ಮೈಸೂರು-ಕೊಡಗು ಕ್ಷೇತ್ರ:ಬಾಡಿಗೆ ಪ್ರಚಾರಕರನ್ನು ಕೇಳುವವರೇ ಇಲ್ಲ!
ಮೈಸೂರು, ಏಪ್ರಿಲ್ 12: ಲೋಕಸಭಾ ಚುನಾವಣೆಗೆ ಏ. 16ರಂದು ಪ್ರಚಾರಕ್ಕೆ ಕೊನೆಯ ದಿನ. ಬಾಕಿ ಉಳಿದಿರುವುದು ಕೇವಲ 4 ದಿನಗಳು ಮಾತ್ರ. ಪ್ರತಿ ಬಾರಿ ಚುನಾವಣೆ ಬಂದಾಕ್ಷಣ ಪ್ರಚಾರಕ್ಕೆ ಅಣಿಯಾಗುತ್ತಿದ್ದ ಗ್ರಾಮೀಣ ಭಾಗದ ಬಾಡಿಗೆ ಕಾರ್ಯಕರ್ತರಿಗೆ ಈ ಬಾರಿಯ ಲೋಕಸಭೆ ಚುನಾವಣೆ ನಿರಾಸೆ ಮೂಡಿಸಿದೆ. ಕೂಲಿ ಕೆಲಸ ಬಿಟ್ಟು ಪ್ರಚಾರಕ್ಕೆ ಬರುತ್ತಿದ್ದ ಇವರನ್ನು ಈ ಬಾರಿ ಕೇಳುವವರೇ ಇಲ್ಲದಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ವಿಧಾನಸಭೆ, ಲೋಕಸಭೆ ಚುನಾವಣೆ ಬಂತೆಂದರೆ ಬಾಡಿಗೆ ಪ್ರಚಾರಕರಿಗೆ ಎಲ್ಲಿಲ್ಲದ ಬೇಡಿಕೆ. ಹೊಟ್ಟೆಪಾಡಿಗಾಗಿ ಕುತ್ತಿಗೆಗೆ ರಾಜಕೀಯ ಪಕ್ಷಗಳ ಶಾಲು, ಕೈಯಲ್ಲಿ ಒಂದಿಷ್ಟು ಕರಪತ್ರ ಹಿಡಿದುಕೊಂಡು, ಹಳ್ಳಿಗಳಲ್ಲಿ ಸಂಚರಿಸುತ್ತಿದ್ದ ಇಂತಹ ತಂಡಗಳು ಈ ಬಾರಿ ಎಲ್ಲಿಯೂ ಕಾಣಸಿಗುತ್ತಿಲ್ಲ. ಹಳ್ಳಿಗಳಲ್ಲಿ ಪ್ರಚಾರದ ತುರುಸು ಕಾಣುತ್ತಿಲ್ಲ.
ಚುನಾವಣೆ ಬಂತೆಂಬ ಕುರುಹು ಸಹ ಸಿಗುತ್ತಿಲ್ಲ. ಇಲ್ಲವಾದರೆ, ಮನೆಯೆದುರು ಬಂದು ಕದ ತಟ್ಟುವ ಕಾರ್ಯಕರ್ತರನ್ನು ತಪ್ಪಿಸಿಕೊಳ್ಳುವುದೇ ದೊಡ್ಡ ತಲೆಬೇನೆಯಾಗುತ್ತಿತ್ತು. ಯಾಕಾದರೂ ಈ ಚುನಾವಣೆ ಬಂತಪ್ಪಾ, ಬೇಗ ಮುಗಿದರೆ ಸಾಕು ಅನ್ನಿಸುವಷ್ಟು ಕಿರಿಕಿರಿ ಕೊಡುತ್ತಿದ್ದರು.

ಈ ಬಾರಿ ಇವರ ಸುಳಿವೇ ಇಲ್ಲ. ಬಿಜೆಪಿ ಕಾರ್ಯಕರ್ತರು ಒಮ್ಮೆ ಬಂದಿದ್ದು ಬಿಟ್ಟರೆ, ಮತ್ಯಾರೂ ಇನ್ನೂ ತನಕ ಬಂದಿಲ್ಲ ಎನ್ನುತ್ತಾರೆ ಚಾಮುಂಡೇಶ್ವರಿ ಕ್ಷೇತ್ರದ ನಾಗಮ್ಮ. ಚುನಾವಣೆ ಪ್ರಚಾರಕ್ಕೆ ಹೋದರೆ ದಿನಕ್ಕೆ 500, ಊಟ ಸಿಗುತ್ತಿತ್ತು. ಊರೆಲ್ಲ ತಿರುಗುತ್ತಾ ಗುಂಪಾಗಿ ಹೋಗುವುದು ಏನೋ ಖುಷಿ. ಅದಕ್ಕೆಂದೇ ಕೆಲಸ ಬಿಟ್ಟು, ಪ್ರಚಾರಕ್ಕೆ ಹೋಗುತ್ತಿದ್ದೆವು. ಅಲ್ಲದೇ ಚುನಾವಣಾಧಿಕಾರಿಗಳು ಬೇರೆ ಬಿಗಿ ಮಾಡುತ್ತಾರೆ ಯಾರು ಕೇಳುವವರೇ ಇಲ್ಲ. ಹೀಗಾಗಿ ನಮಗೆ ಈ ಬಾರಿ ಚುನಾವಣೆಯ ಖುಷಿ ಸಿಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಯುವಕ.
"ಜೆಡಿಎಸ್-ಕಾಂಗ್ರೆಸ್‌ನವರು ಒಟ್ಟಾಗಿ ಚುನಾವಣೆ ನಡೆಸುವುದಾದರೂ ಕಾಂಗ್ರೆಸ್ ಪಕ್ಷದ ಮುಖಂಡರು ನಮ್ಮನ್ನು ಕರೆಯುತ್ತಿಲ್ಲ. ಅವರ ಕಾರ್ಯಕರ್ತರಿಗೆ ಕೆಲಸವಿಲ್ಲ, ಇನ್ನು ನಮ್ಮನ್ನು ಎಲ್ಲಿ ಕರೆಯುತ್ತಾರೆ. ಅಭ್ಯರ್ಥಿ ಇಲ್ಲದ ಕಾರಣ ಪಕ್ಷಕ್ಕೆ ಅನುದಾನ ಬರುತ್ತಿಲ್ಲ. ಮೈತ್ರಿ ಅಭ್ಯರ್ಥಿ ನೆರವಾದರೆ ಮಾತ್ರ ಅವರ ಕಾರ್ಯಕರ್ತರು ಚುರುಕಾಗಬಹುದು. ಮತದಾನದ ಕೊನೆ ಕ್ಷಣದ ಹಂಚಿಕೆಗಾದರೂ ನಮಗೆ ಕೆಲಸ ಸಿಗಬಹುದೇ ಎಂದು ಎದುರು ನೋಡುತ್ತಿದ್ದೇವೆ" ಎಂದು ಮನದ ಮಾತನ್ನು ಹಂಚಿಕೊಳ್ಳುತ್ತಾರೆ ಹಳ್ಳಿಯ ಜನರು.












Click it and Unblock the Notifications