ಪೌರಕಾರ್ಮಿಕನನ್ನು ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ ಅಮಾನತು
ಮೈಸೂರು, ಜೂನ್ 9: ಇಡೀ ರಾಜ್ಯವೇ ಅಸಹ್ಯ ಪಡಿಸುವಂತಹ ಪೌರಕಾರ್ಮಿಕನನ್ನ ಬಲವಂತವಾಗಿ ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟ ಗ್ರಾಪಂ ಅಧ್ಯಕ್ಷೆ ಗೀತಾ ಹಾಗೂ ಪಿಡಿಓ ಆನಂದ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಮೈಸೂರಿನ ಸಮಾಜಕಲ್ಯಾಣ ಇಲಾಖೆ ನಿರ್ದೇಶಕ ಡಿ.ಜಿ.ಗುರುಶಾಂತಪ್ಪ ಮೈಸೂರಿನ ಕೆ.ಆರ್. ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂನ್ 7 ರಂದು ಪೌರಕಾರ್ಮಿಕ ಗಣೇಶ್ ಎಂಬುವವರನ್ನ ಚಾಮುಂಡಿಬೆಟ್ಟದ ಗ್ರಾಪಂ ಅಧ್ಯಕ್ಷೆ ಎಸ್.ಗೀತಾ ಹಾಗೂ ಪಿಡಿಓ ಆನಂದ್ ಬಲವಂತವಾಗಿ ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛಗೊಳಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಗ್ರಾ.ಪಂ ಅಧ್ಯಕ್ಷೆ ಗೀತಾ ನಾವು ಯಾರನ್ನೂ ಬಲವಂತವಾಗಿ ಮ್ಯಾನ್ ಹೋಲ್ ಗೆ ಇಳಿಸಿಲ್ಲ ಎಂದಿದ್ದರು.

ಅಮಾನುತು ಆದೇಶ:
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಪಿಡಿಓ ಆನಂದ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಚಾಮುಂಡಿ ಬೆಟ್ಟ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಗಣೇಶ್ ಎಂಬವರನ್ನು ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛ ಗೊಳಿಸುವ ಕಾರ್ಯ ನಡೆಸಲಾಗಿತ್ತು. ಗಣೇಶ್ ಇಳಿಯಲ್ಲ ಎಂದಾಗ ಕೆಲಸದಿಂದ ತೆಗೆಯುತ್ತೇನೆ ಎಂಬ ಬೆದರಿಕೆಯನ್ನೂ ಹಾಕಿದ್ದರು.
ಘಟನೆಯ ಸಂಪೂರ್ಣ ವಿವರವನ್ನು ಪಡೆದ ಪಿ.ಶಿವಶಂಕರ್ ಪಿಡಿಓ ಆನಂದ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯ. ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ ಪತ್ರ ಬರೆದಿದ್ದು, ಇವರು ಪೌರಕಾರ್ಮಿಕನನ್ನು ನಡೆಸಿಕೊಂಡ ರೀತಿಯನ್ನು ವಿವರಿಸಿದ್ದಾರೆ ಮತ್ತು ಸೂಕ್ತ ಕ್ರಮ ಜರುಗಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಪರಿಶೀಲನೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೌರಕಾರ್ಮಿಕ ಗಣೇಶ್ ನನ್ನನ್ನು ಬಲವಂತವಾಗಿ ಮ್ಯಾನ್ ಹೋಲ್ ಗೆ ಇಳಿಸಲಾಯಿತು. ಮ್ಯಾನ್ ಹೋಲ್ ಗೆ ಇಳಿದು ಸ್ವಚ್ಛಗೊಳಿಸದಿದ್ದರೇ ಕೆಲಸದಿಂದ ವಜಾಗೊಳಿಸುವುದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಪಿಡಿಒ ಆನಂದ್ ನನಗೆ ಬೆದರಿಕೆ ಹಾಕಿದರು. ಹೀಗಾಗಿ ಅನಿವಾರ್ಯವಾಗಿ ಮ್ಯಾನ್ ಹೋಲ್ ಗೆ ಇಳಿದು ಸ್ವಚ್ಛಗೊಳಿಸಿದೆ. ನನಗೆ ಸರಿಯಾಗಿ ಸಂಬಳವನ್ನು ನೀಡುತ್ತಿಲ್ಲ ಎಂದಿದ್ದಾರೆ.












Click it and Unblock the Notifications