ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ- ಸಿದ್ದರಾಮಯ್ಯ
ಮೈಸೂರು,ಏಪ್ರಿಲ್ 3: ಮೀಸಲು ಹೆಚ್ಚಳ ವಿಷಯದಲ್ಲಿ ಬಿಜೆಪಿ ಎಲ್ಲಾ ಸಮುದಾಯದವರಿಗೂ ಮಕ್ಮಲ್ ಟೋಪಿ ಹಾಕುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಭವನದ ಆವರಣದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ 'ಸಂವಿಧಾನ ಬಚಾವೋ ದೇಶ್ ಬಚಾವೋ' ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಅವರು, ಯಾವುದೇ ಮೀಸಲು ಜಾರಿಗೆ ಬರಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು. ಶೆಡ್ಯೂಲ್ 9ರಲ್ಲಿ ಸೇರಿಸಬೇಕು ಎಂದು ಹೇಳಿದರು.

ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲು ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಬಾರದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತಮಿಳುನಾಡಿನಲ್ಲಿ ಜಯಲಲಿತಾ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ. 69 ಮೀಸಲು ನೀಡಿದ್ದಾರೆ. ಇದೀಗ ಸರಕಾರ ಶೇ. 6ರಷ್ಟು ಮೀಸಲು ಹೆಚ್ಚಿಸಿದೆ. ಇದು ಅನುಷ್ಠಾನಕ್ಕೆ ಬರಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು ಎಂದು ತಿಳಿಸಿದರು.
ಮಾತು ಮುಂದುವರಿಸಿದ ಸಿದ್ದರಾಮಯ್ಯ, ಈ ಬಾರಿ ಶೇ. 100ರಷ್ಟು ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯ ಜನ ವಿರೋಧಿ ನೀತಿ ಕಂಡು ಜನ ಬೇಸತ್ತಿದ್ದಾರೆ. ಮೀಸಲು ವಿಚಾರದಲ್ಲಿ ಬಿಜೆಪಿ ನಾಯಕರು ಗೊಂದಲ ಸೃಷ್ಟಿಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಸಮುದಾಯಗಳಿಗೂ ಜನಸಂಖ್ಯೆ ಆಧಾರದ ಮೇಲೆ ವೈಜ್ಞಾನಿಕವಾಗಿ ಮೀಸಲು ಜಾರಿ ಮಾಡುತ್ತದೆ ಎಂದು ಭರವಸೆ ನೀಡಿದರು.
ಮುಸ್ಲಿಂ ಸಮುದಾಯಕ್ಕೆ 28 ವರ್ಷಗಳಿಂದ ಜಾರಿಯಲ್ಲಿದ್ದ ಮೀಸಲು ಕಿತ್ತು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಕೊಡಲಾಗಿದೆ. ಆ ಮೂಲಕ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ಮೀಸಲು ಕೊಟ್ಟಿದ್ದು ಸಂವಿಧಾನ ಬಾಹಿರ ಎನ್ನುವ ಬಿಜೆಪಿ ನಾಯಕರು ಇಡಬ್ಲ್ಯೂಸ್‌ಗೆ ಯಾಕೆ ಸೇರಿಸಿದ್ದಾರೆ? ಅವರ ನಡೆಯಲ್ಲಿ ವೈರುಧ್ಯತೆ ಇದೆ, ಎಂದು ಆರೋಪಿಸಿದರು.

ಹಿಂದೆಯೆಲ್ಲಾ ಮೀಸಲಾತಿ ಜಾರಿ ಮಾಡುವಾಗ ಜೇನುಗೂಡಿಗೆ ಕೈಹಾಕಿ ಮಾಡಿದ್ದ? ಬೊಮ್ಮಾಯಿ ಅವರ ಸರ್ಕಾರ ಏನು ಹೊಸದಾಗಿ ಮೀಸಲಾತಿ ಜಾರಿ ಮಾಡಿದ್ದ? ಕೆಟಗರಿ 1, 2ಎ, 2ಬಿ, 3ಎ, 3ಬಿ ಇವುಗಳೆಲ್ಲ ಬೊಮ್ಮಾಯಿ ಅವರ ಸರ್ಕಾರದ ಕಾಲದಲ್ಲಿ ಮಾಡಿದ್ದ? ಹಿಂದೆಲ್ಲಾ ಮೀಸಲಾತಿ ನೀಡಿಲ್ವಾ ಎಂದು ತಿರುಗೇಟು ನೀಡಿದರು. ಕೆಟಗರಿ 2ಬಿ ಯನ್ನು ರದ್ದು ಮಾಡಿದ್ದು ಯಾಕೆ? ಇದು 1995 ಜನವರಿಯಿಂದ ಇತ್ತು, ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ಈ ಮೀಸಲಾತಿ ನೀಡಲಾಗಿತ್ತು. ಈಗ ಮೀಸಲಾತಿಯನ್ನು ತೆಗೆದುಹಾಕಿದರೆ ಅದು ಸೇಡಿನ ರಾಜಕಾರಣವಾಗಲ್ವಾ? ಎಂದು ಪ್ರಶ್ನಿಸಿದರು.
ಈ ವೇಳೆ ಉಪಸ್ಥಿತರಿದ್ದ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, 'ಬಿಜೆಪಿ ಸರಕಾರ ಬಡವರು, ದಲಿತರು, ಹಿಂದುಳಿದ ವರ್ಗದವರ ಎಲ್ಲ ಬೇಡಿಕೆಯನ್ನು ಮುಗಿಸುವ ಪ್ರಯತ್ನ ಮಾಡುತ್ತಿದೆ. ಬೊಮ್ಮಾಯಿ ಸರಕಾರ ಸಂವಿಧಾನ ವಿರೋಧಿಯಾಗಿದೆ. ದಲಿತರ ಮೀಸಲು ಹೆಚ್ಚಳ ಕ್ರಮಬದ್ಧವಾಗಿಲ್ಲ. ಬಿಜೆಪಿ ಸರಕಾರದ ಮೀಸಲು ಹಂಚಿಕೆಯೂ ನ್ಯಾಯಾಲಯದ ಮೆಟ್ಟಿಲು ಏರಿ, ಏನೂ ಸಿಗದಂತೆ ಮಾಡುವುದಾಗಿದೆ' ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಜಮೀರ್ ಅಹಮದ್ ಖಾನ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್, ಎಐಸಿಸಿ ಕಾರ್ಯದರ್ಶಿ ರೊಜಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications