ಮೈಸೂರು ದಸರಾ; ಪೊಲೀಸ್ ಹದ್ದಿನ ಕಣ್ಣಿನಲ್ಲಿ ನಾಡಹಬ್ಬ
ಮೈಸೂರು, ಸೆಪ್ಟೆಂಬರ್ 25: ನಾಡಹಬ್ಬ ದಸರಾಗೆ ಎರಡನೇ ಹಂತದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದ್ದು, ಸಿಸಿ ಟಿ.ವಿ ಹಾಗೂ ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಇರಲಿದೆ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಸೆಪ್ಟೆಂಬರ್ 26ರಿಂದ ಅ.5ರವರೆಗೆ ಮತ್ತು ಅ.6ರಿಂದ 8ರವರೆಗೆ ಎರಡು ಹಂತಗಳಲ್ಲಿ ಬಂದೋಬಸ್ತ್ ಮಾಡಲಾಗುತ್ತಿದೆ. ಗುಪ್ತಚರ ಇಲಾಖೆಯ ಜೊತೆಗೆ ತಾಂತ್ರಿಕ ಗುಪ್ತಚರ ಸಿಬ್ಬಂದಿ ಹಾಗೂ ಡ್ರೋಣ್ ಮತ್ತು ಬಾಡಿವೋರ್ನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಬಂದೋಬಸ್ತ್ ಗೆ 8407 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು" ಎಂದರು.
ನಗರದಿಂದ 2978, ಹೊರ ಜಿಲ್ಲೆಗಳಿಂದ 4421 ಅಧಿಕಾರಿಗಳು, ಸಿಬ್ಬಂದಿ ಹಾಗೂ 1 ಸಾವಿರ ಗೃಹರಕ್ಷಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಮಾಂಡೋ ಮತ್ತು ಬಾಂಬ್ ನಿಷ್ಕ್ರಿಯ ದಳದಲ್ಲಿ 391 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಡಿಎಆರ್, ಕೆಎಸ್ ಆರ್‌ಪಿ, ಮಹಿಳಾ ಕೆಎಸ್ ಆರ್‌ಪಿ, ಶ್ವಾನದಳ ಹಾಗೂ ಗರುಡ ಪಡೆಗಳು ಕಾರ್ಯನಿರ್ವಹಿಸಲಿವೆ. ಕೇರಳ, ತಮಿಳುನಾಡು, ಬೆಂಗಳೂರಿನಿಂದ ಅಪರಾಧ ಪತ್ತೆ ದಳ ಸಿಬ್ಬಂದಿ ಬರಲಿದ್ದಾರೆ ಎಂದು ಕೆ.ಟಿ. ಬಾಲಕೃಷ್ಣ ಮಾಹಿತಿ ನೀಡಿದರು.

ಸಿಸಿ ಕ್ಯಾಮರಾಗಳ ಕಣ್ಗಾವಲು: ಈಗಾಗಲೇ ಅಳವಡಿಸಿರುವ ಖಾಯಂ ಸಿಸಿಟಿವಿ ಕ್ಯಾಮರಾಗಳು ಹಾಗೂ ವಿವಿಧ ಸ್ಥಳಗಳಲ್ಲಿ ಸಾರ್ವನಿಕರು ಅವಳಡಿಸಿಕೊಂಡಿರುವ ಸುಮಾರು 11,917 ಸಿಸಿಟಿವಿ ಕ್ಯಾಮರಾಗಳು ನಗರದಲ್ಲಿವೆ. ಮೆರವಣಿಗೆ ಮಾರ್ಗ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ 212 ಸಿಸಿ ಕ್ಯಾಮರಾಗಳನ್ನು ಅವಳಡಿಸಲಾಗಿದೆ.
ಪೊಲೀಸ್ ಸಹಾಯ ಕೇಂದ್ರಗಳು: ಪ್ರವಾಸಿಗರಿಗೆ ದಸರಾ ಮತ್ತು ಪ್ರವಾಸಿ ಮಹಿತಿ ನೀಡಲು ಸೆ.29 ರಿಂದ ಅ. 8ರವರೆಗೆ ನಗರದ ಪ್ರಮುಖ ಸ್ಥಳಗಳಾದ ಜಗಜೀವನರಾಮ್ ವೃತ್ತ, ರೈಲ್ವೆ ನಿಲ್ದಾಣ, ರೈಲ್ವೆ ನಿಲ್ದಾಣ ಪಶ್ಚಿಮ ದ್ವಾರ, ಅರಮನೆ ಬಲರಾಮ ಗೇಟ್, ಜಗನ್ಮೋಹನ ಅರಮನೆ, ಅರಮನೆಯ ವರಹಾ ಗೇಟ್, ಜಯಮಾರ್ತಾಂಡ ಗೇಟ್, ಕೆ.ಆರ್.ವೃತ್ತ, ಸೈಂಟ್ ಫಿಲೋಮಿನಾ ಚರ್ಚ್, ಕೆ.ಆರ್. ವೃತ್ತ ಸೇರಿದಂತೆ 20 ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಬೆಳಗ್ಗೆ 9 ರಿಂದ ರಾತ್ರಿ 10ರವರೆಗೆ ಇವು ಕಾರ್ಯನಿರ್ವಹಿಸಲಿವೆ.
ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪಿಕ್ ಪ್ಯಾಕೆಟ್, ಮಹಿಳೆಯರೊಂದಿಗೆ ಅನುಚಿತ ವರ್ತನೆ, ಮೊಬೈಲ್ ಕಳ್ಳತನ ಮಾಡುವವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮರಾಗಳನ್ನು ಬಳಸುತ್ತಿದೆ. ಅಂಬಾರಿಯನ್ನು ಹೊತ್ತು ತರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಇದೇ ವೇಳೆ ಸೂಚಿಸಿದರು.












Click it and Unblock the Notifications