ಪ್ರಸಾದಕ್ಕೆ ಬಳಸುವ ನೀರಿಗೆ ಕೀಟನಾಶಕ ಬೆರೆಸಲಾಗಿತ್ತು: ಐಜಿಪಿ ಮಾಹಿತಿ
ಮೈಸೂರು, ಡಿಸೆಂಬರ್ 17: ಚಾಮರಾಜನಗರದ ಕಿಚ್ಚುಗತ್ತಿಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 14 ಮಂದಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆ ದೊರೆತಿದೆ.
ದೇವಸ್ಥಾನದಲ್ಲಿ ಪ್ರಸಾದವಾಗಿ ತಯಾರಿಸಲಾಗುತ್ತಿದ್ದ ರೈಸ್‌ಬಾತ್‌ಗೆ ಬಳಸುವ ನೀರಿನಲ್ಲೇ ಕೀಟನಾಶಕ ಬಳಸಿದ್ದರು ಎನ್ನುವ ಮಾಹಿತಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ಈ ಕುರಿತು ದಕ್ಷಿಣ ವಲಯ ಐಜಿಪಿ ಕೆವಿ ಶರತ್ ಚಂದ್ರ ಮಾಹಿತಿ ನೀಡಿದ್ದಾರೆ.

ಬೆಳೆಗಳಿಗೆ ಬಳಸುವ ಕೀಟ ನಾಶಕ ಮೋನೋಕ್ರೋಟೋಫಸ್ ಅನ್ನು ನೀರಿನಲ್ಲಿ ಬೆರೆಸಲಾಗಿತ್ತು. ಅಧಿಕಾರಿಗಳ ತನಿಖೆ ಮೂಲಕ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಮಾಹಿತಿ ಪಡೆದಿದ್ದಾರೆ. ಪ್ರಸಾದವಾಗಿ ಬಳಸಿದ್ದ ರೈಸ್‌ಬಾತ್‌ಗೆ ಸಿದ್ಧಪಡಿಸುತ್ತಿದ್ದ ನೀರಿಗೆ ಕ್ರಿಮಿನಾಶಕ ಮಿಶ್ರಣ ಮಾಡಲಾಗಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೈಲಿ ಬಾಯಿ ಎಂಬುವವರು ಇಂದು ಮೃತಟ್ಟಿದ್ದಾರೆ. ಈಗಾಗಲೇ 14 ಮಂದಿ ಈ ವಿಷಯ ಪ್ರಸಾದ ಸೇವಿಸಿ ಸಾವನ್ನಪ್ಪಿದ್ದಾರೆ.
ಇನ್ನೂ 20 ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಸಚಿವ ಜಿಟಿ ದೇವೇಗೌಡ ಭೇಟಿ ನೀಡಿದ್ದು ಕೆಲವು ಮಾಹಿತಿಗಳನ್ನು ಪಡೆದಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡು ಹಲವು ಮಕ್ಕಳು ಅನಾಥರಾಗಿದ್ದಾರೆ.
ಮಗುವನ್ನು ಕೊಟ್ಟು ಹೋಗಿಬಿಟ್ಟೆಯಾ ಎಂದು ಹೆಂಡತಿಯೊಬ್ಬಳು ಮಗುವನ್ನು ತೊಡೆಯಮೇಲಿರಿಸಿಕೊಂಡು ಗಂಡನ ಸಾವಿಗೆ ಕಣ್ಣೀರು ಹಾಕುತ್ತಿದ್ದಾರೆ. ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.












Click it and Unblock the Notifications