Reels: ದಸರಾದಲ್ಲಿ ಕಿರಿಕಿರಿ ಮಾಡಿದವರು ಪೊಲೀಸರ ಅತಿಥಿ: ಅಷ್ಟಕ್ಟೂ ಆಗಿದ್ದೇನು..?
ಮೈಸೂರು, ಅಕ್ಟೋಬರ್ 31: ಇತ್ತೀಚೆಗೆ ಏನಾದರೂ ಮಾಡಿ ತಮ್ಮ ವಿಡಿಯೋಗಳನ್ನು ವೈರಲ್ ಮಾಡಬೇಕೆಂಬ ಹಠಕ್ಕೆ ಬಿದ್ದಿರುವ ಹಲವರು ಹೊಸ ಪ್ರಯೋಗಗಳನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವುದು ಮಾಮೂಲಿಯಾಗಿದೆ. ಅದರಲ್ಲೂ ರೀಲ್ಸ್‌ನ ಹುಚ್ಚಾಟ ಮಿತಿ ಮೀರಿದೆ. ಇದರಿಂದ ಕೆಲವೊಮ್ಮೆ ಸಾರ್ವಜನಿಕರಿಗೆ ಕಿರಿಕಿರಿ ಆಗುವುದಲ್ಲದೆ, ತಮಗೆ ತಾವೇ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.
ರೀಲ್ಸ್ ಹುಚ್ಚಿನಿಂದಾಗಿ ಎಲ್ಲೂ ನೆಮ್ಮದಿಯಾಗಿ ಹೋಗಿ ಬರಲು ಸಾಧ್ಯವಾಗದ ಪರಿಸ್ಥಿತಿಯೂ ಕಂಡು ಬರುತ್ತಿದೆ. ಅದರಲ್ಲೂ ಸಾರ್ವಜನಿಕ ದಟ್ಟಣೆ ಇರುವ ಸ್ಥಳಗಳಲ್ಲಿ ರೀಲ್ಸ್ ಹುಚ್ಚಿನಿಂದಾಗಿ ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ. ಕೆಲವೊಮ್ಮೆ ಗಲಾಟೆಗಳು ಕೂಡ ನಡೆದಿವೆ. ಕೆಲವರು ಸಾರ್ವಜನಿಕ ಸ್ಥಳದಲ್ಲಿ ಭಯಹುಟ್ಟಿಸುವಂತೆ ವರ್ತಿಸಿ ಜನರನ್ನು ಬೆಚ್ಚಿ ಬೀಳಿಸುವುದು ವೀಡಿಯೋಗಳಲ್ಲಿ ನೋಡಲು ಖುಷಿ ಎನಿಸಬಹುದು ಆದರೆ ಅದರಿಂದ ತೊಂದರೆ ಅನುಭವಿಸಿದವರಿಗಷ್ಟೇ ಗೊತ್ತಾಗಬೇಕು.

ಮೈಸೂರು ದಸರಾ ಸಂದರ್ಭ ಎಲ್ಲೆಂದರಲ್ಲಿ ಜನ ಓಡಾಡುತ್ತಿರುತ್ತಾರೆ. ಅದರಲ್ಲೂ ಫುಟ್ ಪಾತ್ ಗಳಲ್ಲಿ ಸಂಚರಿಸುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿರುತ್ತದೆ. ಇಂತಹ ಸಂದರ್ಭ ಫುಟ್ ಪಾತ್ ಗಳಲ್ಲಿ ಓಡಾಡುವವರಿಗೆ ರೀಲ್ಸ್ ಹುಚ್ಚಿನಲ್ಲಿ ಅಥವಾ ಬಕ್ರ ಮಾಡುವ ಉದ್ದೇಶದಿಂದ ಏನಾದರೂ ಕಿರಿಕಿರಿ ಮಾಡಿದರೆ ಅದನ್ನು ಅನುಭವಿಸುವವರಿಗೆ ಹಿಂಸೆಯಾಗುತ್ತದೆ. ಅಷ್ಟೇ ಅಲ್ಲದೇ ಕೆಲವು ಹೃದಯ ರೋಗ ಇರುವವರು ಇನ್ನಿತರರು ಒಮ್ಮೆಗೆ ಹೆದರಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ದಸರಾ ಸಂದರ್ಭ ಕೆಲವರು ನಗರದ ಹೃದಯ ಭಾಗದಲ್ಲಿ ಸಂಚರಿಸುತ್ತಾ ಸಾರ್ವಜನಿಕರನ್ನು ತಮ್ಮದೇ ಆದ ರೀತಿಯಲ್ಲಿ ಬೆಚ್ಚಿ ಬೀಳಿಸುತ್ತಿದ್ದರು. ಈ ಪೈಕಿ ಒಬ್ಬಾತ ತೆಂಗಿನ ಗರಿಯನ್ನು ಹಗ್ಗಕ್ಕೆ ಕಟ್ಟಿಕೊಂಡು ಎಳೆದಾಡುತ್ತಾ ನಡೆಯುತ್ತಿದ್ದರೆ ಮತ್ತೊಬ್ಬ ಬಾಂಬ್ ರೀತಿಯ ಪಟಾಕಿಯನ್ನು ಹಚ್ಚುವಂತೆ ಮಾಡಿ ಓಡಾಡುತ್ತಿದ್ದವರನ್ನು ಬೆಚ್ಚಿ ಬೀಳಿಸುತ್ತಿದ್ದನು. ಇಂತಹ ವೀಡಿಯೋಗಳನ್ನು ಮೊಬೈಲ್ ನಲ್ಲಿ ನೋಡಲು ಚೆನ್ನಾಗಿರುತ್ತದೆ. ಆದರೆ ಆ ಸ್ಥಳದಲ್ಲಿದ್ದು ಅದನ್ನು ಅನುಭವಿಸುವುದು ಸುಲಭದ ಮಾತಲ್ಲ.

ಯಾವುದೇ ಯೋಚನೆಯಲ್ಲಿ ಹೋಗುವವರು ಒಮ್ಮೆಗೆ ಆಗುವ ಆಘಾತದಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇಲ್ಲದಿಲ್ಲ. ಇಂತಹ ಕಿರಿಕಿರಿಯನ್ನು ನೋಡಿದವರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದುದಲ್ಲದೆ, ಇಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವನ್ನು ಮಾಡಿದ್ದರು. ಇದೀಗ ಎಚ್ಚೆತ್ತುಕೊಂಡ ಪೊಲೀಸರು ಕಿರಿಕಿರಿ ಮಾಡುತ್ತಿದ್ದ ಕಿಡಿಗೇಡಿಗಳಿಗೆ ಬುದ್ದಿ ಕಲಿಸುವ ಕೆಲಸ ಮಾಡಿದ್ದಾರೆ.
ಕಿರಿಕಿರಿ ಮಾಡಿದ ನಾಲ್ವರು ಅರೆಸ್ಟ್
ಈಗಾಗಲೇ ಮೈಸೂರು ನಗರದ ಫುಟ್‌ಪಾತ್‌ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ನಾಲ್ಕು ಮಂದಿ ಕಿಡಿಗೇಡಿಗಳನ್ನು ದೇವರಾಜ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ನಗರದ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಸಿಟಿ ಬಸ್ ನಿಲ್ದಾಣದ ಹತ್ತಿರ ವ್ಯಕ್ತಿಯೊಬ್ಬ ತೆಂಗಿನ ಗರಿಯನ್ನು ಹಾವಿನ ಹಾಗೆ ಕಾಣುವ ರೀತಿಯಲ್ಲಿ ಮಾಡಿಕೊಂಡು ಫುಟ್‌ಪಾತ್‌ನಲ್ಲಿ ಓಡಾಡುವ ಜನರಿಗೆ ಭಯ ಉಂಟು ಮಾಡಿದ್ದ. ಅದೇ ರಸ್ತೆಯಲ್ಲಿ ಮತ್ತೊಬ್ಬ ನಕಲಿ ಬಾಂಬ್ ಪಟಾಕಿಯನ್ನು ಫುಟ್‌ಪಾತ್‌ನಲ್ಲಿ ಇಟ್ಟು ಅದನ್ನು ಹಚ್ಚುವ ಹಾಗೆ ಮಾಡಿ ಫುಟ್‌ಪಾತ್‌ನಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಭಯ ಉಂಟು ಮಾಡಿದ್ದನು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹರಿದಾಡುತ್ತಿದ್ದು ಈ ವಿಡಿಯೋ ವೀಕ್ಷಿಸಿದ ಸಾರ್ವಜನಿಕರು ಕೂಡ ಕಿಡಿಗೇಡಿಗಳ ಈ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಕಿಡಿಗೇಡಿತನದಿಂದ ಸಾರ್ವಜನಿಕರು, ಪ್ರವಾಸಿಗರು ಮತ್ತು ವಿದೇಶಿಯರಿಗೆ ಕಿರಿಕಿರಿ ಉಂಟು ಮಾಡಿ, ಅವರ ಓಡಾಟಕ್ಕೆ ತೊಂದರೆ ಮಾಡಿದ್ದ ನಾಲ್ವರು ಆರೋಪಿಗಳ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಆ ಮೂಲಕ ಕಿಡಿಗೇಡಿಗಳ ಹುಚ್ಚಾಟಕ್ಕೆ ತಕ್ಕ ಶಾಸ್ತಿಯಾಗಿದೆ.












Click it and Unblock the Notifications