ಮೈಸೂರು ವಿವಿಯ ಪ್ರೊ. ಎಚ್. ನಾಗರಾಜ್ ಅಮಾನತು
ಮೈಸೂರು, ಮೇ 06; ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಡಿ ಬಂಧಿತರಾಗಿರುವ ಮಾನಸ ಗಂಗೋತ್ರಿಯ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ನಾಗರಾಜ್ ಅಮಾನತುಗೊಳಿಸಲಾಗಿದೆ.
ಶುಕ್ರವಾರ ಮೈಸೂರು ವಿಶ್ವವಿದ್ಯಾಲಯ ಈ ಕುರಿತು ಆದೇಶ ಹೊರಡಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಸೌಮ್ಯ ಪ್ರೊ. ಎಚ್. ನಾಗರಾಜ್ ಅವರ ಶಿಷ್ಯೆ.
ಇವರ ಮಾರ್ಗದರ್ಶನದಲ್ಲೇ ಸೌಮ್ಯ ಪಿಡಿಎ (ಪೋಸ್ಟ್ ಡಾಕ್ಟರೇಟ್ ಫೆಲೋ) ಮಾಡುತ್ತಿದ್ದರು. ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ದಿನ ಪ್ರೊ.ನಾಗರಾಜ್ ಅವರ ಮೊಬೈಲ್‌ನಿಂದ 18 ಪ್ರಶ್ನೆಗಳು ಸೌಮ್ಯ ಮೊಬೈಲ್‌ಗೆ ಬಂದಿತ್ತು.

ಇದರಲ್ಲಿ 11 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿತ್ತು. ಸೌಮ್ಯ ತನಗೆ ಬಂದ ಪ್ರಶ್ನೆಗಳನ್ನು ತನ್ನ ಸ್ನೇಹಿತೆಗೂ ಶೇರ್ ಮಾಡಿದ್ದರು. ನಂತರ ಸೌಮ್ಯರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಪ್ರೊ. ನಾಗರಾಜ್ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.
ಸದ್ಯ ಬಂಧಿತ ಪ್ರೊ. ನಾಗರಾಜ್ ಪ್ರಶ್ನೆ ಪತ್ರಿಕೆ ಸಿದ್ಧತಾ ಸಮಿತಿಯಲ್ಲಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ವಿವಿ ಈ ಹಿನ್ನಲೆಯಲ್ಲಿ ಪ್ರೊ. ನಾಗರಾಜ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ)ರಾಗಿ ಪ್ರೊ. ಎಚ್. ನಾಗರಾಜ್ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಕುಲಸಚಿವ ಹುದ್ದೆಯಿಂದಲೂ ಬಿಡುಗಡೆಗೊಳಿಸಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ನಾಗರಾಜ್‌ರನ್ನು ಏಪ್ರಿಲ್ 27ರಂದು ಬಂಧಿಸಿದ್ದರು. ಪೊಲೀಸರು ಪ್ರೊಫೆಸರ್ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications