• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದ ಬಿಜೆಪಿ ಒಕ್ಕಲಿಗ ಮುಖಂಡರು?

|

ಮೈಸೂರು, ಸೆಪ್ಟೆಂಬರ್.28:ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದು, ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿರುವುದು ಕಂಡು ಬರುತ್ತಿದೆ. ಇದರ ನಡುವೆ ಮೈಸೂರಿನ ಬಿಜೆಪಿಯ ತಳಮಟ್ಟದ ಒಂದಷ್ಟು ಒಕ್ಕಲಿಗ ನಾಯಕರು ಹಾಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನಾನೇ ಅಭ್ಯರ್ಥಿ. ನನಗೆ ಟಿಕೆಟ್ ನೀಡುತ್ತಾರೆ ಎಂದು ಹೇಳುತ್ತಾ ಬಂದಿರುವ ಪ್ರತಾಪ್ ಸಿಂಹ ಅವರಿಗೆ ಮೈಸೂರಿನಲ್ಲಿ ಕೆಲವು ಒಕ್ಕಲಿಗ ನಾಯಕರು ಸೇರಿ ರಹಸ್ಯ ಸಭೆ ನಡೆಸಿರುವುದು ಮುಂದಿನ ದಿನಗಳಲ್ಲಿ ಮಗ್ಗುಲಿನ ಮುಳ್ಳಾಗಿ ಚುಚ್ಚುವ ಎಲ್ಲ ಲಕ್ಷಣಗಳು ಕಾಣತೊಡಗಿದೆ.

ಈಗಾಗಲೇ ಪ್ರತಾಪ್ ಸಿಂಹ ಅವರ ಕೆಲವು ನಿರ್ಧಾರಗಳು, ಹೇಳಿಕೆಗಳು ಬಿಜೆಪಿಯ ಕೆಲವು ನಾಯಕರಿಗೆ ಇರಿಸುಮುರಿಸನ್ನುಂಟು ಮಾಡಿದ್ದಂತು ನಿಜ. ಹೀಗಿರುವಾಗ ಈ ರಹಸ್ಯ ಸಭೆ ಹಲವು ಕುತೂಹಲಗಳನ್ನು ಹುಟ್ಟು ಹಾಕುವಂತೆ ಮಾಡಿದೆ.

ಹೊಡೆದರೆ ಹುಲಿಯನ್ನೇ ಹೊಡಿಬೇಕು, ಕತ್ತೆಯನ್ನಲ್ಲ : ಪ್ರತಾಪ್ ಸಿಂಹ

ಕೊಡಗಿನಲ್ಲಿ ಭೂಕುಸಿತ ಸಂಭವಿಸಿದ ವೇಳೆ ಅಲ್ಲಿನ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಏನೂ ಮಾತನಾಡದ ಪ್ರತಾಪ್ ಸಿಂಹ ಅವರು ಬಳಿಕ ಫೇಸ್ ಬುಕ್ ಮೂಲಕ ದೇವಯ್ಯ ಅವರಿಗೆ ಪ್ರತಿಕ್ರಿಯೆ ನೀಡಿದ್ದರು.

ಆದರೆ ಪ್ರತಿಕ್ರಿಯೆ ನೀಡುವ ವೇಳೆ ಬಳಸಿದ ಶಬ್ದಗಳು ದೇವಯ್ಯ ಅವರನ್ನು ಕೆರಳಿಸಿತ್ತಲ್ಲದೆ, ಅದಕ್ಕೆ ಅವರು ತೀಕ್ಷ್ಣವಾಗಿಯೇ ಉತ್ತರಿಸಿದ್ದರು. ಈ ಮಾತಿನ ಜಟಾಪಟಿ ಸದ್ಯಕ್ಕೆ ತಣ್ಣಗೆ ಆದಂತೆ ಕಂಡು ಬಂದರೂ ಬಹುಶಃ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಇದಕ್ಕೆ ರೆಕ್ಕೆಪುಕ್ಕ ಹುಟ್ಟಿಕೊಂಡು ಹೊಸರೂಪ ಪಡೆದರೆ ಅಚ್ಚರಿ ಪಡಬೇಕಾಗಿಲ್ಲ.

ಹಾಗಾದರೆ ಮೈಸೂರಿನಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ? ಈ ಲೇಖನ ಓದಿ...

 ರಾಜಿಯಾದರೆ ತೊಂದರೆಯಾಗದು

ರಾಜಿಯಾದರೆ ತೊಂದರೆಯಾಗದು

ಹಾಗೆ ನೋಡಿದರೆ ಕೊಡಗು ಬಿಜೆಪಿಯ ಭದ್ರಕೋಟೆಯಾಗಿದ್ದು, ಹಿರಿಯ ನಾಯಕ ದೇವಯ್ಯ ಅವರು ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ, ಪಕ್ಷದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ವೇಳೆ ಪ್ರತಾಪ್ ಸಿಂಹ ಚುನಾವಣೆ ವೇಳೆಗೆ ರಾಜಿಯಾದರೆ ತೊಂದರೆಯಾಗದು.

ಇಲ್ಲದೆ ಹೋದರೆ ಅದನ್ನು ಬೇರೆ ರೀತಿಯಲ್ಲಿ ಬಳಸಿಕೊಂಡು ರಾಜಕೀಯ ರಣತಂತ್ರ ಮಾಡಲು ಇತರೆ ಪಕ್ಷಗಳ ನಾಯಕರು ಮುಂದಾಗುವುದರಲ್ಲಿ ಎರಡು ಮಾತಿಲ್ಲ. ಕೊಡಗಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಅಸಮಾಧಾನಗಳು ಆ ರೀತಿಯಲ್ಲಿದ್ದರೆ, ಇತ್ತ ಮೈಸೂರಿನಲ್ಲಿ ಒಕ್ಕಲಿಗ ಸಮುದಾಯದ ಕೆಲವು ಮುಖಂಡರು ತಿರುಗಿ ಬೀಳಲು ಕಾರಣವೇನು ಎಂಬುದಕ್ಕೆ ಉತ್ತರವೂ ಇಲ್ಲಿದೆ.

ವಿಡಿಯೋ: ನಡುರಸ್ತೆಯಲ್ಲಿ ಪ್ರತಾಪ್ ಸಿಂಹಗೆ ಸ್ವಪಕ್ಷದವರಿಂದಲೇ ಮಂಗಳಾರತಿ

 ಒಕ್ಕಲಿಗ ಮುಖಂಡರ ಆರೋಪ

ಒಕ್ಕಲಿಗ ಮುಖಂಡರ ಆರೋಪ

ವಿಧಾನಸಭಾ ಹಾಗೂ ಪಾಲಿಕೆಯ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಗೇಮ್ ಪ್ಲಾನ್ ಮಾಡಿ ಇತರೆ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕಾರಣದಿಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರನ್ನು ಕಡೆಗಣನೆ ಮಾಡಿದ್ದಾರೆ ಎನ್ನುವುದು ಇದೀಗ ಒಕ್ಕಲಿಗ ಮುಖಂಡರು ಮಾಡುತ್ತಿರುವ ಆರೋಪವಾಗಿದೆ.

ರಹಸ್ಯ ಸಭೆಯಲ್ಲಿ ಮಾತನಾಡಿರುವ ಕೆಲವು ನಾಯಕರು ಪ್ರತಾಪ್ ಸಿಂಹ ಅವರ ಬದಲಾಗಿ ಬೇರೊಬ್ಬ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸಲು ಒತ್ತಡ ತರುವ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಬಂದ್ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್-ಜೆಡಿಎಸ್ ಜಾಲಾಡಿದ ಪ್ರತಾಪ್ ಸಿಂಹ

 ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ!

ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ!

ಸದ್ಯ ಗೌಪ್ಯ ಸಭೆಯಲ್ಲಿ ದೊಡ್ಡ ಮಟ್ಟದ ಪಕ್ಷದ ನಾಯಕರು ಯಾರು ಇರಲಿಲ್ಲವಾದರೂ ಒಕ್ಕಲಿಗ ಸಮುದಾಯದ ಪ್ರಭಾವಿ ಒಂದಷ್ಟು ಮುಖಂಡರು ಭಾಗವಹಿಸಿರುವುದು ಬಹುಶಃ ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರಿಗೆ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

ಸಭೆಯಲ್ಲಿ ಸುಮಾರು 50 ನಾಯಕರು ಇದ್ದರೆಂದು ಹೇಳಲಾಗುತ್ತಿದೆ. ಈ ಸಭೆಯಿಂದ ಏನೂ ಆಗಲ್ಲ ಎಂದು ಸುಲಭವಾಗಿ ತಳ್ಳಿ ಹಾಕುವಂತೆಯೂ ಇಲ್ಲ. ಏಕೆಂದರೆ ಚುನಾವಣೆಗೆ ಕೆಲವೇ ತಿಂಗಳಷ್ಟೆ ಬಾಕಿಯಿರುವುದು. ಹೀಗಿರುವಾಗ ಸ್ವಪಕ್ಷದಲ್ಲಿಯೇ ಇಂತಹದೊಂದು ಸಭೆ ನಡೆಯುತ್ತದೆ ಎಂದರೆ ಪಕ್ಷದ ರಾಜ್ಯ ನಾಯಕರು ಎಚ್ಚೆತ್ತುಕೊಳ್ಳಬೇಕಾಗುತ್ತದೆ.

 ಎಚ್ಚರಿಕೆಯ ಗಂಟೆ

ಎಚ್ಚರಿಕೆಯ ಗಂಟೆ

ಜತೆಗೆ ಸಂಸದ ಪ್ರತಾಪ್ ಸಿಂಹ ಅವರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದರೆ ತಪ್ಪಾಗಲಾರದು. ಗೌಪ್ಯ ಸಭೆಯಲ್ಲಿ ಭಾಗವಹಿಸಿರುವ ಬಹಳಷ್ಟು ನಾಯಕರು ಪ್ರತಾಪ್ ಸಿಂಹ ಅವರ ನಡವಳಿಕೆಯಿಂದ ನಮಗೆ ಮುಜುಗರವಾಗಿದೆ.

ನಮ್ಮನ್ನು ಕಡೆಗಣಿಸಿ ಬೇರೆ ಪಕ್ಷದವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಅಸಮಾಧಾನದ ಮಾತುಗಳನ್ನು ಹೊರಹಾಕಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Next Lok Sabha election is only a few months away. There is a lot of political activity going on right now. Meanwhile, vokkaliga leaders of the BJP party have turned against MP Prathap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X