ವಿಶ್ವನಾಥ್ ಆಗಮನದಿಂದ ಆನೆ ಬಲ : ಸಾರಾ ಮಹೇಶ್
ಮೈಸೂರು, ಆಗಸ್ಟ್ 7 : ಶಾಸಕ ಹಾಗೂ ಹಿರಿಯ ಮುಖಂಡ ಅಡಗೂರು ಎಚ್.ವಿಶ್ವನಾಥ್ ಅವರನ್ನು ಜಾ.ದಳದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದು ಜಾತ್ಯತೀತ ಜನತಾ ದಳದ ಸಾಮಾಜಿಕ ನ್ಯಾಯ, ಜಾತ್ಯತೀತ ಸ್ವರೂಪವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ಹಿರಿಯ ರಾಜಕಾರಣಿ ಹಾಗೂ ಅನುಭವಿಗಳಾಗಿದ್ದು, ಪಕ್ಷದ ಸಂಘಟನೆಯನ್ನು ಯಶಸ್ವಿಯಾಗಿ ಮಾಡುವ ವಿಶ್ವಾಸವಿದೆ. ಹೀಗಾಗಿ ಪಕ್ಷದ ವರಿಷ್ಠರು ಅವರನ್ನು ನೇಮಿಸಿದ್ದಾರೆ ಎಂದರು.
ವಿಶ್ವನಾಥ್ ಅವರ ನೇಮಕದಿಂದ ಪಕ್ಷದ ಬಲ ವೃದ್ಧಿಯಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮಾಜಗಳು ಜಾ.ದಳವನ್ನು ಬೆಂಬಲಿಸಲಿವೆ. ಇದರಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಹೇಳಿದರು.

ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಕಟಿಸಿದ್ದಾರೆ. ಇದರಲ್ಲಿ ಚಿತ್ರನಗರಿಯೂ ಸೇರಿರುತ್ತದೆ. ಆದರೆ ಕಂದಾಯ ಇಲಾಖೆ ಭೂಮಿಯನ್ನು 30 ವರ್ಷ ಗುತ್ತಿಗೆಗೆ ನೀಡಿ, ಪ್ರವಾಸೋದ್ಯಮ ಇಲಾಖೆಗೆ 93 ಕೋಟಿ ರೂ. ನೀಡುವಂತೆ ತಿಳಿಸಿದೆ. ಹೀಗಾಗಿ ಇದರಲ್ಲಿ ಗೊಂದಲ ಇದೆ ಅಷ್ಟೇ ಎಂದರು.
ರೇಸ್ ಕೋರ್ಸ್ ಗೆ ಗುತ್ತಿಗೆ ನೀಡಿರುವ ಭೂಮಿಗೆ ವಾರ್ಷಿಕ 2 ಲಕ್ಷ ರೂ. ಆಗಿದ್ದು, ಸರ್ಕಾರದ ವತಿಯಿಂದ ನಿರ್ಮಿಸುವ ಚಿತ್ರನಗರಿ ಭೂಮಿಗೆ 93 ಕೋಟಿ ರೂ. ಗುತ್ತಿಗೆ ಹಣ ನಿಗದಿ ಮಾಡಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಗೊಂದಲ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಅವರು ಇದನ್ನು ಸಭೆಯಲ್ಲೇ ಪ್ರಸ್ತಾಪಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು












Click it and Unblock the Notifications