Mysuru Dasara 2024: ಚಾಮುಂಡಿ ಬೆಟ್ಟಕ್ಕೆ ಇಂದು ಸಾರ್ವಜನಿಕರ ಪ್ರವೇಶವಿಲ್ಲ, ಯಾಕೆ?
ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಶುರುವಾಗಿದೆ. ದಸರಾ ಎಂದ ಕೂಡಲೇ ಇಲ್ಲಿನ ಚಾಮುಂಡಿ ಬೆಟ್ಟದಲ್ಲೂ ಉತ್ಸವದ ಕಳೆಗಟ್ಟಿರುತ್ತದೆ. ಇಂದು ಭಾನುವಾರ ಆಗಿರುವುದರಿಂದ ನೀವೇನಾದರೂ ಚಾಮುಂಡಿ ಬೆಟ್ಟಕ್ಕೆ ಹೋಗೋಣ ಎಂದುಕೊಂಡಿದ್ದರೆ, ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ. ಏಕೆಂದರೆ ಇಂದು ಬೆಟ್ಟದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಹೌದು ಇಂದು ಚಾಮುಂಡಿ ಬೆಟ್ಟದಲ್ಲಿ ಮಹಿಷ ಮಂಡಲೋತ್ಸವ ಆಚರಣೆ ನಡೆಯಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈಂದು ಮಧ್ಯಾಹ್ನದವರೆಗೆ ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಕೂಡ ಇರುವುದಿಲ್ಲ ಎಂದು ವರದಿಯಾಗಿದೆ.

ಮಹಿಷಾ ದಸರಾ ಆಚರಣೆ ಸಮಿತಿಯಿಂದ ಮೈಸೂರಲ್ಲಿ ಮಹಿಷ ದಸರಾ ಆಚರಣೆ ಮಾಡಲು ಭರ್ಜರಿ ಸಿದ್ಧತೆ ನಡೆದಿದೆ. ಆದರೆ, ಈ ಆಚರಣೆಗೆ ಬಿಜೆಪಿ ನಾಯಕ ಪ್ರತಾಪ್ ಸಿಂಹ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಷನಿಗೆ ಪುಷ್ಪಾರ್ಚನೆ ಮಾಡುವ ವಿಚಾರವಾಗಿ ಕಿಡಿಕಾರಿರುವ ಅವರು, ಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಚನೆ ನಡೆಸುತ್ತೀರಾ?! ಬನ್ನಿ, ಹಾಗಾದರೆ ನೋಡೇ ಬಿಡೋಣ ಎಂದು ಸವಾಲು ಕೂಡ ಹಾಕಿದ್ದಾರೆ.
ಮಹಿಷನೆಂಬ ದೆವ್ವವನ್ನು ದೇವರು ಮಾಡಲು, ದೇವಿಯನ್ನು ದೆವ್ವ ಮಾಡಲು ಇವರು ಹೊರಟಿದ್ದಾರೆ? ಇನ್ನೊಬ್ಬರ ನಂಬಿಕೆಗೆ, ಭಾವನೆಗೆ ನೋವುಂಟು ಮಾಡಲು ಸಂವಿಧಾನದ ಯಾವ ಭಾಗದಲ್ಲಿ ಅವಕಾಶವಿದೆ? ಮಹಿಷನ ಫೋಟೋವನ್ನು ಮನೆಯಲ್ಲಿಟ್ಟುಕೊಂಡು, ನಿನ್ನಂಥ ಮಗನನ್ನು ಕೊಡು ಎಂದು ನೀವು ನಿತ್ಯ ಆರಾಧನೆ ಮಾಡಲು ನಮ್ಮ ತಕರಾರು ಏನೂ ಇಲ್ಲ! ಎಂದು ಮೈಸೂರು ಜಿಲ್ಲಾಡಳಿತದ ವಿರುದ್ಧ ಸಿಡಿದಿದ್ದಾರೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಒಂದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಇಂದು ಏನಾದರೂ ತಾಯಿ ಚಾಮುಂಡಿಗೆ ಅವಮಾನ ಮಾಡುವಂತಹ ಕೆಲಸ ನಡೆದರೆ, ಯಾರಾದರೂ ಮಹಿಷಾಸುರನಿಗೆ ಹಾರ ಹಾಕಲು ಮುಂದಾದರೆ, ನಾವು ದಸರಾ ಉದ್ಘಾಟನೆ ದಿನವೇ ದೊಡ್ಡ ಚಳುವಳಿ ಹಮ್ಮಿಕೊಳ್ಳುತ್ತೇವೆ. ಅಂದು ಉದ್ಘಾಟನೆಗೂ ಪ್ರತಿರೋಧವೊಡ್ಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂವಿಧಾನದಲ್ಲಿ ಎಲ್ಲದಕ್ಕೂ ಅವಕಾಶವಿದೆ ಎಂದು ಸಚಿವ ಮಹದೇವಪ್ಪ ಹೇಳುತ್ತಾರೆ. ಸಂವಿಧಾನದಲ್ಲಿ ಎಲ್ಲೂ ಸಹ ಮತ್ತೊಬ್ಬ ಧರ್ಮೀಯನಿಗೆ ನೋವುಂಟು ಮಾಡುವ ಅವಕಾಶವಿಲ್ಲ. ಅದೇ ರೀತಿ ಮಹಿಷಾಸುರನನ್ನು ಆರಾಧಿಸುವ ನಿಟ್ಟಿನಲ್ಲಿ ತಾಯಿ ಚಾಮುಂಡಿ ಭಕ್ತರಿಗೆ ನೋವುಂಟು ಮಾಡುವ ಕೆಲಸ ಮಾಡುವಂತಿಲ್ಲ. ಅನ್ಯರ ಭಾವನೆಗಳಿಗೆ ನೋವುಂಟು ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವೇ ನೀಡಿಲ್ಲ. ಮೊದಲು ಅವರೆಲ್ಲ ಸಂವಿಧಾನವನ್ನು ಚೆನ್ನಾಗಿ ಓದಲಿ ಎಂದು ತಿರುಗೇಟು ನೀಡಿದ್ದಾರೆ.
ಜಿಲ್ಲಾಡಳಿತ ನಮಗೆ ಭರವಸೆ ನೀಡಿರುವುದರಿಂದ ಚಾಮುಂಡಿ ಬೆಟ್ಟ ಚಲೋವನ್ನು ತಾತ್ಕಾಲಿಕವಾಘಿ ತಡೆ ಹಿಡಿದಿದ್ದೇವೆ. ನಮ್ಮ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಮತ್ತೊಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಮಹಿಷ ಮಂಡಲೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ್ದಾರೆ. ಯಾರು ಬೇಕಾದರೂ ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ ಎಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂದಿದ್ದಾರೆ. ಈ ಮೂಲಕ ಅವರು ಮಹಿಷ ದಸರಾ ಆಚರಣೆಗೆ ಪರೋಕ್ಷವಾಗಿ ಸಹಮತ ಸೂಚಿಸಿದ್ದಾರೆ. ಈ ವಿರೋಧದ ನಡುವೆಯೂ ಮಹಿಷನಿಗೆ ಪುಷ್ಪಾರ್ಚನೆ ನಡೆಯಲಿದೆಯಾ ಎನ್ನುವುದೇ ಸದ್ಯದ ಅನುಮಾನ.












Click it and Unblock the Notifications