ನಾನು ಹುಲಿ, ಪ್ರತಾಪ ಸಿಂಹ : ವಿಶ್ವನಾಥ್
ಮೈಸೂರು, ಮಾ. 18 : ಮೈಸೂರು ಜಿಲ್ಲೆಯ ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಚ್.ವಿಶ್ವನಾಥ್ ಮಾ.21ರ ಶುಕ್ರವಾರ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಮಂಗಳವಾರ ನಾನು ಹುಲಿ, ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಎಂದು ಹೇಳುವ ಮೂಲಕ ವಿಶ್ವನಾಥ್ ಮಾತಿನ ಸಮರ ಆರಂಭಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್, "ಹುಲಿ ಬಡವರ ಮನೆ ಮುಂದೆ ಇರುತ್ತದೆ. ಸಿಂಹ ಶ್ರೀಮಂತರ ಮನೆ ಮುಂದೆ ಇರುತ್ತದೆ. ನಾನು ಹುಲಿ, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಹ ಎಂದು ಹೇಳಿದರು. ಪ್ರತಾಪ್ ಸಿಂಹ ಬರಹ ಬದುಕನ್ನು ಕೆರಳಿಸುತ್ತದೆ ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಅವರಿಗೆ ಮಾತಿನ ಮೂಲಕವೇ ಏಟು ನೀಡಿದರು.

21ರಂದು ನಾಮಪತ್ರ : ಮೈಸೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ, ಮಾ.21ರಂದು ಎಚ್.ವಿಶ್ವನಾಥ್ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮೊದಲು ರೈಲ್ವೆ ನಿಲ್ದಾಣ ಮುಂಭಾಗದಲ್ಲಿರುವ ಬಾಬು ಜಗಜೀವನ್ ರಾಮ್ ಪ್ರತಿಮೆ, ಟೌನ್ ಹಾಲ್ ನಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಮತ್ತು ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು. [ಪ್ರತಾಪ್ ಸಿಂಹ ಬಿರುಸಿನ ಪ್ರಚಾರ]
ನಾಮಪತ್ರ ಸಲ್ಲಿಸಲು ವಿಶ್ವನಾಥ್ ಅವರು ಪಾದಯಾತ್ರೆಯ ಮೂಲಕ ಆಗಮಿಸಲಿದ್ದು, ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಪಾದಯಾತ್ರೆ ಆರಂಭವಾಗಲಿದೆ. ಅದಕ್ಕೂ ಮೊದಲು ವಿಶ್ವನಾಥ್ ಅವರು ಚಾಮುಂಡಿ ಬೆಟ್ಟ, ಸುತ್ತೂರು ಮಠ, ಮೈಸೂರು ಬಿಷಪ್ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆಯಲಿದ್ದಾರೆ ಎಂದು ದಾಸೇಗೌಡ ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ವಿಶ್ವನಾಥ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಶಾಸಕರಾದ ವಾಸು, ಎಂಕೆ ಸೋಮಶೇಖರ್ ಮತ್ತು ತನ್ವೀರ್ ಸೇಠ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ ಎಂದು ತಿಳಿಸಿದರು.


Click it and Unblock the Notifications
