ಚೆನ್ನೈ ಪ್ರವಾಹ : ಮೈಸೂರಿನ ಇಂಜಿನಿಯರ್ ನಾಪತ್ತೆ
ಹುಣಸೂರು, ಡಿಸೆಂಬರ್ 03 : ಚೆನ್ನೈನಲ್ಲಿ ಶತಮಾನ ಕಂಡಿರದಿದ್ದ ಕುಂಭದ್ರೋಣ ಮಳೆಗೆ ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರು ಸಿಲುಕಿಕೊಂಡಿದ್ದು, ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲದಿರುವುದು ಹೆತ್ತವರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ಗಾಯಿತ್ರಿ-ವಿಜಯೇಂದ್ರ ದಂಪತಿಗಳ ಪುತ್ರ ಸುಧೀಂದ್ರ ಗೌಡ ಕಳೆದ ಮೂರು ದಿನಗಳಿಂದ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ. 6 ತಿಂಗಳ ಹಿಂದೆ ಚೆನ್ನೈನ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರಿದ್ದರು.
ಮೂರು ದಿನಗಳ ಹಿಂದೆ ಮನೆಯವರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮನೆಯೊಳಗೆ ನೀರು ತುಂಬಿದ್ದು ಎದುರು ಮನೆಯವರೊಂದಿಗೆ ಸುರಕ್ಷಿತವಾಗಿದ್ದೇನೆ, ಇನ್ನೊಂದು ದಿನದಲ್ಲಿ ಹೊರಟು ಬರುತ್ತೇನೆಂದು ತಿಳಿಸಿದ್ದರು. ಮಾರನೆಯ ದಿನ ಆತನ ಜೊತೆಗಿದ್ದ ಸ್ನೇಹಿತನ ಸಂಪರ್ಕ ಸಾಧ್ಯವಾಗಿತ್ತು. [ಚೆನ್ನೈ ಜಲಪ್ರಳಯಕ್ಕೆ ನೆರವಾಗುತ್ತಿರುವ ಟ್ವಿಟ್ಟರ್ ಮಿತ್ರರು]

ಆತ ತಾನೂ ಈಜಿಕೊಂಡು ವಿಮಾನ ನಿಲ್ದಾಣದ ಬಳಿ ಬಂದು ಅಲ್ಲಿಂದ ಬೆಂಗಳೂರು ತಲುಪಿದ್ದೇನೆಂದು ತಿಳಿಸಿದ್ದ. ಆದರೆ ನಂತರ ತನ್ನ ಮಗನ ಸಂಪರ್ಕವೇ ಸಾಧ್ಯವಾಗಿಲ್ಲವೆಂದು ತಾಯಿ ಗಾಯಿತ್ರಿ ಕಣ್ಣೀರುಗರೆಯುತ್ತಿದ್ದಾರೆ. ಇದೀಗ ಹೆತ್ತವರು ಸುಧೀಂದ್ರಗೌಡನ ಆಗಮನಕ್ಕಾಗಿ ದಾರಿ ಕಾಯುತ್ತಿದ್ದಾರೆ.
ಚೆನ್ನೈನಲ್ಲಿ ಲಭ್ಯ ಅಂಕೆಸಂಖ್ಯೆಗಳ ಪ್ರಕಾರ ಕನಿಷ್ಠ 1 ಲಕ್ಷ ಕನ್ನಡಿಗರಿದ್ದಾರೆ. ಕಳೆದ 15 ದಿನಗಳಲ್ಲಿ 200ಕ್ಕೂ ಹೆಚ್ಚು ಚೆನ್ನೈ ನಿವಾಸಿಗಳು ಪ್ರವಾಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆ ಪ್ರಮಾಣ ಕಡಿಮೆಯಾಗಿದ್ದರೂ ನದಿ ಉಕ್ಕಿ ಹರಿಯುತ್ತಿದ್ದರಿಂದ ಇನ್ನೂ ಸಹಸ್ರಾರು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ.












Click it and Unblock the Notifications