ಬೇಸಿಗೆಯಲ್ಲಿ ಪ್ರಾಣಿ ಸಂಕುಲ ಕಾಪಾಡಲು ಮೈಸೂರಿನಲ್ಲಿ ವಿಶೇಷ ಕಾರ್ಯಕ್ರಮ: ನೀವೂ ಕೈ ಜೋಡಿಸಿ
ಮೈಸೂರು, ಫೆಬ್ರವರಿ 29: ಬರದ ಪರಿಣಾಮ ಬೇಸಿಗೆಯ ಆರಂಭದಲ್ಲಿಯೇ ನೀರಿಗೆ ಹಾಹಾಕಾರ ಎದ್ದಿದ್ದು ಕೆರೆ, ನದಿ ಸೇರಿದಂತೆ ನೀರಿನ ಮೂಲಗಳು ಬತ್ತಲಾರಂಭಿಸಿವೆ. ಇದರಿಂದಾಗಿ ಬರೀ ಮನುಷ್ಯ ಮಾತ್ರವಲ್ಲದೆ, ಪ್ರಾಣಿ, ಪಕ್ಷಿ ಸಂಕುಲಗಳು ಗುಟುಕು ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಳಕಳಿಯ ನಾಗರಿಕರಾಗಿ ನಾವೆಲ್ಲರೂ ತಮ್ಮ ಕೈಲಾದ ಮಟ್ಟಿಗೆ ಪ್ರಾಣಿ, ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡಿ ಅವುಗಳನ್ನು ರಕ್ಷಿಸುವ ಕೆಲಸವನ್ನು ಮಾಡಬೇಕಾಗಿದೆ.
ಈಗಾಗಲೇ ಹಲವು ಸಂಘ ಸಂಸ್ಥೆಗಳು ಅಲ್ಲಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವಂತೆ ಮೈಸೂರಿನ ಚಾಮುಂಡಿಬೆಟ್ಟ ಮತ್ತು ನಗರದ ವಿವಿಧ ಕಡೆಗಳಲ್ಲಿರುವ ಮರಗಳಲ್ಲಿ ನೀರು ಹಾಗೂ ಆಹಾರವನ್ನಿಡುವಂತಹ ಸೇವಾ ಕಾರ್ಯಗಳನ್ನು ಆರಂಭಿಸಿವೆ. ಉಳಿದಂತೆ ನಿವಾಸಿಗಳೇ ತಮ್ಮ ಮನೆ ಮುಂದೆ ಹಾಗೂ ಮರಗಳಲ್ಲಿ ಪುಟ್ಟ ಡಬ್ಬಗಳಲ್ಲಿ ನೀರನ್ನಿರಿಸಿ ತಮ್ಮ ಕೈಲಾದ ಸೇವೆ ಮಾಡುವ ಮೂಲಕ ಪ್ರಾಣಿಪಕ್ಷಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಇನ್ನು ಕೆಲವರು ತಮ್ಮ ಮನೆಯ ತಾರಸಿಯಲ್ಲಿ ನೀರಿಟ್ಟು ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ.

ಇನ್ನು ನಗರಕ್ಕೆ ಹೊಂದಿಕೊಂಡಂತೆ ಇರುವ ಚಾಮುಂಡಿಬೆಟ್ಟದಲ್ಲಿಯೂ ಯುವಕರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅರಣ್ಯದ ಹಲವೆಡೆ ಮರ, ಗಿಡಗಳಲ್ಲಿ ಪುಟ್ಟದಾದ ನೀರಿನ ಡಬ್ಬವನ್ನು ಕಟ್ಟಿ ಅದರಲ್ಲಿ ನೀರನ್ನಿಡುವುದನ್ನು ಹಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಕೆಲವರು ಯಾವುದೇ ಪ್ರಚಾರ ಬಯಸದೆ ತಮ್ಮ ಪಾಡಿಗೆ ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಪ್ರಾಣಿ ಪಕ್ಷಿಗಳ ದಾಹ ತೀರಿಸೋಣ
ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿ ನಾಡು ಸುಭೀಕ್ಷೆಯಲ್ಲಿದ್ದರೆ ನೀರಿಗೆ ಯಾವುದೇ ರೀತಿಯ ತೊಂದರೆಗಳು ಕಾಣಿಸುವುದಿಲ್ಲ. ಆಗ ಎಲ್ಲೆಡೆ ನೀರು ಯಥೇಚ್ಛವಾಗಿ ದೊರೆಯುವ ಕಾರಣ ಪ್ರಾಣಿ, ಪಕ್ಷಿಗಳು ಅದನ್ನು ಕುಡಿದು ದಣಿವಾರಿಸಿಕೊಳ್ಳುತ್ತವೆ. ಆದರೆ ಈ ವರ್ಷದ ಪರಿಸ್ಥಿತಿ ಹಾಗಿಲ್ಲ. ಮುಂಗಾರು ಮಳೆ ಕೈಕೊಟ್ಟ ಕಾರಣ ಕೆಆರ್ ಎಸ್ ಜಲಾಶಯ ಭರ್ತಿಯಾಗಿಲ್ಲ. ಇದ್ದ ನೀರಿನಲ್ಲೂ ತಮಿಳುನಾಡಿಗೆ ಹರಿಸಿಯಾಗಿದೆ. ಬೇಸಿಗೆ ಆರಂಭದಲ್ಲಿಯೇ 124 ಅಡಿಯ ಜಲಾಶಯದಲ್ಲಿ ನೀರು 90 ಅಡಿಗೆ ತಲುಪಿದೆ.

ಮುಂದಿನ ಬೇಸಿಗೆಯ ದಿನಗಳಲ್ಲಿ ಕುಡಿಯಲು ನೀರು ಒದಗಿಸುವುದೇ ಕಷ್ಟವಾಗಿದೆ. ಇದರ ಜತೆಗೆ ಸುತ್ತಮುತ್ತಲಿದ್ದ ಕೆರೆಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕೆರೆಗಳು ಬತ್ತಲಾರಂಭಿಸಿವೆ. ಕಾವೇರಿ, ಕಬಿನಿ ಸೇರಿದಂತೆ ಸಣ್ಣಪುಟ್ಟ ನದಿಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಹೀಗಾಗಿ ನಗರಗಳಲ್ಲಿ ಅಡ್ಡಾಡುತ್ತಾ ಜೀವಿಸುವ ಬೀದಿ, ನಾಯಿಗಳು, ಜಾನುವಾರು, ಕತ್ತೆ, ಕುದುರೆಗಳಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿವೆ. ಇವುಗಳಿಗೆ ನೀರು ನೀಡಿ ಜೀವ ಉಳಿಸುವ ಕೆಲಸವನ್ನು ನಾವು ಮಾಡ ಬೇಕಾಗಿದೆ.
ಮೈಸೂರಿನಲ್ಲಿ ಮೂಕಸ್ಪಂದನೆ ಕಾರ್ಯಕ್ರಮ
ಇದೀಗ ಮೈಸೂರಿನಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಎರಡು ತಿಂಗಳ ಕಾಲ ಮೂಕ ಸ್ಪಂದನೆ ಕಾರ್ಯಕ್ರಮದಡಿ 'ನೀರುಣಿಸಿ- ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದಲ್ಲಿ ಹಮ್ಮಿಕೊಂಡಿದ್ದು, ಆರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

.ಮೈಸೂರು ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಮರಗಳಿಗೆ ಪ್ರಾಣಿ ಪಕ್ಷಿ ಉಳಿಸಿ ಎಂಬ ನಾಮಫಲಕ ಹಾಗೂ ನೀರು, ಆಹಾರದ ಬಟ್ಟಲು ಅಳವಡಿಸುವ ಮೂಲಕ ಮೂಕ ಸ್ಪಂದನೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಅಲ್ಲಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ನೀಡುವ ಕಾರ್ಯ ನಡೆಯುತ್ತಿದೆ. ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳಿಗೆ ನೀರು ಆಹಾರ ಸಿಗದ ಕಾರಣ ಅವುಗಳು ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅರಿತು ಮೂಕಸ್ಪಂದನೆ ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ.
ಜೀವಸಂಕುಲಗಳ ಉಳಿವಿಗೆ ಅಳಿಲು ಸೇವೆ
ಈ ಕಾರ್ಯಕ್ರಮದಡಿ ಮೈಸೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಮತ್ತು ಆಹಾರದ ತಟ್ಟೆಯನ್ನಿಡಲಾಗುತ್ತದೆ. ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುತ್ತದೆ. ಜತೆಗೆ ಎಲ್ಲರೂ ಅವರವರ ಮನೆಗಳ ಮೇಲಿನ ತಾರಸಿಯ ಮೇಲೆ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಪ್ರಾಣಿ ಪಕ್ಷಿಗಳ ಬಾಯಿಗೆ ಎಟುಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು ಅದರಲ್ಲಿ ಶುದ್ಧ ನೀರನ್ನು ತುಂಬಿಡುವಂತೆ, ಆಹಾರ ಧಾನ್ಯವನ್ನು ಮಿತವಾಗಿಟ್ಟು ಹಸಿವು ನೀಗಿಸುವಂತೆ ಅಭಿಯಾನದ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.

ಇನ್ನು ಅಭಿಯಾನಕ್ಕೆ ಕೈ ಜೋಡಿಸಲು ಬಯಸುವವರಿಗೆ ಅವಕಾಶ ನೀಡಲಾಗಿದ್ದು, ಆಸಕ್ತರು 9880752727 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುವ ಕೆಲಸಗಳು ಎಲ್ಲ ಪಟ್ಟಣ, ನಗರಗಳಲ್ಲಿ ಅಗತ್ಯವಾಗಿ ನಡೆಯಬೇಕಾಗಿದೆ. ಆ ಮೂಲಕ ನಮ್ಮ ಸುತ್ತಮುತ್ತ ಇರುವ ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವ ಸಂಕುಲಗಳನ್ನು ಬೇಸಿಗೆಯ ಬಿಸಿಲ ಝಳದಿಂದ ಕಾಪಾಡಬೇಕಾಗಿದೆ. ಮೂಕ ಪ್ರಾಣಿಗಳ ಸಂಕಷ್ಟ ಅರಿತು ಅವುಗಳ ಉಳಿವಿಗೆ ಕೆಲಸ ಮಾಡುವುದು ಪುಣ್ಯ ಕಾರ್ಯವಾಗಿರುವುದರಿಂದ ಜವಬ್ದಾರಿಯುತ ನಾಗರಿಕರಾದ ನಾವು ಆ ನಿಟ್ಟಿನಲ್ಲಿ ಅಳಿಲು ಸೇವೆ ಮಾಡೋಣ.












Click it and Unblock the Notifications