ವಿದ್ಯಾಮನೋಹರ ತೀರ್ಥ ವಿರುದ್ಧ ಎಷ್ಟೊಂದು ಪ್ರಕರಣ?

ಮೈಸೂರು, ಜುಲೈ 1: ಸೋಸಲೆ ಮಠದ ಶ್ರೀಗಳಾದ ವಿದ್ಯಾಮನೋಹರ ತೀರ್ಥರು ಪೀಠತ್ಯಾಗಕ್ಕೂ ಹಲವು ಕಾರಣಗಳಿವೆ. 2013ರ ಜೂನ್‌ನಲ್ಲಿ ಮಠದ ಬೆಳ್ಳಿ ರಥ ಕಳವಾಗಿದೆ ಎಂದು ಮಠದ ಭಕ್ತ ನರೇಂದ್ರ ತಿ.ನರಸೀಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಗಂಭೀರ ಮತ್ತು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಎಸ್ಪಿ ನಂಜನಗೂಡು ಪಟ್ಟಣ ಠಾಣೆ ಪೊಲೀಸರಿಂದ ತನಿಖೆ ನಡೆಸುವಂತೆ ಆದೇಶ ನೀಡಿದ್ದರು.

ನಂಜನಗೂಡು ವಿಭಾಗದ ಹೆಚ್ಚುವರಿ ಎಸ್ಪಿ ದಿವ್ಯಾ ಸಾರಾ ಥಾಮಸ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಪ್ರಕರಣ ದಾಖಲಾದ ಸಂದರ್ಭದಲ್ಲೇ ಪ್ರಮುಖ ಆರೋಪಿ ವಿದ್ಯಾ ಮನೋಹರ ತೀರ್ಥ ಸ್ವಾಮೀಜಿ ಪೂರ್ವಾಶ್ರಮದ ತಾಯಿ ಶ್ರೀಮತಿ ಮತ್ತು ಶಿಷ್ಯ ಪ್ರಮೋದ್ ರನ್ನು ಬಂಧಿಸಲಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಪೂರ್ವಾಶ್ರಮದ ತಂದೆ ನಿರೀಕ್ಷಣಾ ಜಾಮೀನು ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಲಿಲ್ಲ.

ಮಠದ ಅವ್ಯವಹಾರದ ಬಗ್ಗೆ ಭಕ್ತಾದಿಗಳು ನೀಡಿದ ದೂರನ್ನು ಆಧರಿಸಿ, ವರದಿ ನೀಡುವಂತೆ ಮುಜರಾಯಿ ಇಲಾಖೆಗೆ ಸರಕಾರ ಆದೇಶ ನೀಡಿತ್ತು. ಅಕ್ರಮ ಸಾಬೀತಾಗಿರುವ ಬಗ್ಗೆ ಮುಜರಾಯಿ ಇಲಾಖೆ ವರದಿ ನೀಡಿದ್ದರಿಂದ ಸರಕಾರ ಮಠವನ್ನು ವಶಕ್ಕೆ ಪಡೆದು, ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು.

ಇನ್ನು ಮತ್ತೊಂದು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಮನೋಹರ ಸ್ವಾಮೀಜಿಯನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದರು. ಇಂದು ಬಂಧಿಸಲಾಗಿತ್ತು. ಮಠದ ಆಸ್ತಿಯನ್ನು ಭೋಗ್ಯಕ್ಕೆ ಬಿಡುವ ವಿಚಾರವಾಗಿ ಅಕ್ರಮ ನಡೆದಿದೆ ಎಂದು ಕಡಪ ಮೂಲದ ವ್ಯಕ್ತಿಯೊಬ್ಬರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಠಕ್ಕೆ ಆಗಮಿಸಿದ ಕಡಪದ ಕ್ರೈಂ ಬ್ರ್ಯಾಂಚ್ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿ ಕರೆದೊಯ್ದಿದ್ದರು. ವ್ಯಾಸರಾಜಮಠದ ಈ ಹಿಂದಿನ ಸ್ವಾಮೀಜಿ ವಿದ್ಯಾವಾಚಸ್ಪತಿ ತೀರ್ಥ ಅವರು ಮಠದ ಆಸ್ತಿಯನ್ನು 30 ಲಕ್ಷ ರುಪಾಯಿಗಳಿಗೆ ಭೋಗ್ಯಕ್ಕೆ ಹಾಕಿದ್ದರು. ಅದನ್ನು ನಂತರ ಎರಡನೇ ಅವಧಿಗೆ ನವೀಕರಿಸಲಾಗಿತ್ತು.

Reason behind Vidya Manohara Teertha Vyasaraja mutt peetha quit

ಅವಧಿ ಪೂರ್ಣಗೊಂಡ ನಂತರ ಬೋಗ್ಯಕ್ಕೆ ನೀಡಿದ್ದ 70 ಲಕ್ಷ ರುಪಾಯಿಗಳನ್ನು ಚೆಕ್ ಮೂಲಕ ವಾಪಸ್ ಮಾಡಲಾಗಿತ್ತು. ಆ ಚೆಕ್ ಬೌನ್ಸ್ ಆದ ಕಾರಣ, ಪ್ರಕರಣ ದಾಖಲಾಗಿ, ಸ್ವಾಮೀಜಿಯನ್ನು ಬಂಧಿಸಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಮಠಕ್ಕೆ ಸೇರಿದ ತಲಾ 500 ಗ್ರಾಂ ತೂಕದ ಎರಡು ಚಿನ್ನದ ತಟ್ಟೆಗಳನ್ನು ನಗರದ ದೇವರಾಜ ರಸ್ತೆಯ ಗಿರವಿ ಅಂಗಡಿಯೊಂದರಲ್ಲಿ 2011ರ ಡಿಸೆಂಬರ್ 15ರಂದು ಅಡವಿಟ್ಟು, ಏಳೂವರೆ ಲಕ್ಷ ರುಪಾಯಿಗಳನ್ನು ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಪಡೆದಿದ್ದಾರೆ ಎಂದು ಭಕ್ತರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಂಗಡಿ ಮೇಲೆ ದಾಳಿ ನಡೆಸಿದ ಲಕ್ಷ್ಮೀಪುರಂ ಠಾಣೆ ಪೊಲೀಸರು, ಗಿರವಿ ಇಡಲಾಗಿದ್ದ ಚಿನ್ನದ ತಟ್ಟೆಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಶ್ರೀಗಳ ಪೂರ್ವಾಶ್ರಮದ ತಾಯಿ ಶ್ರೀಮತಿ, ಮಠದ ಅಂದಿನ ಆಡಳಿತಾಧಿಕಾರಿ ನಟರಾಜ್‌ ಹಾಗೂ ಗಿರವಿ ಅಂಗಡಿ ಮಾಲೀಕನನ್ನು ಬಂಧಿಸಿ , ಇವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಅಲ್ಲದೆ, ಮಠದ ಆವರಣದಲ್ಲಿರುವ ವಿದ್ಯಾಪಯೋನಿಧಿ ಮಂದಿರ (ಕಲ್ಯಾಣ ಮಂಟಪ) ನವೀಕರಣ ಹೆಸರಲ್ಲಿ ವಿದ್ಯಾಮನೋಹರ 25 ಲಕ್ಷ ರುಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಠದ ಭಕ್ತರಾದ ನರೇಂದ್ರ, ಪ್ರಹ್ಲಾದ್ ಅವರು 2012 ಮಾರ್ಚ್ 28ರಂದು ಪೊಲೀಸರಿಗೆ ದೂರು ನೀಡಿದ್ದರು.

ಇದಕ್ಕೂ ಮುನ್ನ 2011ರಲ್ಲಿ ಮಠಕ್ಕೆ ಸೇರಿದ್ದ ಚಿನ್ನದ ತಟ್ಟೆಗಳನ್ನು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಫೈನಾನ್ಸ್ ಕಂಪೆನಿಯಲ್ಲಿ ಗಿರವಿ ಇಟ್ಟಿದ್ದರು. ಈ ವೇಳೆಯಲ್ಲೂ ಮಠದ ಭಕ್ತರು ಈ ಕುರಿತು ದೂರು ದಾಖಲಿಸಿದ್ದರು. ಚಿನ್ನದ ತಟ್ಟೆಗಳನ್ನು ಅಡವಿಟ್ಟಿದ್ದ ವಿದ್ಯಾಮನೋಹರ ತೀರ್ಥ ಅವರನ್ನು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, ಚಿನ್ನದ ತಟ್ಟೆಗಳನ್ನು ವಶಪಡಿಸಿಕೊಂಡಿದ್ದರು.

ಇದೇ ವೇಳೆ ತಿರುಮಕೂಡಲು ನರಸೀಪುರದ ವ್ಯಾಸರಾಜ ಮಠಕ್ಕೆ ಸೇರಿರುವ ಯಾವುದೇ ಆಸ್ತಿ, ಚಿನ್ನ, ಬೆಳ್ಳಿ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ಕೋರ್ಟ್ ಆದೇಶಿಸಿತ್ತು.

2004ರಲ್ಲಿ ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಉದ್ಧವ ಆಚಾರ್ ಹಾಗೂ ಶ್ರೀಮತಿ ಅವರ ಪುತ್ರನಾದ ಶರತ್ ಆಚಾರ್ ಎಂಬುವರಿಗೆ ಸನ್ಯಾಸ ದೀಕ್ಷೆ ನೀಡಲಾಗಿತ್ತು. ಸೋಸಲೆ ವ್ಯಾಸರಾಜಮಠದ ವಿದ್ಯಾವಾಚಸ್ಪತಿ ತೀರ್ಥ ಅವರು ತಮ್ಮ ಉತ್ತರಾಧಿಕಾರಿಗೆ ವಿದ್ಯಾಮನೋಹರ ತೀರ್ಥ ಎಂಬ ನಾಮವನ್ನು ನೀಡಿದ್ದರು.

ವಿದ್ಯಾವಾಚಸ್ಪತಿ ತೀರ್ಥರ ಪೂರ್ವಾಶ್ರಮದ ಸಂಬಂಧಿಯೂ ಆಗಿದ್ದ ಶರತ್ ಆಚಾರ್ ಹೀಗೆ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಆಗಿ ಸೋಸಲೆ ಮಠದ ಪೀಠವನ್ನು ಅಲಂಕರಿಸಿದ್ದರು. ಒಟ್ಟಾರೆ ಶ್ರೀಗಳ ಮೇಲೆ ಒಂದಲ್ಲ ಒಂದು ಆಪಾದನೆ ಕೇಳಿಬಂದ ಹಿನ್ನೆಲೆ ಅವರು ಪೀಠತ್ಯಾಗ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+