ಮೈಸೂರಲ್ಲಿ ರಾತ್ರೋರಾತ್ರಿ ಅವೈಜ್ಞಾನಿಕ ಹಂಪ್ ನಿರ್ಮಾಣ: ಇಬ್ಬರ ಸಾವಿನ ಬಳಿಕ ಎಚ್ಚೆತ್ತ ಅಧಿಕಾರಿಗಳು
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಪ್ರತಿಮೆ ಮುಂದೆ ರಾತ್ರೋರಾತ್ರಿ ಅವೈಜ್ಞಾನಿಕವಾಗಿ ರಸ್ತೆ ಹಂಪ್ ನಿರ್ಮಿಸಿ ಅದಕ್ಕೆ ಮಾರ್ಕ್ ಮಾಡದ ಪರಿಣಾಮ 20 ಅಪಘಾತಗಳಾಗಿದ್ದು, ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ಬೋಗಾದಿ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವ ಸವಾರರು ಹೊಸದಾಗಿ ಹಂಪ್ಸ್ ಹಾಕಿರುವುದನ್ನು ಗಮನಿಸದೆ ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. ಇದರಿಂದ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿವೆ.

ಕಳೆದ ಎರಡು ದಿನದಲ್ಲಿ 20ಕ್ಕೂ ಹೆಚ್ಚು ಅಪಘಾತ ಈ ಹಂಪ್‌ನಿಂದ ಆಗಿದ್ದು, ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರ ಗಮನಕ್ಕೆ ತಾರದೆ ಅವೈಜ್ಞಾನಿಕವಾಗಿ ಹಂಪ್ ನಿರ್ಮಿಸಿದ ಪಾಲಿಕೆ ಎಂಜಿನಿಯರ್ ಸೇರಿದಂತೆ ಗುತ್ತಿಗೆದಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ತಾಲೂಕು ಮರಟಿ ಕ್ಯಾತನಹಳ್ಳಿ ನಿವಾಸಿ ಯಶವಂತ್ (27), ಎಚ್.ಡಿ.ಕೋಟೆಯ ತರಕಾರಿ ವ್ಯಾಪಾರಿ ಎಚ್.ಡಿ.ಕೋಟೆಯ ಕೃಷ್ಣಯ್ಯನಹುಂಡಿಯ ಕುಮಾರ್ (40) ಅವೈಜ್ಞಾನಿಕ ಹಂಪ್‌ನಿಂದ ಮೃತಪಟ್ಟಿದ್ದಾರೆ.
ಸಾವಿನ ಬಳಿಕ ಎಚ್ಚೆತ್ತ ಅಧಿಕಾರಿಗಳು
ರಸ್ತೆಯಲ್ಲಿ ಹಂಪ್ಸ್ ನಿರ್ಮಿಸುವ ನಂತರ ವಾಹನ ಸವಾರರ ಗಮನ ಸೆಳೆಯಲು ಬಿಳಿ ಬಣ್ಣ ಬಳಿದು ಮಾರ್ಕ್ ಮಾಡದೆ ಇರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ಎತ್ತರದ ಹಂಪ್ ಹಾಕಿ ನಗರಪಾಲಿಕೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರ ಪಾಲಿಕೆಯಿಂದ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಅವೈಜ್ಞಾನಿಕವಾಗಿ ಹಂಪ್ ಗಳನ್ನು ಅಳವಡಿಕೆ ಮಾಡಿರುವುದರಿಂದ ಇಬ್ಬರು ಮೃತಪಟ್ಡಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಕುಟುಂಬದವರ ದೂರಿನ ಮೇರೆಗೆ ಕೆಆರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯಕ್ಕೆ ಬೋಗಾದಿ ರಸ್ತೆಯಲ್ಲಿ ರಸ್ತೆ ಉಬ್ಬು ಇರುವ ಸ್ಥಳದಲ್ಲಿ ಅಪಘಾತ ನಿಯಂತ್ರಣಕ್ಕೆ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಪಘಾತಗಳ ಬಳಿಕ ಎಚ್ಚೆತ್ತ ಅಧಿಕಾರಿಗಳು ಹಂಪ್ ಜಾಗದಲ್ಲಿ ಬಣ್ಣ ಬಳಿದಿದ್ದಾರೆ.












Click it and Unblock the Notifications