ಹೆಣ್ಣು ಮಕ್ಕಳ ಹಸಿವು ನೀಗಿಸುವ 'ಸಂತೃಪ್ತಿ': ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ವಿನೂತನ ಕಾರ್ಯ
ಮೈಸೂರು, ಜನವರಿ 21: ಕಾಲೇಜಿನ ವಿದ್ಯಾರ್ಥಿಗಳು ಹಸಿವಿನಿಂದ ಬಳಸಬಾರದು ಎಂದು ಉದ್ದೇಶದಿಂದ ಪ್ರಾಂಶುಪಾಲರು ಹಾಗೂ ಅಧ್ಯಾಪಕರು ತಮ್ಮ ಸಂಬಳದ ಸ್ವಲ್ಪ ಭಾಗವನ್ನು ವಿನಿಯೋಗಿಸಿ ಉಚಿತ ದಾಸೋಹ ಮಾಡುತ್ತಿರುವ ಅಪರೂಪದ ಸಂಗತಿ ಮೈಸೂರಿನಲ್ಲಿ ನಡೆಯುತ್ತಿದೆ.
ನಗರದ ಮಹಾರಾಣಿ ವಿಜ್ಞಾನ ಕಾಲೇಜಿನ ಹೆಣ್ಣು ಮಕ್ಕಳು ಬೆಳಗ್ಗೆ ಲ್ಯಾಬ್ ತರಗತಿಗೆ 8 ಗಂಟೆಗೆ ಕಾಲೇಜಿಗೆ ಬರಬೇಕು. ಹಾಗಾಗಿ ಹೆಚ್ಚಿನ ಮಂದಿ ತಿಂಡಿ ತಿನ್ನದೆ, ಊಟ ಮಾಡದೆ ಹಾಗೆ ತರಗತಿಗೆ ಬರುತ್ತಿದ್ದರು. ಎಷ್ಟೋ ವಿದ್ಯಾರ್ಥಿನಿಯರು ಹಸಿವಿನಿಂದ ಪ್ರಯೋಗಾಲಯದಲ್ಲೇ ತಲೆ ಸುತ್ತಿ ಬಿದ್ದಿದ್ದಾರೆ. ತುಂಬಾ ಹೆಣ್ಣು ಮಕ್ಕಳಿಗೆ ಕ್ಯಾಂಟೀನ್ ದುಡ್ಡು ಕೊಟ್ಟು ಊಟ ಮಾಡದಷ್ಟು ಆರ್ಥಿಕ ಸಂಕಷ್ಟ. ಹಾಗಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ ಅವರ ಶ್ರಮ ಫಲವಾಗಿ ಇಂದು 100ಕ್ಕೂ ಹೆಚ್ಚು ಮಕ್ಕಳು ಉಚಿತವಾಗಿ ಮಧ್ಯಾಹ್ನದ ಊಟ ಮಾಡುತ್ತಿದ್ದಾರೆ.
ಏನಿದು ಸಂತೃಪ್ತಿ..?
ಶೈಕ್ಷಣಿಕ ಕೇಂದ್ರವಾಗಿರುವ ಮೈಸೂರಿಗೆ ದೂರದ ಊರುಗಳಿಂದ ಸಾಕಷ್ಟು ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಹಲವು ಮಕ್ಕಳು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್, ಬಿಸಿಎಂ, ಸಮುದಾಯ ಅಥವಾ ಕಾಲೇಜು ಹಾಸ್ಟೆಲ್‌ಗಳಲ್ಲಿ ವಾಸ್ಯವ್ಯ ಹೂಡಿ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುತ್ತಾರೆ. ಆದರೆ ಯಾವುದೇ ಹಾಸ್ಟೆಲ್‌ನಲ್ಲೂ ಉಳಿಯದೆ ನಿತ್ಯ 70-80 ಕಿ.ಮೀ. ದೂರದಿಂದ ಓಡಾಡುವ ವಿದ್ಯಾರ್ಥಿಗಳಿಗೆ ಸಹಜವಾಗಿ ಹಲವು ಸಮಸ್ಯೆಗಳಿವೆ. ಅದರಲ್ಲೂ ಹಸಿವು ಒಂದು ಸಾಮಾಜಿಕ ಸಮಸ್ಯೆ. ಇದನ್ನು ಮನಗಂಡ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರು ತಮ್ಮ ಸಂಬಳದಲ್ಲಿ ಸ್ವಲ್ಪ ಹಣ ವಿನಿಯೋಗಿಸಿ ಇದೀಗ ಸಂತೃಪ್ತಿ ಎಂಬ ಹೆಸರಿನಲ್ಲಿ ಮಕ್ಕಳಿಗಾಗಿ ಉಚಿತ ಆಹಾರ ಪೂರೈಸುತ್ತಿದ್ದಾರೆ.

ಈ ಬಗ್ಗೆ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ ರವಿ ಮಾತನಾಡಿದ್ದು"ಹಸಿವಿನ ಸಂಕಟದಿಂದ ಪಾರಾಗಲು ಉಚಿತ ಆಹಾರ ಪಡೆಯಲು ವಿದ್ಯಾರ್ಥಿನಿಯರು ಮೊದಲು ಒಪ್ಪಲಿಲ್ಲ. ಬೆಳಗ್ಗೆ ಬೇಗ ಬರಬೇಕಿರುವುದರಿಂದ ಮನೆಯಲ್ಲಿ ಉಪಾಹಾರ ತಯಾರಿ ಸಾಧ್ಯವಾಗದು. ಇತ್ತ ನಿತ್ಯ 30-50 ರೂಪಾಯಿ ವ್ಯಯಿಸಿ ಕ್ಯಾಂಟಿನ್ ಗಳಲ್ಲಿ ಊಟ ಮಾಡುವುದೂ ಕಷ್ಟಸಾಧ್ಯ. ಹಾಗೆಂದ ಮಾತ್ರಕ್ಕೆ ನಾವ್ಯಾಕೆ ಉಚಿತ ಆಹಾರ ಪಡೆಯಬೇಕು, ಸಂಜೆ ಮನೆಗೆ ಹೋಗಿ ಊಟ ಮಾಡಿದರೆ ಆಯಿತು ಎಂಬ ಭಾವನೆಯಿಂದ ವಿದ್ಯಾರ್ಥಿನಿಯರು ಹಿಂದೇಟು ಹಾಕಿದರು. ಆಗ ಅವರೊಂದಿಗೆ ಸಮಾಲೋಚನೆ ನಡೆಸಿ ನಾವೆಲ್ಲಾ ಒಂದೇ ಕುಟುಂಬದವರು, ಇದು ನಮ್ಮ ಮನೆ ಎಂದು ಭಾವಿಸಿ ಊಟ ಮಾಡಿ, ಕಲಿಕೆ ಆಸಕ್ತಿಯನ್ನು ಹಸಿವು ನುಂಗುವುದು ಬೇಡ ಎಂದೆಲ್ಲಾ ಅವರಿಗೆ ಮನವರಿಕೆ ಮಾಡಿಕೊಟ್ಟೆ" ಎಂದು ಹೇಳಿದರು.
ಮಕ್ಕಳಿಗೆ ಊಟ ವಿತರಣೆಗೆ ಪ್ರಾಂಶುಪಾಲರು ಸಮಿತಿ ರಚನೆ ಮಾಡಿದ್ದಾರೆ. ಮಧ್ಯಾಹ್ನದ ಊಟದ ಅಗತ್ಯವಿರುವ ವಿದ್ಯಾರ್ಥಿನಿಯರನ್ನು ಸಮಿತಿ ಯೊಂದರ ಮೂಲಕ ಗುರುತಿಸಿ, ಪಟ್ಟಿಮಾಡಲಾಗಿದೆ. ಅವರಿಗೆ ನಿತ್ಯ ಟೋಕನ್ ವಿತರಿಸಲಾಗುತ್ತದೆ. ಮಧ್ಯಾಹ್ನ ಕಾಲೇಜು ಆವರಣದಲ್ಲಿ ಇರುವ ಮೊಬೈಲ್ ಕ್ಯಾಂಟಿನ್‌ಗೆ ಟೋಕನ್ ನೀಡಿ ಊಟ ಪಡೆಯಬಹುದು. ಅನ್ನಸಾಂಬಾರ್, ಬಾತು, ಪುಳಿಯೋಗರೆ, ವೆಜ್ ಪಲಾವ್ ಹೀಗೆ ಒಂದೊಂದು ದಿನ ಒಂದು ರೀತಿಯ ಆಹಾರ ವನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ. ಸದ್ಯ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು 'ಸಂತೃಪ್ತಿ'ಯಾಗಿ ಊಟ ಮಾಡುತ್ತಿದ್ದಾರೆ.
"ನಾನು ಎಚ್.ಡಿ.ಕೋಟೆ ಗಡಿ ಭಾಗದಿಂದ ಕಾಲೇಜಿಗೆ ಬರುತ್ತಿದ್ದೆ. ಅಪ್ಪ ಅಮ್ಮ ಬೆಳಗ್ಗೆಯೇ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಲ್ಯಾಬ್ ತರಗತಿ ದಿನ ಊಟ ತರಲು ಆಗುವುದಿಲ್ಲ. ಇದೀಗ ಕಾಲೇಜಿನಲ್ಲೇ ಉಚಿತವಾಗಿ ಊಡ ನೀಡುತ್ತಿದ್ದಾರೆ. ಇದರಿಂದ ಕಲಿಕೆ ಬಗ್ಗೆ ಆಸಕ್ತಿ ಇರುವ ಸಾಕಷ್ಟು ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಸಹಕಾರಿಯಾಗುತ್ತದೆ" ಎಂದು ವಿದ್ಯಾರ್ಥಿನಿ ಸಂತಸ ಹಂಚಿಕೊಂಡಿದ್ದಾರೆ.












Click it and Unblock the Notifications