ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕರಿಸಬೇಕು: ಬಡಗಲಪುರ ನಾಗೇಂದ್ರ
ಮೈಸೂರು, ಜುಲೈ 10: ರಾಜಕಾರಣಕ್ಕೆ ಒಂದು ಮೌಲ್ಯವಿದೆ. ಆದರೆ ಇದೀಗ ತಲೆ ತಗ್ಗಿಸುವಂತೆ ರಾಜಕಾರಣ ನಡೆಯುತ್ತಿದ್ದು, ಕಾರಣವೇ ಇಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ವಿಧಾನಸಭಾ ಅಧ್ಯಕ್ಷರು ತಿರಸ್ಕರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಹಾಗೂ ಜಾ.ದಳ ಮೈತ್ರಿ ಶಾಸಕರು ಕಾರಣವಿಲ್ಲದೆಯೇ ರಾಜೀನಾಮೆ ನೀಡಿರುವುದು ಮತದಾರರಿಗೆ ಮಾಡಿದ ಅವಮಾನ. ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಮತದಾರರು ವಿಧಾನಸಭಾ ಅಧ್ಯಕ್ಷರಿಗೆ ಆಕ್ಷೇಪಣೆ ಸಲ್ಲಿಸಬೇಕು. ಚುನಾವಣೆ ಮತ್ತೆ ನಡೆದರೆ ದುಂದು ವೆಚ್ಚವಾಗಲಿದೆ. ಆದ್ದರಿಂದ ವಿಧಾನಸಭಾ ಅಧ್ಯಕ್ಷರು ರಾಜೀನಾಮೆ ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಾಸಕರ ರಾಜೀನಾಮೆ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬಾರದಿತ್ತು. ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿರುವುದು ತಪ್ಪು. ರಾಜ್ಯಪಾಲರು ಒಂದು ಪಕ್ಷದ ಹಿತ ನೋಡುತ್ತಿದ್ದಾರೆ ಅನ್ನಿಸುತ್ತಿದೆ. ಮುಂಬೈ ಗೋವಾದಲ್ಲಿರುವ ಶಾಸಕರು ತಕ್ಷಣ ತಮ್ಮ ಕ್ಷೇತ್ರಕ್ಕೆ ಮರಳಬೇಕು. ರಾಜ್ಯದಲ್ಲಿ ಉಂಟಾಗಿರುವ ಜ್ವಲಂತ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications