ಈ ಬಾರಿ ಟಿಬೇಟಿಯನ್ನರು ಮತದಾನ ಮಾಡಲಿದ್ದಾರೆ!
ಮೈಸೂರು, ಮಾ. 18 : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಟಿಬೇಟಿಯನ್ನರಿಗೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಇದರಿಂದಾಗಿ ಕರ್ನಾಟಕದ ಮುಂಡುಗೋಡ ಮತ್ತು ಬೈಲುಕುಪ್ಪೆಗಳಲ್ಲಿರುವ ಟಿಬೆಟಿಯನ್ ಕ್ಯಾಂಪಿನ ಸುಮಾರು 25,000 ಮತದಾರರು ಮತದಾನ ಮಾಡಿ ಸಂಸದರನ್ನು ಚುನಾಯಿಸಲಿದ್ದಾರೆ.
ಕೇಂದ್ರ ಸರ್ಕಾರ ಇದುವರೆಗೂ ಟಿಬೇಟಿಯನ್ ಕ್ಯಾಂಪಿನಲ್ಲಿರುವ ಜನರಿಗೆ ಮತದಾನದ ಹಕ್ಕನ್ನು ನೀಡಿರಲಿಲ್ಲ. ಈ ಕುರಿತು ಹೋರಾಟ ಆರಂಭಿಸಿದ್ದ ನ್ಯಾಮಗಲ್ ಡೊಲ್ಕರ್ ಎಂಬುವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿ ಭಾರತದ ಪೌರತ್ವ ನೀಡಲು ಆದೇಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಟಿಬೇಟಿಯನ್ನರ ಮನವಿಯನ್ನು ಪುರಸ್ಕರಿಸಿ, 1950 ರಿಂದ 1987ರ ಅವಧಿಯಲ್ಲಿ ಭಾರತದಲ್ಲಿ ಜನಿಸಿದ ಟಿಬೇಟಿಯನ್ನರಿಗೆ ಪೌರತ್ವ ನೀಡಿ, ಮತದಾನದ ಹಕ್ಕು ಕಲ್ಪಿಸಬೇಕೆಂದು ಆದೇಶ ನೀಡಿತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿನ ಸುಮಾರು 1 ಲಕ್ಷ ಟಿಬೇಟಿಯನ್ ನಿರಾಶ್ರಿತರಲ್ಲಿ ಸುಮಾರು 45,000 ಮಂದಿ ಮತದಾನ ಮಾಡಲಿದ್ದಾರೆ. [ಬುಧವಾರ ಚುನಾವಣೆ ಅಧಿಸೂಚನೆ ಪ್ರಕಟ]
ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಗೋಡ ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಗಳಲ್ಲಿ ಟಿಬೇಟಿಯನ್ ಕ್ಯಾಂಪ್ ಗಳಿವೆ. ಚುನಾವಣಾ ಆಯೋಗ ಫೆ.17ರಂದು ಈ ಕ್ಯಾಂಪ್ ಗಳಲ್ಲಿರುವ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಬೇಕೆಂದು ಸೂಚನೆ ನೀಡಿತ್ತು.
ಅದರಂತೆ ರಾಜ್ಯ ಚುನಾವಣಾ ಆಯೋಗ ಟಿಬೇಟಿಯನ್ನರ ಕ್ಯಾಂಪ್ ಗಳಲ್ಲಿರುವ 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಸೇರಿಸಿದ್ದು, ಕರ್ನಾಟಕದಲ್ಲಿ ಸುಮಾರು 25,000 ಜನರು ಏಪ್ರಿಲ್ 17ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.


Click it and Unblock the Notifications
