ಭಾರತದಲ್ಲಿವೆ 3,167 ಹುಲಿಗಳು: ಮೈಸೂರಿನಲ್ಲಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಮೈಸೂರು, ಏಪ್ರಿಲ್, 09: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. ಭಾರತದಲ್ಲಿ 2022ರ ಸರ್ವೇ ಪ್ರಕಾರ 3,167 ಹುಲಿಗಳಿವೆ.
ಹುಲಿಗಳ ಸಂಖ್ಯೆ 200ಕ್ಕೆ ಹೆಚ್ಚಳ
ಭಾರತದಲ್ಲಿ ಕಳೆದ ವರ್ಷ 2,967 ಹುಲಿಗಳು ಇದ್ದವು. ಇದೀಗ 200 ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ. ಇದೇ ವೇಳೆ ಟೈಗರ್ ಪ್ರಾಜೆಕ್ಟ್‌ನ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ನಂತರ ಭೂಪೇಂದ್ರ ಯಾದವ್ ಮಾತನಾಡಿ, ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಇನ್ನು ಹುಲಿ ಸಂರಕ್ಷಣೆ ಪ್ರದೇಶ ನದಿ ಹಿನ್ನೀರಿನ ಪ್ರದೇಶದಲ್ಲಿ ಇರುವುದರಿಂದ ಟೈಗರ್ ಸಂರಕ್ಷಣೆ ಜೊತೆಗೆ ನದಿಗಳ ಸಂರಕ್ಷಣೆಯೂ ಆಗುತ್ತಿದೆ. ಚೀಜಾ ಪ್ರಾಜೆಕ್ಟ್, ಲಯನ್ ಪ್ರಾಜೆಕ್ಟ್, ಎಲಿಫೆಂಟ್ ಪ್ರಾಜೆಕ್ಟ್, ಡಾಲ್ಘಿನ್ ಪ್ರಾಜೆಕ್ಟ್ ವನ್ಯಜೀವಿ ಸಂರಕ್ಷಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಇದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂಡೀಪುರದಿಂದ ವಿಶೇಷ ಹೆಲಿಕ್ಟಾರ್ ಮೂಲಕ ಮೈಸೂರಿನ ಓವಲ್ ಮೈದಾನದ ಹೆಲಿಪ್ಯಾಡ್‌ಗೆ ಮಧ್ಯಾಹ್ನ 12:25ಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್, ಕೇಂದ್ರ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಹಾಜರಿದ್ದರು.
ಸಫಾರಿ ನಡೆಸಿ ಗಮನ ಸೆಳೆದ "ನಮೋ"
ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಕೊಟ್ಟಿದ್ದು, ಈ ವೇಳೆ ಅವರು ಓಪನ್ ಜೀಪ್‌ನಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ.

ನರೇಂದ್ರ ಮೋದಿ ಅವರು ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿ ತೊಟ್ಟು ಓಪನ್ ಜೀಪ್‌ನಲ್ಲಿ ಕಾಡಿನಲ್ಲಿ ಸಫಾರಿ ನಡೆಸಿ ಮಿಂಚಿದ್ದಾರೆ. ಒಟ್ಟು 9 ವಾಹನಗಳು ಪ್ರಧಾನಿ ಮೋದಿಯವರ ಜೊತೆಗಿದ್ದು, ಸದ್ಯ ಸಫಾರಿ ಮುಗಿಸಿ ತಮಿಳುನಾಡಿನ ತೆಪ್ಪಕಾಡಿಗೆ ಭೇಟಿ ಕೊಡುತ್ತಿದ್ದಾರೆ. ಸಫಾರಿ ವೇಳೆ ನರೇಂದ್ರ ಮೋದಿ ಹುಲಿಯನ್ನು ವಿಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೋದಿಯವರ ಸಫಾರಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಅಲ್ಲದೇ ನಂತರ ತೆಪ್ಪಕಾಡಿನಲ್ಲಿ ಬೊಮ್ಮ-ಬೆಳ್ಳಿ ದಂಪತಿಯನ್ನು ಕೂಡ ಮೋದಿ ಭೇಟಿ ಮಾಡಿ ಸನ್ಮಾನಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್ 08) ಮೈಸೂರಿಗೆ ಬಂದಿಳಿದಿದ್ದು, ಭಾನುವಾರ (ಏಪ್ರಿಲ್ 9) ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ.
ಭಾನುವಾರ ಬೆಳಗ್ಗೆ 7:30ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಎಪ್‌ಪಿಜಿ ಭದ್ರತೆಯೊಂದಿಗೆ ಸಫಾರಿ ವಾಹನ ಹತ್ತಿ ಕಾಡಿನಲ್ಲಿ ಸುತ್ತಾಟ ಆರಂಭಿಸಿದ್ದರು. ಅವರು ಸರಿಸುಮಾರು 15 ಕಿಲೋ ಮೀಟರ್ ಸಫಾರಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಂತರ ಬೋಳಗುಡ್ಡ ಎಂಬ ಎತ್ತರದ ಪ್ರದೇಶಕ್ಕೆ ಏರಿ ಇಡೀ ಅರಣ್ಯ ಪ್ರದೇಶವನ್ನು ಕಣ್ತುಂಬಿಕೊಂಡು ಕಳ್ಳಬೇಟೆ ತಡೆ ಶಿಬಿರಕ್ಕೂ ಭೇಟಿ ನೀಡಿದ್ದಾರೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.












Click it and Unblock the Notifications