಿಯಲ್ಲಿಯೂ ನೀರು ಬತ್ತಿ ಹೋಗಿ ರೈತರು ಕೃಷಿ ಮಾಡಲಾಗದ ಪರಿಸ್ಥಿತಿಗೆ ತಲುಪಿದ್ದರು. ಆದರೆ ಈ ಬಾರಿ ಮಳೆ ತಡವಾಗಿ ಆರಂಭವಾದರೂ ಉತ್ತಮವಾಗಿ ಸುರಿದು ಕೆರೆಕಟ್ಟೆಗಳು ಭರ್ತಿಯಾಗುವಂತೆ ಮಾಡಿರುವುದು ನೆಮ್ಮದಿ ತಂದಿದೆ.

ಇವತ್ತು ಸರ್ಕಾರಗಳು ನೀರಾವರಿಯತ್ತ ನಿರ್ಲಕ್ಷ್ಯವಹಿಸುತ್ತಿರುವುದು ಮತ್ತು ಕೆರೆಗಳ ಅಭಿವೃದ್ಧಿಗೆ ಒತ್ತು ನೀಡದಿರುವುದು ಎದ್ದು ಕಾಣಿಸುತ್ತಿದೆ. ಹಿಂದಿನ ಕಾಲದಲ್ಲಿ ಜಲಮೂಲಗಳಲ್ಲಿ ಒಂದಾಗಿದ್ದ ಕೆರೆಗಳತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು. ಪ್ರತಿ ಗ್ರಾಮಗಳಲ್ಲಿಯೂ ಕೆರೆಗಳಿರಬೇಕೆಂಬ ಆಲೋಚನೆಗಳಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕೆರೆಗಳ ಒತ್ತುವರಿ ಒಂದು ಕಡೆಯಾದರೆ ಮತ್ತೊಂದು ಕಡೆ ಅದರ ನಿರ್ವಹಣೆಯತ್ತ ನಿರ್ಲಕ್ಷ್ಯವೂ ಹೆಚ್ಚಾಗಿದ್ದು ಪರಿಣಾಮ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದೆ. ಜತೆಗೆ ಏರಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಒಡೆದು ಹೋಗುವ ಮಟ್ಟಕ್ಕೆ ತಲುಪಿವೆ. ಇದರ ಜತೆಗೆ ಕೆರೆಗಳಲ್ಲಿ ನೀರು ಪೋಲಾಗುತ್ತಿದ್ದು ಅದರ ತಡೆಗೂ ಮುಂದಾಗದಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಕೆರೆಗಳಿದ್ದು ಎಲ್ಲವೂ ಭರ್ತಿಯಾಗಿವೆ. ಈ ಪೈಕಿ ತಾಲೂಕಿನ ರಾವಂದೂರು ಹೋಬಳಿ ಅರೇನಹಳ್ಳಿ ಗ್ರಾಮದಲ್ಲಿ ಹೊಸಕಟ್ಟೆ ಮತ್ತು ಮುಳ್ಳಕೆರೆ ಎಂಬ ಎರಡು ಕೆರೆಗಳಿದ್ದು, ಇವು ಜನಜಾನುವಾರುಗಳಿಗೆ ಆಸರೆಯಾಗಿವೆ. ಈ ಕೆರೆಗಳು ಗ್ರಾಮಕ್ಕೆ ಜಲಮೂಲವಾಗಿದ್ದು, ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಈ ಕೆರೆಗಳ ನೀರು ಬಳಕೆಯಾಗುತ್ತಿದೆ. ಆದರೆ ಈ ಕೆರೆಯತ್ತ ನಿರ್ಲಕ್ಷ್ಯ ತಾಳಿರುವ ಕಾರಣದಿಂದಾಗಿ ಇವತ್ತು ಕೆರೆಗಳು ಶಿಥಿಲಾವಸ್ಥೆಯತ್ತ ಸಾಗುತ್ತಿವೆ. ಕಾಲಕಾಲಕ್ಕೆ ಇವುಗಳ ನಿರ್ವಹಣೆ ಮಾಡಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ.

ಕೆರೆಯ ಸಂರಕ್ಷಣೆಗೆ ಒತ್ತು ನೀಡಬೇಕಿದೆ

ಮಳೆಯ ಕಾರಣದಿಂದಾಗಿ ಇಲ್ಲಿನ ಹೊಸಕಟ್ಟೆ ಮತ್ತು ಮುಳ್ಳಕೆರೆ ಭರ್ತಿಯಾಗಿವೆ. ಆದರೆ ಈ ಕೆರೆಗಳಲ್ಲಿ ನೀರನ್ನು ಉಳಿಸಿಕೊಳ್ಳುವುದೇ ಸವಾಲ್ ಆಗಿದೆ. ಇದೀಗ ಕೆರೆಯ ತಳಭಾಗದ ರೈತರಿಗೆ ಅವಶ್ಯಕತೆ ಕಾಣಿಸುತ್ತಿಲ್ಲ. ಕೆರೆ ಏರಿ ಸುಸ್ಥಿತಿಯಲ್ಲಿ ಇಲ್ಲದ ಕಾರಣದಿಂದಾಗಿ ನೀರು ರಂಧ್ರಗಳ ಮೂಲಕ ತಳಭಾಗಕ್ಕೆ ಹರಿದು ಹೋಗುವ ಮೂಲಕ ಪೋಲಾಗುತ್ತಿದೆ. ಇದನ್ನು ತಡೆದಿದ್ದೇ ಆದಲ್ಲಿ ಕೆರೆಯಲ್ಲಿಯೇ ನೀರು ಸಂಗ್ರಹವಾಗುವುದರ ಮೂಲಕ ಮುಂದಿನ ಬೇಸಿಗೆ ತನಕವೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈಗಾಗಲೇ ಕೆರೆಯ ಏರಿಯಲ್ಲಿ ಆಗಿರುವ ರಂಧ್ರವನ್ನು ಮುಚ್ಚಿ ನೀರು ಪೋಲಾಗದಂತೆ ತಡೆಯಬೇಕಲ್ಲದೆ, ಕೆರೆ ಏರಿಯನ್ನು ದುರಸ್ತಿ ಗೊಳಿಸಬೇಕಿದೆ. ಇಲ್ಲದೆ ಹೋದರೆ ಮುಂದೆ ಯಾವತ್ತಾದರೂ ಧಾರಾಕಾರ ಮಳೆಯಾದರೆ ಕೆರೆ ಏರಿ ಒಡೆಯುವ ಸಾಧ್ಯತೆಯಿದ್ದು ಈ ಬಗ್ಗೆ ಸಂಬಂಧಿಸಿದವರು ಗಮನಹರಿಸುವುದು ಬಹುಮುಖ್ಯವಾಗಿದೆ.

ಈ ಕೆರೆಯ ನೀರನ್ನು ನಂಬಿಕೊಂಡು ರೈತರು ಭತ್ತ ಬೆಳೆಯುತ್ತಿದ್ದಾರೆ. ಆದ್ದರಿಂದ ನೀರು ಪೋಲಾಗದಂತೆ ನೋಡಿಕೊಳ್ಳುವುದು ಸಂಬಂಧಿಸಿದವರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಗಮನಹರಿಸಬೇಕಲ್ಲದೆ, ಸಂಬಂಧಿಸಿದ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಕೆರೆಯ ಸಂರಕ್ಷಣೆಗೆ ಮುಂದಾಗ ಬೇಕಾಗಿದೆ. ಇನ್ನಾದರೂ ಸಂಬಂಧಿಸಿದವರು ಹೊಸಕಟ್ಟೆ ಮತ್ತು ಮುಳ್ಳಕೆರೆಯತ್ತ ಗಮನಹರಿಸಿ ಶಿಥಿಲಗೊಂಡಿರುವ ಕೆರೆಯ ಏರಿಯನ್ನು ದುರಸ್ತಿಗೊಳಿಸಿ ಅನಗತ್ಯವಾಗಿ ಹರಿದು ಹೋಗುತ್ತಿರುವ ನೀರನ್ನು ತಡೆಗಟ್ಟಿ ರೈತರಿಗೆ ಅನುಕೂಲ ಮಾಡಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+