ರಾಷ್ಟ್ರ ರಾಜಕಾರಣಕ್ಕೆ ಹೋಗಲು ಸಿದ್ದರಾಮಯ್ಯಗೆ ಪುಕ್ಕಲುತನ; ಎಚ್. ವಿಶ್ವನಾಥ್ ವ್ಯಂಗ್ಯ
ಮೈಸೂರು, ಅಕ್ಟೋಬರ್ 11: ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, "ರಾಷ್ಟ್ರ ರಾಜಕಾರಣ ಹೋಗಲು ಸಿದ್ದರಾಮಯ್ಯಗೆ ಪುಕ್ಕಲುತನವಿದೆ," ಎಂದು ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಲಘುವಾಗಿ ಮಾತನಾಡುವ ಸಿದ್ದರಾಮಯ್ಯಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಪುಕ್ಕಲತನವಿದೆ. ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದಿರುವ ಸಿದ್ದರಾಮಯ್ಯ, ನಾನು ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆ ಎಂಬ ಧೈರ್ಯ ತೊರಬೇಕಿತ್ತು. ಆದರೆ ಸಿದ್ದರಾಮಯ್ಯ ರಾಜಕೀಯ ಪುಕ್ಕಲುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಟೀಕಿಸಿದ ಎಚ್. ವಿಶ್ವನಾಥ್, ನೀವು ಹೇಗೆ ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತಾಡಲು ಸಮರ್ಥರು?," ಎಂದು ಪ್ರಶ್ನಿಸಿದರು.

ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆಂದ ಸಿದ್ದರಾಮಯ್ಯ
ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಊಹಾಪೋಹವಷ್ಟೇ. ಈ ವಿಚಾರವಾಗಿ ಸೋನಿಯಾ ಗಾಂಧಿ ನನ್ನನ್ನು ಕರೆದಿಲ್ಲ ಹಾಗೂ ಆ ಬಗ್ಗೆ ಚರ್ಚೆಯೂ ಆಗಿಲ್ಲ. ಇದೆಲ್ಲಾ ಕೇವಲ ಊಹಾಪೋಹವಾಗಿದ್ದು, ಈ ವಿಷಯದ ಕುರಿತು ಚರ್ಚೆಗಳು ಬೇಡ. ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ನಾನು ಎಂದು ಯೋಚನೆ ಮಾಡಿಯೂ ಇಲ್ಲ. ಹೀಗಾಗಿ ಆ ಬಗ್ಗೆ ಚರ್ಚೆ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ," ಎಂದಿದ್ದರು.
ಇದೇ ವೇಳೆ ಐಟಿ ದಾಳಿ ಸಂಬಂಧ ಪ್ರತಿಪಕ್ಷಗಳಿಂದ ರಾಜಕೀಯ ವಾಸನೆ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, "ಪ್ರತಿಪಕ್ಷಗಳು ಯಾರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದೀರಾ? ವೀರಶೈವ ಸಮುದಾಯ ಪ್ರಜ್ಞಾವಂತ ಸಮಾಜವಾಗಿದ್ದು, ಅವರನ್ನು ದಡ್ಡರು ಅಂದುಕೊಂಡರೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಷ್ಟು ದಡ್ಡರು ಯಾರು ಇರುವುದಿಲ್ಲ. ರಾಜ್ಯದಲ್ಲಿ ನಡೆದಿರುವ ಐಟಿ ದಾಳಿಯನ್ನು ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಹೀಗಿರುವಾಗ ನಿಮ್ಮಿಬ್ಬರ ಕೊಸರು ಏನು?," ಎಂದು ಪ್ರಶ್ನಿಸಿದರು.

ಐಟಿ ದಾಳಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
"ಅಲ್ಲದೇ ಐಟಿ ದಾಳಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿದ್ದಾರೆ. ಅಂದ ಮೇಲೆ ಇದರಲ್ಲಿ ರಾಜಕೀಯದ ವಾಸನೆ ಏನು? ನಿಮ್ಮ ಇಂತಹ ಹೇಳಿಕೆಗಳನ್ನು ಕೇಳಿ ಜನರು ನಗದೇ ಏನು ಮಾಡುತ್ತಾರೆ. ಈ ರೀತಿಯ ಬೂಟಾಟಿಕೆಯ ಹೇಳಿಕೆ ಬಗ್ಗೆ ಜನ ನಗುತ್ತಾರೆ. ಆದ್ದರಿಂದ ಹೇಳಿಕೆ ಕೊಡುವ ಮುನ್ನ ಎಚ್ಚರವಹಿಸಿ ಎಂದು ಸಲಹೆ ನೀಡಿದ ಎಚ್. ವಿಶ್ವನಾಥ್, ಐಟಿ- ಇಡಿ ದಾಳಿ ಬಗ್ಗೆ ಲಘುವಾಗಿ ಮಾತನಾಡಬೇಡಿ," ಎಂದರು.
"ಬೃಹತ್ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಐಟಿ, ಇಡಿ ದಾಳಿ ನಡೆಯುತ್ತಿದೆ. ಇದು ಜನರಲ್ಲಿ ಭ್ರಷ್ಟಾಚಾರದ ಅನುಮಾನ ಮೂಡುತ್ತಿದೆ. ಆದರೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾತ್ರ ತಮಗೆ ರಾಜಕೀಯದ ವಾಸನೆ ಬರುತ್ತಿದೆ ಎಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅಪ್ಪ- ಮಗ ಅಂತ ಏನೆಲ್ಲ ಮಾತನಾಡಿದ್ದೀರಿ ನೆನಪು ಮಾಡಿಕೊಳ್ಳಿ. ಅಂದು ಯಡಿಯೂರಪ್ಪರನ್ನು ವಾಚಾಮಗೋಚರವಾಗಿ ತೆಗಳಿದವರು ಈಗ ಹುಸಿ ಪ್ರೇಮ ತೋರಿಸುತ್ತಿದ್ದಾರೆ," ಎಂದು ಕಿಡಿಕಾರಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಲಾಭವಿಲ್ಲ
"ಇಂತಹ ಹೇಳಿಕೆಯಿಂದ ಯಾರಿಗೂ ಲಾಭವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಲಾಭವೂ ಇಲ್ಲ, ಬಿಜೆಪಿಗೆ ನಷ್ಟವೂ ಇಲ್ಲ. ಬಿಎಸ್‌ವೈರನ್ನು ಓಲೈಕೆ ಮಾಡುವುದರಿಂದ ಲಿಂಗಾಯತ ಸಮುದಾಯದ ಮತಗಳು ಬರಲ್ಲ. ಐಟಿ ದಾಳಿಯನ್ನು ಯಡಿಯೂರಪ್ಪನವರೇ ಸ್ವಾಗತ ಮಾಡಿರುವಾಗ ನಿಮ್ಮದೇನು ಆಕ್ಷೇಪ. ಸಿಬಿಐ, ಸಿಐಡಿ, ಐಟಿ, ಇಡಿ ಮುಂತಾದವು ಸಾಂವಿಧಾನಿಕ ಸಂಸ್ಥೆಗಳು. ಭ್ರಷ್ಟಾಚಾರದ ಮೇಲೆ ದಾಳಿ ಮಾಡುವಾಗ ನಿಮ್ಮದೇನು ತಕರಾರು? ಹಾಗಾದರೆ ನೀವು ಭ್ರಷ್ಟಾಚಾರದ ಪರವೋ, ವಿರುದ್ಧವೋ?," ಎಂದು ಪ್ರಶ್ನಿಸಿದರು.
Recommended Video

ನಿಮ್ಮ ಆಡಳಿತದಲ್ಲಿ ಮಹಾ ಭ್ರಷ್ಟಾಚಾರವೇ ನಡೆಯಿತು
"ಸಿದ್ದರಾಮಯ್ಯನವರೇ ಈ ಹಿಂದೆ ನೀವು ನಿಮ್ಮ ಹಗರಣವನ್ನು ಮುಚ್ಚಿಕೊಳ್ಳಲು ಲೋಕಾಯುಕ್ತವನ್ನೆ ಮುಚ್ಚಿ ಹಾಕಿದಿರಿ. ನಿಮ್ಮ ಆಡಳಿತ ಭ್ರಷ್ಟಾಚಾರ ಮುಕ್ತವಾಗಿತ್ತಾ?. ನಿಮ್ಮ ಆಡಳಿತದಲ್ಲಿ ಮಹಾ ಭ್ರಷ್ಟಾಚಾರವೇ ನಡೆಯಿತು. ಅಂದು ಭ್ರಷ್ಟಾಚಾರಕ್ಕೆ ನೀವೇ ಬೆಂಬಲ ಕೊಟ್ಟಿದ್ದೀರಿ. ಇಂದು ಕೂಡ ಐಟಿ ದಾಳಿ ಖಂಡಿಸಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದ ವಿಶ್ವನಾಥ್, ರಾಜ್ಯದಲ್ಲಿ ಮತ್ತೆ ಲೋಕಾಯುಕ್ತ ಜಾರಿ ಮಾಡಿ ಎಂದು ಸಿಎಂಗೆ ಒತ್ತಾಯಿಸುತ್ತೇನೆ. ಇಂದು ಯಾರಿಗೂ ಭಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮತ್ತೆ ಲೋಕಾಯುಕ್ತ ಆರಂಭಿಸಿ ಎಲ್ಲರಿಗೂ ಭಯ ಮುಟ್ಟಿಸಿ," ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಒತ್ತಾಯಿಸಿದರು.
ಇನ್ನು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ವಿಶ್ವನಾಥ್, "ನನ್ನಂಥ ಪ್ರಾಮಾಣಿಕ ಇನ್ನೊಬ್ಬ ಇಲ್ಲ ಅಂತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಾರೆ. ಆದರೆ, ರಮೇಶ್ ಕುಮಾರ್‌ನಂಥ ಭ್ರಷ್ಟ ಇನ್ನೊಬ್ಬ ಇಲ್ಲ. ಅರಣ್ಯ ಭೂಮಿಯನ್ನೇ ನುಂಗಿದ ಭ್ರಷ್ಟ ರಮೇಶ್ ಕುಮಾರ್ ಆಗಿದ್ದು, ಇಂಥ ರಮೇಶ್ ಕುಮಾರ್ ಯಶಸ್ವಿನಿ ಯೋಜನೆ ಮುಚ್ಚಿ ರೈತರಿಗೆ ಅನ್ಯಾಯ ಮಾಡಿದರು," ಎಂದು ಕಿಡಿಕಾರಿದರು.












Click it and Unblock the Notifications