ಕೈಕೊಟ್ಟ ಮಳೆ: ಹೆಚ್.ಡಿ.ಕೋಟೆ ವ್ಯಾಪ್ತಿಯ 4 ಜಲಾಶಯಗಳು ಖಾಲಿ.. ಖಾಲಿ..
ಮೈಸೂರು, ಸೆಪ್ಟೆಂಬರ್, 27: ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಕಬಿನಿ, ತಾರಕ, ನುಗು ಮತ್ತು ಹೆಬ್ಬಾಳ ಎಂಬ ನಾಲ್ಕು ಜಲಾಶಯಗಳಿದ್ದರೂ ಎಲ್ಲವೂ ಖಾಲಿಯಾಗಿರುವುದು ಈ ಬಾರಿಯ ಬರದ ತೀವ್ರತೆಗೆ ಹಿಡಿದ ಕೈಕನ್ನಡಿಯಾಗಿದೆ. ಈ ನಾಲ್ಕು ಜಲಾಶಯಗಳ ಪೈಕಿ ಕಬಿನಿ ಜಲಾಶಯವನ್ನು ಹೊರತುಪಡಿಸಿ ಉಳಿದ ಮೂರು ಜಲಾಶಯಗಳು ಮಳೆ ನೀರಿನಿಂದಲೇ ಭರ್ತಿಯಾಗಬೇಕಾಗಿದ್ದು, ಹೀಗಾಗಿ ಪ್ರತಿವರ್ಷವೂ ಭರ್ತಿಯಾದ ಉದಾಹರಣೆ ಕಡಿಮೆಯೇ.
ಈ ಮೂರು ಜಲಾಶಯಗಳು ಭರ್ತಿಯಾಗಬೇಕಾದರೆ ಕುಂಭದ್ರೋಣ ಮಳೆ ಸುರಿಯಬೇಕು. ಕಳೆದ ವರ್ಷದವರೆಗೂ ಈ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿತ್ತಾದರೂ ಈ ಬಾರಿ ಮಳೆಯಿಲ್ಲದೆ ನೀರು ತಳ ಸೇರಿದೆ. ಜುಲೈ ತಿಂಗಳಲ್ಲಿ ಭರ್ತಿಯಾಗುವ ಹಂತದಲ್ಲಿದ್ದ ಕಬಿನಿ ಜಲಾಶಯ ಮಳೆ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸಿದ ಕಾರಣ ನೀರಿನ ಮಟ್ಟ ಕುಸಿದಿದೆ.

ಕೇರಳ ಮತ್ತು ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಮಳೆ ಬಾರದ ಕಾರಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರಲಿಲ್ಲ. ಹೀಗಾಗಿ ಈ ಜಲಾಶಯಗಳನ್ನು ನಂಬಿ ಬದುಕುತ್ತಿದ್ದ ರೈತರ ಬದುಕು ಹೇಳತೀರದಾಗಿದೆ.
2020ರಲ್ಲಿ ಕೇರಳ ಮತ್ತು ಹೆಚ್.ಡಿ.ಕೋಟೆ ತಾಲೂಕಿನಾದ್ಯಂತ ಉತ್ತಮ ಮಳೆ ಸುರಿದ ಪರಿಣಾಮ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ, ತಾರಕ ಮತ್ತು ನುಗು ಮಾತ್ರವಲ್ಲದೆ ಹೆಬ್ಬಾಳ ಜಲಾಶಯವು ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಹೋಗಿತ್ತು. ಕಳೆದ ವರ್ಷ ಹೆಚ್ಚುವರಿ ನೀರು ಹರಿದು ಹೋಗದಿದ್ದರೂ ತಾರಕ, ನುಗು ಮತ್ತು ಹೆಬ್ಬಾಳ ಜಲಾಶಯದಲ್ಲಿ ನೀರಿನ ಪ್ರಮಾಣ ಉತ್ತಮ ಸ್ಥಿತಿಯಲ್ಲಿತ್ತು.
2017ರ ಬಳಿಕ ಉತ್ತಮ ಮಳೆಯಾದ ಪರಿಣಾಮ ಕಬಿನಿ, ತಾರಕ ಹಾಗೂ ನುಗು ಜಲಾಶಯದಲ್ಲಿ ನೀರಿನ ಶೇಖರಣೆ ಉತ್ತಮ ಪ್ರಮಾಣದಲ್ಲಿಯೇ ಇತ್ತು. ಆದರೆ ಈ ಬಾರಿ ಬರ ಕಾಡಿರುವುದರಿಂದ ಜಲಾಶಯಗಳು ಖಾಲಿ ಖಾಲಿಯಾಗಿವೆ. ಈ ಜಲಾಶಯಗಳು ಭರ್ತಿಯಾದರೆ ಆ ವರ್ಷ ಉತ್ತಮ ಮುಂಗಾರು ಎಂದೇ ಅರ್ಥ.
ಜಲಾಶಯಗಳು ಭರ್ತಿಯಾಗುವುದು ಅಪರೂಪ
ಹಾಗೆನೋಡಿದರೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಮೂರು ಜಲಾಶಯವಿದ್ದರೂ ಕಬಿನಿ ಜಲಾಶಯ ಮಾತ್ರ ಸಾಮಾನ್ಯವಾಗಿ ಭರ್ತಿಯಾಗುತ್ತದೆ. ಉಳಿದಂತೆ ನುಗು ಮತ್ತು ತಾರಕ ಜಲಾಶಯಗಳು ಭರ್ತಿಯಾಗಿರುವುದು ಅಪರೂಪ. ನುಗು ಜಲಾಶಯ 2009 ಮತ್ತು 2013ರಲ್ಲಿ ಭರ್ತಿಯಾಗಿತ್ತು. ಆದಾದ ಬಳಿಕ 2018ರ ನಂತರ ಪ್ರತಿವರ್ಷವೂ ಅಂದರೆ 2022ರ ತನಕವೂ ಭರ್ತಿಯಾಗುತ್ತಾ ಬಂದಿತ್ತು. ಇದು 110 ಅಡಿ ಸಾಮರ್ಥ್ಯದ ಈ ಜಲಾಶಯವಾಗಿದ್ದು, 1956ರಲ್ಲಿ ನಿರ್ಮಿಸಲು ಆರಂಭಿಸಿ 1959ರಲ್ಲಿ ಪೂರ್ಣಗೊಳಿಸಲಾಗಿತ್ತು.
ಇನ್ನು ಇಲ್ಲಿರುವ ತಾರಕ ಜಲಾಶಯದ ಬಗ್ಗೆಯೂ ಹೇಳಬೇಕಾಗುತ್ತದೆ. ಇದು 2013ರ ಬಳಿಕ 2018ರಲ್ಲಿ ಭರ್ತಿಯಾಗಿತ್ತು. ಅದಾದ ನಂತರ ಭರ್ತಿಯಾಗುತ್ತಲೇ ಬರುತ್ತಿತ್ತು. 1998ರಲ್ಲಿ ಕೃಷಿ ಉದ್ದೇಶದಿಂದ ನಿರ್ಮಾಣವಾದ ತಾರಕ ಜಲಾಶಯ ರೈತರ ಕೃಷಿ ಭೂಮಿಗೆ ನೀರೊದಗಿಸುತ್ತಿದೆ. 2425 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ 2013ರಲ್ಲಿ ದಾಖಲೆಯ ಪ್ರಮಾಣದ ನೀರು ಸಂಗ್ರಹವಾಗಿದ್ದನ್ನು ಬಿಟ್ಟರೆ 2018ರಲ್ಲಿ ನೀರು ಸಂಗ್ರಹವಾಗಿತ್ತು.
3.80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತಾರಕ ಜಲಾಶಯದ ಕ್ರಸ್ಟ್ ಗೇಟ್ 2006ರಲ್ಲಿ ಒಡೆದು ಜಲಾಶಯದ ನೀರು ಮನೆ, ಜಮೀನಿಗೆ ನುಗ್ಗಿ ಹಾನಿಯಾಗಿತ್ತು. ಈ ಜಲಾಶಯಕ್ಕೆ ಕಬಿನಿ ಹಿನ್ನೀರಿನಿಂದ ನೀರನ್ನು ತುಂಬಿಸಿಡುವ ಕೆಲಸ ಮಾಡಬಹುದಾದರೂ ಅದು ಸಾಧ್ಯವಾಗಿಲ್ಲ.
ಉಪಯೋಗಕ್ಕೆ ಬಾರದ ಜಲಾಶಯಗಳು
ಈ ವ್ಯಾಪ್ತಿಯಲ್ಲಿ ಇನ್ನೊಂದು ಪುಟ್ಟ ಹೆಬ್ಬಾಳ ಜಲಾಶಯವಿದ್ದು, ಧಾರಾಕಾರ ಮಳೆಯಾದರೆ ಮಾತ್ರ ಇದು ಭರ್ತಿಯಾಗುತ್ತದೆ. ಆದರೆ ಈ ವರ್ಷ ಮಳೆ ಬಾರದ ಕಾರಣ ಈ ಜಲಾಶಯ ಭರ್ತಿಯಾಗಿಲ್ಲ. ಒಟ್ಟಾರೆ ನಾಲ್ಕು ಜಲಾಶಯಗಳಿದ್ದರೂ ಈ ಬಾರಿ ಮಳೆಯಿಲ್ಲದ ಕಾರಣದಿಂದ ಭರ್ತಿಯಾಗದೆ ಇವುಗಳು ರೈತರ ಬಳಕೆಗೆ ಬಾರದಂತಾಗಿವೆ ಕಬಿನಿ ಹೊರತುಪಡಿಸಿ ಮೂರು ಜಲಾಶಯಗಳು ಮಳೆ ನೀರಿನಿಂದಲೇ ಭರ್ತಿಯಾಗುವುದರಿಂದ. ಈ ಸಲದ ಬರ ಈ ಜಲಾಶಯಗಳಿಗೂ ತಟ್ಟಿದ್ದು, ಜನ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.












Click it and Unblock the Notifications