ಮೈಸೂರು ನಗರದಲ್ಲಿ ಎರಡು ಪ್ರತ್ಯೇಕ ಸರಗಳ್ಳತನ: ಸಾರ್ವಜನಿಕರಲ್ಲಿ ಆತಂಕ
ಮೈಸೂರು, ನವೆಂಬರ್ 5: ಪೋಲೀಸರ ಬಿಗಿ ಬಂದೋಬಸ್ತಿನ ನಡುವೆಯೂ ಸರಗಳ್ಳರು ತಮ್ಮ ಕೈ ಚಳಕವನ್ನು ತೋರಿಸುತಿದ್ದಾರೆ. ಬುಧವಾರ ಮೈಸೂರು ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ.
ಮೇಟಗಳ್ಳಿ ಬಿಎಂಶ್ರೀ ನಗರದ ನಿವಾಸಿ ಎಂ.ಆರ್.ಅಶ್ವಿನಿ (24) ಎಂಬುವವರೇ ಸರ ಕಳೆದುಕೊಂಡವರು. ಇವರು ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಅತಿಥಿ ಗೃಹದ ಉತ್ತರ ದ್ವಾರದ ಬಳಿ ರಸ್ತೆಯಲ್ಲಿ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸರ ಕಿತ್ತುಕೊಳ್ಳುವ ವೇಳೆ ಮಹಿಳೆ ಕೆಳಕ್ಕೆ ಬಿದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುವ ಸುಷ್ಮ (35) ಎಂಬುವವರು ಕೆಲಸಕ್ಕೆಂದು ತೆರಳಿದ ವೇಳೆ ಕಬೀರ್ ರೋಡ್ ಜಂಕ್ಷನ್ ಬಳಿ ಹಿಂದಿನಿಂದ ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾರೆ.
ಈ ವೇಳೆ ಮಹಿಳೆ ಗಟ್ಟಿಯಾಗಿ ಚಿನ್ನದ ಸರವನ್ನು ಹಿಡಿದುಕೊಂಡು ಕಿರುಚಿದ್ದಾರೆ. ಆದರೂ ಸುಮಾರು 10 ಗ್ರಾಂ ನಷ್ಟು ಚಿನ್ನವನ್ನು ಕಳ್ಳರು ಕಸಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಂಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನಾರಾಯಣ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಷ್ಟು ದಿನ ನಗರದ ಹೊರವಲಯಗಳಲ್ಲಿ ತಮ್ಮ ಕೈಚಳಕ ತೋರುತ್ತಿದ್ದ ಸರಗಳ್ಳರು ಈಗ ನಗರದ ಹೃದಯ ಭಾಗದಲ್ಲಿಯೇ ಸರಗಳ್ಳತನ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.











Click it and Unblock the Notifications