ಖರ್ಗೆ ರಾಜೀನಾಮೆ ನೀಡಬೇಕು : ಬಿಜೆಪಿ ಯುವಮೋರ್ಚಾ ಒತ್ತಾಯ
ಇತ್ತೀಚೆಗೆ ಲೋಕಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ; ಕಾಂಗ್ರೆಸ್ ನಿಂದ ಗಾಂಧಿಯಂಥವರು ದೇಶಕ್ಕಾಗಿ ಬಲಿದಾನಗೈದಿದ್ದಾರೆ, ಬಿಜೆಪಿಯಿಂದ ಒಂದು ನಾಯಿಯೂ ಬಲಿದಾನಗೈದಿಲ್ಲ ಎಂದಿದ್ದರು.
ಮೈಸೂರು, ಫೆಬ್ರವರಿ 8 : ಈ ದೇಶಕ್ಕಾಗಿ ಬಿಜೆಪಿಯ ಯಾವೊಂದು ನಾಯಿಯೂ ಬಲಿದಾನ ಮಾಡಿಲ್ಲ ಎಂದು ಲೋಕಸಭೆಯ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಮ್ಮ ಸಾಕು ನಾಯಿಗಳೊಂದಿಗೆ ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್ ಮಾತನಾಡಿ ನಾಯಿಗಳಿಗಾದರೂ ನಿಯತ್ತಿದೆ. ನಾಯಿಯನ್ನು ಪತ್ತೆದಾರಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಸಿಯಾಚಿನ್ ನಲ್ಲಿ ಹಿಮದ ಒಳಗೆ ಸಿಲುಕಿದ ಯೋಧನನ್ನು ಪತ್ತೆ ಮಾಡಿದ್ದೇ ನಾಯಿಗಳು. ನಾಯಿಗಳ ಬಗ್ಗೆ ಕೀಳಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದಲ್ಲದೆ, ನಾಯಿಗಿರುವ ನಿಯತ್ತು ನಿಮಗಿಲ್ಲ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಸೋಮಶೇಖರ್, ದೇವರಾಜ್, ಬದ್ರೀಶ್, ಪರಶಿವಮೂರ್ತಿ, ಕೆ.ಜಿ.ರಮೇಶ್, ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications